ಇಂದು(ಮಾ.13) ಬೆಳ್ಳಾರೆ ಪೊಲೀಸ್ ಠಾಣೆಯ ನೂತನ‌ ಕಟ್ಟಡದ ಉದ್ಘಾಟನೆ | 1.32 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ

0

ವರದಿ: ಪ್ರವೀಣ್ ಚೆನ್ನಾವರ 

ಬೆಳ್ಳಾರೆ : ಬೆಳ್ಳಾರೆ ಪೊಲೀಸ್‌ ಠಾಣೆಯ ಹೊಸ ಕಟ್ಟಡ 1.32 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಮಾ.13ರಂದು ಉದ್ಘಾಟನೆ ನಡೆಯಲಿದೆ.

ಬೆಳ್ಳಾರೆ ಪೊಲೀಸ್‌ ಠಾಣೆ ಮೊದಲು ಸುಳ್ಯ ಪೊಲೀಸ್‌ ಠಾಣೆಯ ಹೊರ ಠಾಣೆಯಾಗಿ ಕಾರ್ಯನಿರ್ವಹಿಸುತ್ತಿತ್ತು. 2016ರ ಆ. 15ರಿಂದ ಪೂರ್ಣ ಪ್ರಮಾಣದ ಪೊಲೀಸ್‌ ಠಾಣೆಯಾಗಿ ಮೇಲ್ದರ್ಜೆಗೇರಿತ್ತು. 

ಠಾಣೆಯ ಮೊದಲ ಎಸ್‌ಐಯಾಗಿ ಎಂ.ವಿ. ಚೆಲುವಯ್ಯ ಅವರು ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಎಸ್‌ಐ ಯಾಗಿ ಸುಹಾಸ್‌ ಆರ್‌., ಕ್ರೈಂ ಎಸ್‌ಐಯಾಗಿ ಶಿವ ಕುಮಾರ್ ಎಸ್.ಆರ್.ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬೆಳ್ಳಾರೆ ಪೊಲೀಸ್‌ ಠಾಣೆಯ ನೂತನ ಠಾಣಾ ಕಟ್ಟಡ ಈಗಿರುವ ಪೊಲೀಸ್‌ ಠಾಣೆಯಿಂದ ಅಲ್ಪ ದೂರದಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಬಳಿಯ ಪೊಲೀಸ್‌ ಇಲಾಖೆಗೆ ಸೇರಿದ ಸ್ವಂತ ಜಾಗದ 0.70 ಎಕ್ರೆಯಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯ 1.32 ಕೋ. ರೂ. ಅನುದಾನದಲ್ಲಿ ಕಾಮಗಾರಿ ನಡೆಸಲಾಗಿದೆ.

21 ಗ್ರಾಮಗಳ ವ್ಯಾಪ್ತಿ

ಬೆಳ್ಳಾರೆ ಸುಳ್ಯ ತಾ|ನ ಪ್ರಮುಖ ವ್ಯಾವಹಾರಿಕ ಕೇಂದ್ರವಾಗಿದ್ದು, ಮುಂದಕ್ಕೆ ಹೋಬಳಿ ಕೇಂದ್ರವಾಗುವ ನಿರೀಕ್ಷೆಯೂ ಇದೆ.

ಸುಳ್ಯ ಪೊಲೀಸ್‌ ವೃತ್ತ ವ್ಯಾಪ್ತಿಯಲ್ಲಿರುವ ಬೆಳ್ಳಾರೆ ಪೊಲೀಸ್‌ ಠಾಣೆ ಸುಳ್ಯ ಹಾಗೂ ಕಡಬ ತಾ|ನ ಸವಣೂರು, ಕುದ್ಮಾರು, ಬೆಳಂದೂರು, ಕಾಣಿಯೂರು, ಮುರುಳ್ಯ, ಎಡಮಂಗಲ, ಎಣ್ಮೂರು, ಕಲ್ಮಡ್ಕ, ಮುಪ್ಪೇರಿಯ, ಬಾಳಿಲ, ಕೊಡಿಯಾಲ, ಬೆಳ್ಳಾರೆ, ಪಾಲ್ತಾಡಿ, ಕೊಳ್ತಿಗೆ, ಐವರ್ನಾಡು, ಅಮರಪಡ್ನೂರು, ಅಮರಮುಡ್ನೂರು, ಕಳಂಜ, ಪೆರುವಾಜೆ, ಪುಣ್ಚಪ್ಪಾಡಿ, ಕಾಯ್ಮಣ ಸೇರಿದಂತೆ ಒಟ್ಟು 21 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದೆ. 

ಕ್ವಾಟ್ರರ್ಸ್‌ಗೆ ಬೇಡಿಕೆ

ಪ್ರಸ್ತುತ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಎರಡು ಎಸ್‌ಐ ಹುದ್ದೆ ಭರ್ತಿಯಾಗಿದ್ದು, 30 ಮಂದಿ ಸಿಬಂದಿ ಇದ್ದಾರೆ. ಪೊಲೀಸರಿಗೆ ವಸತಿ ನಿರ್ಮಾಣಕ್ಕೆ ಜಾಗ ಇದ್ದು ಕಟ್ಟಡ ನಿರ್ಮಾಣ ಆಗಬೇಕಿದೆ.

ಉದ್ಘಾಟನೆ

ನೂತನ ಕಟ್ಟಡವನ್ನು ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸುವರು. ಸಚಿವರಾದ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದು,ಗೃಹ ಸಚಿವ ಅರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here