ದರ್ಬೆಯಿಂದ ಕಾರ್ಮಿಕರ ಕಾಲ್ನಡಿಗೆ ಜಾಥಾ
ಕಾರ್ಮಿಕರ ಮಕ್ಕಳಿಗೆ ಪುಸ್ತಕ ವಿತರಣೆ
ನೂತನ ಪದಾಧಿಕಾರಿಗಳ ಆಯ್ಕೆ
ತುಂಬಿ ತುಳುಕಿದ ಸಭಾಭವನ
ಪುತ್ತೂರಿನಲ್ಲಿ ಕಾರ್ಮಿಕ ಭವನದ ಅಗತ್ಯವಿದೆ -ಜಯರಾಮ ಕುಲಾಲ್
ಉತ್ತಮ ದೇಶಕಟ್ಟಲು ಕಾರ್ಮಿಕರಿಂದ ಮಾತ್ರ ಸಾಧ್ಯ-ದೇವಾನಂದ
ಕಾರ್ಮಿಕರು ಒಳ್ಳೆಯದಾದರೆ ದೇಶಕ್ಕೆ ಒಳಿತು-ಅಕ್ಷಯ್ ಎಸ್.ಕೆ
ಪುತ್ತೂರು: ಈ ದೇಶದಲ್ಲಿ ಕಾರ್ಮಿಕರದ್ದೇ ಬಹು ಸಂಖ್ಯೆ ಇದೆ. ಒಂದೊಮ್ಮೆ ಕಾರ್ಮಿಕರು ಇಲ್ಲದೇ ಹೋಗುತ್ತಿದ್ದರೆ ಮರದಡಿಯೇ ಗತಿಯಾಗುತ್ತಿತ್ತು ಎಂದು ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ, ವಕೀಲ ಬಿ.ಪುರಂದರ ಭಟ್ ಹೇಳಿದರು.
ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಮಾ.13ರಂದು ನಡೆದ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ 3ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರೇ ಈ ದೇಶದ ಆಸ್ತಿ. ಇವತ್ತು ಕಾರ್ಮಿಕರಿಲ್ಲದಿದ್ದರೆ ಅಧಿಕಾರಿಗಳು ಸೇರಿದಂತೆ ಎಲ್ಲರೂ ಮರದಡಿಯಲ್ಲಿ ಕೂತುಕೊಳ್ಳಬೇಕಾಗಿತ್ತು. ರೈಲು ಮಾರ್ಗ, ರಸ್ತೆಗಳಿರುತ್ತಿರಲಿಲ್ಲ. ಆದರೆ ಇವೆಲ್ಲ ನಮ್ಮ ಬುದ್ದಿ ಬೆಳೆದಂತೆ ಆಗಿದೆ ಆದರೆ ಆ ಬುದ್ದಿಗೆ ವಿಕಾಸವೆಂಬುದಿದೆ. ಅದು ಸೂರ್ಯನ, ಚಂದ್ರನ ಬೆಳಕಿನಂತೆ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತದೆ.ಆದ್ದರಿಂದ ಈ ಬಹುಸಂಖ್ಯಾತರು ಯಾರು ಎಂದು ತಿಳಿದುಕೊಳ್ಳಬೇಕು.ಇದನ್ನು ತಿಳಿಯದೇ ಹೋದರೆ ನಾವು ಸಂಸ್ಕೃತಿ ಎಂದು ಹೇಳುವುದಕ್ಕೆ ಅರ್ಥವಿಲ್ಲ.ಈ ನಿಟ್ಟಿನಲ್ಲಿ ಕಾರ್ಮಿಕರು ಎಚ್ಚರವಾಗಬೇಕು.ಆಗ ಈ ದೇಶವು ಎಚ್ಚರ ಆಗುತ್ತದೆ ಎಂದವರು ಹೇಳಿದರು.
ಪುತ್ತೂರಿನಲ್ಲಿ ಕಾರ್ಮಿಕ ಭವನಕ್ಕೆ ಆಗ್ರಹ:
ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ ಕುಲಾಲ್ ಅವರು ಮಾತನಾಡಿ ಜಿಲ್ಲೆಯಲ್ಲೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಮಿಕರು ಇರುವ ಸಂಘಟನೆ ನಮ್ಮದು ಮಾತ್ರ. ಪ್ರತಿ ತಿಂಗಳು ನಮ್ಮ ಸಂಘಟನೆ ಕಾರ್ಮಿಕರಿಗಾಗಿ ವಿವಿಧ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಇದು ರಾಜಕೀಯ ಉದ್ದೇಶವಿಟ್ಟುಕೊಂಡು ಮಾಡಿಕೊಂಡ ಸಂಘಟನೆ ಅಲ್ಲ. ಇವತ್ತು ನಮ್ಮ ಸಂಘಟನೆ ಮೂಲಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘವನ್ನು ಆರಂಭಿಸಿದ್ದೇವೆ. ಅವರಿಗೂ ಕಾರ್ಮಿಕರಂತೆ ಸೌಲಭ್ಯ ಸಿಗಬೇಕೆಂಬ ಹೋರಾಟ ನಮ್ಮದು. ಪುತ್ತೂರಿನಲ್ಲಿ ಒಂದು ಕಾರ್ಮಿಕ ಭವನ ನಿರ್ಮಾಣ ಆಗಬೇಕು. ಅಲ್ಲಿ ಕಾರ್ಮಿಕರಿಗೆ ಕೌಶಲ್ಯ ತರಬೇತಿ ಸಿಗಬೇಕು ಎಂದರು.
ಕಾರ್ಮಿಕ ಮಂಡಳಿಯಿಂದ ಸಾಲ ಕೊಡುವ ವ್ಯವಸ್ಥೆ ಆಗಬೇಕು:
ನಮ್ಮ ಕಾರ್ಮಿಕ ಸಂಘಟನೆಯಲ್ಲಿ ರಾಜಕೀಯವಿಲ್ಲ. ಹಾಗಾಗಿ ಜನಪ್ರತಿನಿಧಿಗಳು ನಮ್ಮಲ್ಲಿ ಬರುವುದಿಲ್ಲ. ಅವರಿಗೆ ಇಲ್ಲಿಗೆ ಬಂದಾಗ ನಾವು ಯಾರ ಕಡೆ ಎಂಬ ಅನುಮಾನ. ಆದರೆ ನಾವು ರಾಜಕಾರಣ ಮಾಡದೆ ಸೇವೆ ಮಾಡುತ್ತಿದ್ದೇವೆ.ಇವತ್ತು ಕಾರ್ಮಿಕರಿಗೆ ಬ್ಯಾಂಕ್ ಸಾಲ ದೊಡ್ಡ ಸವಾಲಾಗಿದೆ. ಅದಕ್ಕಾಗಿ ಕಾರ್ಮಿಕ ಮಂಡಳಿಯಿಂದ ಸಾಲ ಸಿಗುವ ವ್ಯವಸ್ಥೆ ಆಗಬೇಕು. ಕಾರ್ಮಿಕರಿಗೆ ಸಿಗುವ ಕಿಟ್ ಬದಲು ಅದಕ್ಕೆ ತಗಲುವ ಹಣವನ್ನು ಕಾರ್ಮಿಕರ ಖಾತೆಗೆ ಜಮೆ ಮಾಡಬೇಕು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೊಡಿಸುವಂತೆ ಆಗ್ರಹಿಸಿ ಹೋರಾಟ ನಡೆಯಲಿದೆ.ಕಟ್ಟಡ ಕಾರ್ಮಿಕರು ನೋಂದಾವಣೆ ಮಾಡದಿದ್ದರೆ ಇವತ್ತೇ ನೋಂದಾವಣೆ ಮಾಡಿಕೊಳ್ಳಿ ಎಂದವರು ಹೇಳಿದರು.
ಉತ್ತಮ ದೇಶಕಟ್ಟಲು ಕಾರ್ಮಿಕರಿಂದ ಮಾತ್ರ ಸಾಧ್ಯ:
ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಕಾನೂನು ಸಲಹೆಗಾರ ದೇವಾನಂದ ಕೆ ಅವರು ಮಾತನಾಡಿ ಕಾರ್ಮಿಕರಿಲ್ಲದೆ ಉತ್ತಮ ದೇಶ ಕಟ್ಟಲು ಸಾಧ್ಯವಿಲ್ಲ.ಕಾರ್ಮಿಕರಿಗೆ ಕಾನೂನು ಮಾಹಿತಿ ಬೇಕಾದರೆ ನನ್ನನ್ನು ಸಂಪರ್ಕಿಸಿ ಎಂದರು.
ಕಾರ್ಮಿಕರು ಒಳ್ಳೆಯದಾದರೆ ದೇಶಕ್ಕೇ ಒಳಿತು:
ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ‍್ಸ್(ಪೇಸ್)ಅಧ್ಯಕ್ಷ ಅಕ್ಷಯ ಎಸ್.ಕೆ ಅವರು ಮಾತನಾಡಿ ಕಾರ್ಮಿಕರು ಕೆಲಸ ಮಾಡುವ ಸಂದರ್ಭ ಅಂಗವೈಕಲ್ಯ ಉಂಟಾದರೆ ಅವರಿಗೆ ಸಹಾಯ ಆಗುವ ರೀತಿಯಲ್ಲಿ ಸಂಘಟನೆ ಮೂಲಕ ಕೆಲಸ ಆಗಬೇಕು.ಅಂತಹ ಯೋಜನೆ ತರುವಂತೆ ಸಂಘಟನೆ ಸಂಬಂಧಪಟ್ಟವರನ್ನು ಒತ್ತಾಯಿಸಬೇಕು.ಕಾರ್ಮಿಕರು ಒಳ್ಳೆಯದಾದರೆ ದೇಶ ಒಳ್ಳೆಯದಾಗುತ್ತದೆ.ದೇಶ ಒಳ್ಳೆಯದಾದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.
ನಾಗರಿಕ ಹಕ್ಕು ಕಾರ್ಯಕರ್ತ ದಿನೇಶ್ ಭಟ್ ಅವರು ಕಾರ್ಮಿಕರಿಗೆ ಸಿಗುವ ವಿವಿಧ ಸವಲತ್ತಿನ ಕುರಿತು ಮಾಹಿತಿ ನೀಡಿದರಲ್ಲದೆ ತಮ್ಮ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡರೆ ಸರಕಾರದ ಸವಲತ್ತು ಪಡೆಯುವಲ್ಲಿ ಸಹಕಾರವಾಗುತ್ತದೆ ಎಂದರು. ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆಯವರು ಮಾತನಾಡಿ ಅನರ್ಹ ಫಲಾನುಭವಿಗಳು ಕಾರ್ಮಿಕರೆಂದು ನೋಂದಾವಣೆ ಮಾಡಿ ಸಮಸ್ಯೆ ತಂದುಕೊಳ್ಳಬೇಡಿ.ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ನಮ್ಮ ಇಲಾಖೆಯಿಂದ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಮಿಕರ ಮಕ್ಕಳಿಗೆ ಪುಸ್ತಕ ವಿತರಣೆ: ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪೂರಕವಾಗುವ ಪುಸ್ತಕ ವಿತರಣೆ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ 10 ಮಂದಿ ಅದೃಷ್ಟ ಕಾರ್ಮಿಕರನ್ನು ಆಯ್ಕೆ ಮಾಡಿ ಬಹುಮಾನ ವಿತರಣೆ ನಡೆಯಿತು. ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘದ ಅಧ್ಯಕ್ಷ ಸುಂದರ್ ಸೇಡಿಯಾಪು, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅರುಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಲ್, ಮೋಹನ ಆಚಾರ್ಯ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಚೆನ್ನಪ್ಪ ಮಚ್ಚಿಮಲೆ, ಈಶ್ವರ ನಾಯ್ಕ, ಮೋಹನ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ವಿಶ್ವನಾಥ ಬೆಳ್ಳಿಪ್ಪಾಡಿ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಮುಕ್ವೆ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು.ಸಲಹೆಗಾರ ಎಂ ಸೇಸಪ್ಪ ಕುಲಾಲ್ ವಂದಿಸಿದರು. ತೇಜ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ದರ್ಬೆಯಿಂದ ಕಾಲ್ನಡಿಗೆ ಜಾಥಾ
ವಾರ್ಷಿಕ ಮಹಾಸಭೆಯ ಆರಂಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ದರ್ಬೆಯಿಂದ ಕಾಲ್ನಡಿಗೆ ಜಾಥಾ ನಡೆಸಿದರು.ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ಮತ್ತು ಕಾನೂನು ಸಲಹೆಗಾರ ಕೆ.ದೇವಾನಂದ ಜಾಥಾವನ್ನು ಉದ್ಘಾಟಿಸಿದರು.ಜಾಥಾವು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಮಾವೇಶಗೊಂಡಿತು.
ನೂತನ ಪದಾಧಿಕಾರಿಗಳ ಆಯ್ಕೆ
ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬಿ.ಪುರಂದರ ಭಟ್ ಗೌರವಾಧ್ಯಕ್ಷರಾಗಿ, ದೇವಾನಂದ ಕೆ ಕಾನೂನು ಸಲಹೆಗಾರರಾಗಿ, ಎಂ.ಶೇಷಪ್ಪ ಕುಲಾಲ್ ಸಲಹೆಗಾರರಾಗಿ, ಜಯರಾಮ ಕುಲಾಲ್ ಜಿಲ್ಲಾಧ್ಯಕ್ಷರಾಗಿ ಮತ್ತು ಇತರರನ್ನು ವಿವಿಧ ಜವಾಬ್ದಾರಿಗಳಿಗೆ ಆಯ್ಕೆ ಮಾಡಲಾಯಿತು.