ಪುತ್ತೂರು:ಪುಣಚ ಗ್ರಾಮದಲ್ಲಿರುವ ಕೃಷಿಕರು ಹಲವು ದಶಕಗಳಿಂದ ಅನುಭೋಗ ಮಾಡುತ್ತಿರುವ ಪಟ್ಟಾ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಯವರು ತೊಂದರೆ ನೀಡುತ್ತಿದ್ದು, ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ಸಂಚಾಲಕ ರೂಪೇಶ್ ರೈ ಅಲಿಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸುಮಾರು ಏಳೆಂಟು ಕುಟುಂಬಗಳು 1968ರಿಂದಲೇ ಅರಣ್ಯ ಇಲಾಖೆಯಿಂದ ತೊಂದರೆ ಎದುರಿಸುತ್ತಿದ್ದಾರೆ .ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಅಲ್ಲಿನ ಕೃಷಿಕರು ಹಲವು ದಶಕಗಳಿಂದ ಪಟ್ಟಾ ಜಾಗದಲ್ಲಿ ಕೃಷಿ ಮಾಡಿ ಬದುಕುತ್ತಿದ್ದಾರೆ.ಆದರೆ ಅರಣ್ಯ ಇಲಾಖೆ ಅಧಿಕಾರಿಗಳು 1967ರಲ್ಲಿ ತಾವು ಗುಂಪೆ ಹಾಕಿದ್ದೇವೆ ಎಂದು ಹೇಳುತ್ತಾ ಕಿರುಕುಳ ನೀಡುತ್ತಿದ್ದಾರೆ. ಈ ಕಾರಣದಿಂದ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯವರು ಜಂಟಿ ಸರ್ವೆ ಮಾಡಿ ಈ ಸಮಸ್ಯೆಗೆ ಪರಿಹಾರ ಕೊಡುವಂತೆ ನಾವು ಜಿಲ್ಲಾಧಿಕಾರಿಗೂ ವಿನಂತಿಸಿದ್ದೇವೆ. ತಿಂಗಳೊಳಗೆ ಸಮಸ್ಯೆ ಬಗೆಹರಿಸದಿದ್ದಲ್ಲಿ ರೈತ ಸಂಘ ಹೋರಾಟ ಮಾಡಲಿದೆ ಎಂದು ರೂಪೇಶ್ ರೈ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘ ಕೋಡಿಂಬಾಡಿ ವಲಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪುಚ್ಚತ್ತಡ್ಕ, ಜಿಲ್ಲಾ ಕೋಶಾಧಿಕಾರಿ ಯತೀಶ್ ಗೌಡ ಮುಂಡೂರು ಉಪಸ್ಥಿತರಿದ್ದರು.