ಹಣ, ಅಂತಸ್ತು ತಾತ್ಕಾಲಿಕ, ಪರಿಶುದ್ಧ ಜೀವನವೇ ಶಾಶ್ವತ-ನೌಫಲ್ ಸಖಾಫಿ
ಪುತ್ತೂರು: ಮರಣ ನಮ್ಮ ಬೆನ್ನ ಹಿಂದೆ ಹಿಂಬಾಲಿಸುತ್ತಿದ್ದು ಇಲ್ಲಿ ಯಾರು ಕೂಡಾ ಶಾಶ್ವತವಾಗಿ ಉಳಿಯುವವರಲ್ಲ, ಭೂಮಿಯ ಮೇಲಿನ ಸಣ್ಣ ಅವಧಿಯ ಜೀವನವನ್ನು ಸನ್ಮಾರ್ಗದ ಹಾದಿಯಲ್ಲಿ ನಡೆಸುವ ಮೂಲಕ ಸಜ್ಜನರಾಗಿ ಬದುಕಲು ಪ್ರತಿಯೋರ್ವರೂ ಪ್ರಯತ್ನಿಸಬೇಕು ಎಂದು ಪ್ರಭಾಷಣಗಾರ ನೌಫಲ್ ಸಖಾಫಿ ಕಳಸ ಹೇಳಿದರು.
ಅವರು ಮಾ.11 ರಂದು ಈಶ್ವರಮಂಗಲ ಯಾಸೀನ್ ನಗರದಲ್ಲಿ ನಡೆದ ಈಶ್ವರಮಂಗಲ ಮಖಾಂ ಉರೂಸ್ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ನಡೆಸಿದರು.
ಹಣ, ಆಸ್ತಿ, ಅಂತಸ್ತು ಎಲ್ಲವೂ ನಮಗೆ ಶಾಶ್ವತವಲ್ಲ, ಪರಿಶುದ್ದ ಇಸ್ಲಾಂ ಕಲ್ಪಿಸಿದ ರೀತಿಯ ಜೀವನ ವಿಧಾನ ನಮ್ಮದಾದರೆ ಮಾತ್ರ ನಮ್ಮ ಬದುಕು ಅರ್ಥಪೂರ್ಣವಾಗಲು ಸಾಧ್ಯ ಎಂದು ಅವರು ಹೇಳಿದರು.
ಉದ್ಘಾಟಿಸಿದ ಈಶ್ವರಮಂಗಲ ಎಂಜೆಎಂ ಖತೀಬ್ ಸಯ್ಯದ್ ಎನ್‌ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಮಾತನಾಡಿ ದಾನಕ್ಕೆ ಇಸ್ಲಾಂ ವಿಶೇಷ ಪ್ರಾಧಾನ್ಯತೆ ನೀಡಿದ್ದು ದಾನ ಮಾಡುವ ಪ್ರವೃತ್ತಿಯುಳ್ಳವರು ಭಾಗ್ಯವಂತರಾಗಿದ್ದಾರೆ. ದಾನ ಮಾಡುವುದರಿಂದ ನಮ್ಮ ಸಂಪತ್ತು ಕಡಿಮೆಯಾಗುವುದಿಲ್ಲ, ಅಲ್ಲಾಹು ನೀಡಿದ ಸಂಪತ್ತಿನಲ್ಲಿ ಅಲ್ಪವನ್ನಾದರೂ ಅಲ್ಲಾಹನ ಹಾದಿಯಲ್ಲಿ ವ್ಯಯಿಸಿದರೆ ಅಂತವರ ಸಂಪತ್ತಿನಲ್ಲಿ ಅಲ್ಲಾಹು ಬರ್ಕತ್ ಪ್ರಾಪ್ತಿ ಮಾಡುತ್ತಾನೆ ಎಂದು ಹೇಳಿದರು.
ಸನ್ಮಾನ:
ಈಶ್ವರಮಂಗಲ ಎಂಜೆಎಂ ಖತೀಬ್ ಸಯ್ಯದ್ ಎನ್‌ಪಿಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿಯವರನ್ನು ಹಾಗೂ ದಫ್ ಉಸ್ತಾದ್ ಇಬ್ರಾಹಿಂ ಸಹದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಯ್ಯದ್ ಮಹ್‌ಮೂದ್ ಕೋಯ ತಂಙಳ್ ರಾಮಂದಳಿ ದುವಾಶೀರ್ವಚನ ನೀಡಿದರು.
ಉರೂಸ್ ಕಮಿಟಿ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶಿಹಾಬುದ್ದೀನ್ ಮುಸ್ಲಿಯಾರ್ ಈಶ್ವರಮಂಗಲ, ಈಶ್ವರಮಂಗಲ ಜಮಾಅತ್ ಕಮಿಟಿ ಅಧ್ಯಕ್ಷ ಟಿ.ಎ ಅಬ್ದುಲ್ ಖಾದರ್ ಹಾಜಿ, ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಶಂಸುದ್ದೀನ್ ದಾರಿಮಿ, ಹಂಝ ಉಸ್ತಾದ್, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಇಬ್ರಾಹಿಂ, ಹನೀಫ್ ಹಾಜಿ ಜನತಾ, ಕೆ.ಎಂ ಹಸನ್ ಅಬುದಾಭಿ, ಆದಂ ಹಾಜಿ ಗೋಲ್ಡ್ ಬಜಾರ್, ಹಸೈನಾರ್ ಹಾಜಿ ತೈವಳಪ್ಪು, ನಿಝಾರ್ ಹಾಜಿ ಜನತಾ, ಅಬ್ದುಲ್ ಖಾದರ್ ಹಾಜಿ ಸಿಎಚ್, ಹಮೀದ್ ನೆಟ್ಟಣಿಗೆ, ಜಮಾಅತ್ ಕಾರ್ಯದರ್ಶಿ ಕೆ.ಎಂ ಮುಹಮ್ಮದ್, ಖಾದರ್, ಬಾತಿಷಾ ಆಬ್ಕೋ ಗೋಲ್ಡ್ ಉಪಸ್ಥಿತರಿದ್ದರು. ಬಶೀರ್ ವಹಬಿ ಈಶ್ವರಮಂಗಲ ಸ್ವಾಗತಿಸಿದರು.
ಉರೂಸ್ ಕಮಿಟಿ ಅಧ್ಯಕ್ಷರಾದ ಮುಸ್ತಫಾ ಮಿನಿ, ಅಬು ಎ.ಎಚ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಜಮಾಅತರು ಮತ್ತು ಉರೂಸ್ ಕಮಿಟಿಯವರು ಸಹಕರಿಸಿದರು.