ರಾಜ್ಯಕ್ಕೆ ಮಾದರಿಯಾಗುವಂತಹ ಗ್ರಾಮ ಪಂಚಾಯತ್ ಇದಾಗಿದೆ : ಮಠಂದೂರು
ಪುತ್ತೂರು: ಒಂದು ಪಂಚಾಯತ್ ವ್ಯವಸ್ಥೆ ಹೇಗಿರಬೇಕು? ಪಂಚಾಯತ್ ಅಧಿಕಾರಿ ವರ್ಗ ಹಾಗೂ ಆಡಳಿತ ಮಂಡಳಿಯ ಕರ್ತವ್ಯಗಳೇನು? ಗ್ರಾಮಸ್ಥರಿಗೆ ಯಾವ ರೀತಿಯಲ್ಲಿ ಸೇವೆ ನೀಡಬೇಕು ಎಂಬಿತ್ಯಾದಿ ವಿಷಯಗಳ ಮೂಲಕ ಭ್ರಷ್ಟಾಚಾರ ಮುಕ್ತ ಸೇವೆಯಿಂದಾಗಿ ಒಳಮೊಗ್ರು ಗ್ರಾಮ ಪಂಚಾಯತ್ ರಾಜ್ಯಕ್ಕೆ ಒಂದು ಮಾದರಿ ಗ್ರಾಪಂ ಆಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ, ತಾಲೂಕು ಪಂಚಾಯತ್ ಪುತ್ತೂರು, ಒಳಮೊಗ್ರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಒಳಮೊಗ್ರು ಗ್ರಾಪಂನ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ಗ್ರಾಮ ಪಂಚಾಯತ್ ಕಛೇರಿಯನ್ನು ಮಾ.13 ರಂದು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಕಛೇರಿಗಳು ಗ್ರಾಮ ಸೌಧಗಳಾಗಬೇಕು, ಜನರ ಸೇವೆಯೇ ಜನಾರ್ದನ ಸೇವೆ ಆಗಬೇಕು ಎಂದ ಸಂಜೀವ ಮಠಂದೂರುರವರು, ಗ್ರಾಪಂ ಕಛೇರಿಗೆ ಬರುವ ಗ್ರಾಮಸ್ಥರಿಗೆ ಒಳ್ಳೆಯ ರೀತಿಯ ಸೇವೆಯನ್ನು ನೀಡಿದಾಗ ಗ್ರಾಪಂ ಅಧಿಕಾರಿ ವರ್ಗ ಹಾಗೂ ಆಡಳಿತ ವರ್ಗಕ್ಕೆ ಸಮಾಜದಲ್ಲಿ ಒಳ್ಳೆಯ ಹೆಸರು ಬರಲು ಸಾಧ್ಯ ಎಂದರು. ಭ್ರಷ್ಟಾಚಾರ ಮುಕ್ತವಾದರೆ ದೇಶದ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿ ಮಾಡಲು ಎಲ್ಲಾ ವಿಧದಲ್ಲೂ ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಅಮೂಲಾಗ್ರ ಬದಲಾವಣೆ ಆಗುತ್ತಿದೆ ಎಂದರು. ಭ್ರಷ್ಟಾಚಾರ ಎಂಬುದು ಮಾನವ ನಿರ್ಮಿತ ದೊಡ್ಡ ದುರಂತವಾಗಿದ್ದು ಇದಕ್ಕೆ ಬಡಪಾಯಿಗಳೇ ಬಲಿಯಾಗುತ್ತಿದ್ದಾರೆ. ಭ್ರಷ್ಟಾಚಾರ ನಿಲ್ಲಬೇಕಾದರೆ ನಾನು ಕೊಡುವುದಿಲ್ಲ, ನಾನು ತೆಗೆದುಕೊಳ್ಳುವುದಿಲ್ಲ ಎಂಬ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಭ್ರಷ್ಟಾಚಾರ ಮುಕ್ತ ಸೇವೆ ನೀಡುತ್ತೇವೆ ಎಂಬ ನಿರ್ಣಯವನ್ನು ತೆಗೆದುಕೊಳ್ಳುವ ಮೂಲಕ ಒಳಮೊಗ್ರು ಗ್ರಾಮ ಪಂಚಾಯತ್ ಎಲ್ಲಾ ಪಂಚಾಯತ್‌ಗಳಿಗೆ ಮಾದರಿ ಪಂಚಾಯತ್ ಆಗಿದೆ ಈ ನಿಟ್ಟಿನಲ್ಲಿ ಪಂಚಾಯತ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಶಾಸಕರು ಮುಂದಿನ ದಿನಗಳಲ್ಲಿ ಪಂಚಾಯತ್‌ನಿಂದ ಉತ್ತಮ ಸೇವೆಗಳು ಗ್ರಾಮಸ್ಥರಿಗೆ ಸಿಗಲಿ ಎಂದು ಹೇಳಿ ಶುಭ ಹಾರೈಸಿದರು.
ಪ್ರಜಾಪ್ರಭುತ್ವದ ತಳಹದಿ ಗ್ರಾಮ ಪಂಚಾಯತ್: ಮಂಜುನಾಥ ಭಂಡಾರಿ:
ಗ್ರಾಮ ಆಡಳಿತ ಅಧಿಕಾರಿ ಕಛೇರಿ ಉದ್ಘಾಟಿಸಿದ ವಿಧಾನಪರಿಷತ್ತು ಶಾಸಕ ಡಾ| ಮಂಜುನಾಥ ಭಂಡಾರಿಯವರು ಮಾತನಾಡಿ, ಪ್ರಜಾಪ್ರಭುತ್ವದ ತಳಹದಿ ಗ್ರಾಮ ಪಂಚಾಯತ್ ಆಗಿದೆ. ಗ್ರಾಮದ ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದನೆ ಮಾಡುವವರು ಗ್ರಾಪಂನ ಅಧಿಕಾರಿ ವರ್ಗ ಹಾಗೂ ಆಡಳಿತ ವರ್ಗದವರು ಆಗಿದ್ದಾರೆ. ಒಳಮೊಗ್ರು ಗ್ರಾಪಂ ಭ್ರಷ್ಟಾಚಾರ ಮುಕ್ತ ಗ್ರಾಪಂ ಎಂದು ಹೇಳಲು ಹೆಮ್ಮೆ ಆಗುತ್ತಿದೆ ಎಂದ ಮಂಜುನಾಥ ಭಂಡಾರಿಯವರು, ಎಲ್ಲಾ ಗ್ರಾಪಂಗಳಲ್ಲೂ ಪಾರದರ್ಶಕ ಆಡಳಿತ ವ್ಯವಸ್ಥೆ ಆದಾಗ ಪ್ರಜಾಪ್ರಭುತ್ವದ ಆಶಯ ಈಡೇರಲು ಸಾಧ್ಯವಿದೆ. ಒಳಮೊಗ್ರು ಗ್ರಾಪಂನಿಂದ ಗ್ರಾಮಸ್ಥರಿಗೆ ಉತ್ತಮ ಸೇವೆಗಳು ಲಭಿಸಲಿ, ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಜನರ ಸಮಸ್ಯೆ, ಬೇಡಿಕೆಗಳಿಗೆ ಪರಿಹಾರ ಕೊಡುವ ಕೆಲಸ ಆಗಲಿ: ಚನಿಲ ತಿಮ್ಮಪ್ಪ ಶೆಟ್ಟಿ:
ಗಿಡಕ್ಕೆ ನೀರು ಎರೆಯುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ, ಗ್ರಾಮದ ಒಟ್ಟು ಅಭಿವೃದ್ಧಿಯ ಬಗ್ಗೆ ಚಿಂತನೆ ಗ್ರಾಪಂ ಆಡಳಿತ ವರ್ಗ ಹಾಗೂ ಅಧಿಕಾರಿ ವರ್ಗದವರಲ್ಲಿ ಇದ್ದಾಗ ಗ್ರಾಮದ ಅಭಿವೃದ್ಧಿ ಸಾಧ್ಯ ಇದಕ್ಕೆ ಒಳಮೊಗ್ರು ಗ್ರಾಪಂ ಉತ್ತಮ ನಿದರ್ಶನವಾಗಿದೆ. ಗ್ರಾಮದ ಒಟ್ಟು ಅಭಿವೃದ್ಧಿಯ ಫಲವಾಗಿ ಗಾಂಧಿ ಪುರಸ್ಕಾರ, ಸ್ವಚ್ಛತಾ ಸ್ಲೋಗನ್ ಪ್ರಶಸ್ತಿಗಳು ಲಭಿಸಿದೆ. ಈ ಎಲ್ಲಾ ಅಭಿವೃದ್ಧಿಯ ಹಿಂದೆ ಗ್ರಾಪಂ ಆಡಳಿತ, ಅಧಿಕಾರಿ ವರ್ಗ ಹಾಗೂ ಗ್ರಾಮಸ್ಥರ ಶ್ರಮ ಇದೆ ಎಂದರು. ಒಳಮೊಗ್ರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶಾಸಕರು ಸುಮಾರು 11 ಕೋಟಿ ರೂ.ಅನುದಾನ ಒದಗಿಸಿದ್ದಾರೆ ಎಂದ ಚನಿಲ ತಿಮ್ಮಪ್ಪ ಶೆಟ್ಟಿಯವರು, ಮುಂದಿನ ದಿನಗಳಲ್ಲಿ ಗ್ರಾಪಂನಿಂದ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಮೂಡಿಬರಲಿ, ಗ್ರಾಪಂ ಕಛೇರಿಗೆ ಬರುವ ಗ್ರಾಮಸ್ಥರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಪರಿಹಾರ ಕೊಡುವ ಕೆಲಸ ಆಗಲಿ ಎಂದು ಹೇಳಿ ಶುಭ ಹಾರೈಸಿದರು.
ಇಚ್ಛಾಶಕ್ತಿ ಎಲ್ಲಕ್ಕಿಂತ ದೊಡ್ಡ ಶಕ್ತಿ : ನವೀನ್ ಭಂಡಾರಿ: ಪುತ್ತೂರು ತಾಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿಯವರು ಮಾತನಾಡಿ,ಯಾವುದೇ ಅನುದಾನ ಇಲ್ಲದೆ ಕೇವಲ ಉದ್ಯೋಗ ಖಾತರಿಯನ್ನೇ ಅವಲಂಬಿಸಿಕೊಂಡು ಸುಮಾರು 40 ಲಕ್ಷ ರೂ.ವೆಚ್ಚದಲ್ಲಿ ಬಹಳ ಸುಂದರವಾದ ಕಟ್ಟಡ ನಿರ್ಮಾಣದ ಹಿಂದೆ ಗ್ರಾಪಂನ ಅಧಿಕಾರಿ ವರ್ಗ ಹಾಗೂ ಆಡಳಿತ ವರ್ಗದವರ ಇಚ್ಛಾಶಕ್ತಿ ಕಾಣುತ್ತಿದೆ. ಇಚ್ಛಾಶಕ್ತಿಗಿಂತ ದೊಡ್ಡ ಶಕ್ತಿ ಬೇರೆ ಇಲ್ಲ, ಅನುದಾನ ಮುಖ್ಯವಲ್ಲ ಇಚ್ಛಾಶಕ್ತಿ ಮುಖ್ಯ, ನಮ್ಮಲ್ಲಿ ಇಚ್ಛಾಶಕ್ತಿ ಇದ್ದರೆ ಯಾವುದೇ ಕೆಲಸಗಳನ್ನು ಕೂಡ ಮಾಡಬಹುದು ಎಂಬುದಕ್ಕೆ ಒಳಮೊಗ್ರು ಗ್ರಾಪಂನ ಭವ್ಯವಾದ ಕಟ್ಟಡ ಸಾಕ್ಷಿಯಾಗಿದೆ ಎಂದರು.ಅಧಿಕಾರಿಗಳು ಮನಸ್ಸು ಮಾಡಿದರೆ ಗ್ರಾಮದ ಚಿತ್ರಣವನ್ನೇ ಬದಲಾಯಿಸಬಹುದು ಎಂಬುದಕ್ಕೆ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಉತ್ತಮ ನಿದರ್ಶನ ಎಂದ ಅವರು, ವಿಧಾನಸೌಧ ಮಾದರಿಯಲ್ಲಿ ನಿರ್ಮಾಣಗೊಂಡ ಒಳಮೊಗ್ರು ಗ್ರಾಪಂ ಕಟ್ಟಡ ಎಲ್ಲಾ ಪಂಚಾಯತ್‌ಗಳಿಗೂ ಒಂದು ಮಾದರಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಜಗತ್ತು ಗುರುತಿಸುವ ಕೆಲಸ ಗ್ರಾಪಂನಿಂದಾಗಲಿ: ಶೀನ ಶೆಟ್ಟಿ:
ಸ್ವಚ್ಛತಾ ರಾಯಭಾರಿ, ಮಾಜಿ ಓಂಬುಡ್ಸ್‌ಮೆನ್ ಶೀನ ಶೆಟ್ಟಿಯವರು ಮಾತನಾಡಿ, ಭ್ರಷ್ಟಾಚಾರ ಮುಕ್ತ ಗ್ರಾಪಂ ಆದ ರೀತಿಯಲ್ಲೇ ಕಸಮುಕ್ತ ಗ್ರಾಪಂ ಕೂಡ ಆಗಲಿ. ಆ ಮೂಲಕ ಜಗತ್ತಿನಲ್ಲೇ ಒಳಮೊಗ್ರು ಗ್ರಾಪಂ ಗುರುತಿಸುವಂತಾಗಲಿ. ಸ್ವಚ್ಛ ಮನೆ, ಸ್ವಚ್ಛ ಗ್ರಾಮ ಆಗುವ ಮೊದಲು ಸ್ವಚ್ಚ ಮನಸ್ಸು ನಮ್ಮದಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಗ್ರಾಮ ಸರಕಾರ ರೂಪುಗೊಳ್ಳಲಿ : ಕೃಷ್ಣ ಮೂಲ್ಯ:
ಜನಶಿಕ್ಷಣ ಟ್ರಸ್ಟ್ ಮುಡಿಪು ಇದರ ನಿರ್ದೇಶಕ ಕೃಷ್ಣ ಮೂಲ್ಯರವರು ಮಾತನಾಡಿ, ಗ್ರಾಮ ಪಂಚಾಯತ್‌ಗಳು ಗ್ರಾಮ ಸರಕಾರಗಳಾಗಿ ರೂಪುಗೊಳ್ಳಬೇಕು. ಭ್ರಷ್ಟಾಚಾರ ಮುಕ್ತ ಗ್ರಾಮ ಎಂದು ನಿರ್ಣಯ ಮಾಡುವ ಮೂಲಕ ಒಳಮೊಗ್ರು ಗ್ರಾಪಂ ದೊಡ್ಡ ಸುದ್ದಿಯಾಗಿದ್ದು ಮಾತ್ರವಲ್ಲ ಅದರಂತೆ ಇಂದಿಗೂ ನಡೆದುಕೊಂಡು ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಕುಂಬ್ರ ಶಾಖಾ ಅಂಚೆ ಕಛೇರಿಯನ್ನು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಉದ್ಘಾಟಿಸಿದರು. ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷೆ ಸುಂದರಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಗನವಾಡಿ ಕಾರ್ಯಕರ್ತೆ ಆಶಾ ಮಾಧವ ರೈ ಮತ್ತು ಬಳಗದವರು ಪ್ರಾರ್ಥಿಸಿದರು. ಪಂಚಾಯತ್ ಸದಸ್ಯರುಗಳಾದ ಶೀನಪ್ಪ ನಾಯ್ಕ ಮುಡಾಲ, ವಿನೋದ್ ಶೆಟ್ಟಿ ಮುಡಾಲ, ಲತೀಫ್ ಕುಂಬ್ರ, ಪ್ರದೀಪ್, ಸಿರಾಜುದ್ದೀನ್, ಬಿ.ಸಿ ಚಿತ್ರಾ, ಶಾರದಾ, ರೇಖಾ ಯತೀಶ್, ನಳಿನಾಕ್ಷಿ, ನಿಮಿತಾ, ವನಿತಾ, ಸಿಬ್ಬಂದಿಗಳಾದ ಕಾರ್ಯದರ್ಶಿ ಜಯಂತಿ, ಬಿಲ್ ಕಲೆಕ್ಟರ್ ಗುಲಾಬಿ, ಕ್ಲರ್ಕ್ ಜಾನಕಿ, ಪಂಪು ಅಪರೇಟರ್ ಕೇಶವ ಪೂಜಾರಿ ಕೈಕಾರ, ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ಮೋಹನ್ ಕೆ.ಪಿ, ಗ್ರಂಥಪಾಲಕಿ ಸಿರಿನಾ, ಪೂವಯ್ಯ ಸಹಕರಿಸಿದ್ದರು. ಸದಸ್ಯ ಮಹೇಶ್ ಕೇರಿ ವಂದಿಸಿದರು. ಕುಂಬ್ರ ಸಿಎ ಬ್ಯಾಂಕ್ ನಿರ್ದೇಶಕ ಸಂತೋಷ್ ಕುಮಾರ್ ರೈ ಕೈಕಾರ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಮುಖಂಡರುಗಳಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ್ ರೈ, ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಒಳಮೊಗ್ರು ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಬಿಜೆಪಿ ಗ್ರಾಮಾಂತರ ಮಂಡಲ ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಹಿರಿಯ ಪ್ರಗತಿಪರ ಕೃಷಿಕ ನಾರಾಯಣ ರೈ ಬಾರಿಕೆ, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನ, ವರ್ತಕರ ಸಂಘದ ಮಾಜಿ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ತಾಪಂ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ, ಸಿಆರ್‌ಪಿ ಶಶಿಕಲಾ, ಉಷಾ ನಾರಾಯಣ್, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಕೆಪಿಎಸ್ ಮುಖ್ಯ ಶಿಕ್ಷಕಿ ನೀನಾ ಕುವೆಲ್ಲೋ, ಪ್ರವೀಣ್ ಪಲ್ಲತ್ತಾರು, ಒಳಮೊಗ್ರು ಗ್ರಾಮ ಆಡಳಿತ ಅಧಿಕಾರಿ ರಾಧಾಕೃಷ್ಣ, ಗ್ರಾಮ ಸೇವಕ ದೀಪಕ್ ಮಗಿರೆ, ಅಂಚೆ ಪಾಲಕ ಸತೀಶ್ ಪೂಜಾರಿ, ಅಂಚೆ ವಿತರಕ ಉಮೇಶ್ ಕುಮಾರ್ ಬರೆಮೇಲು, ಬ್ಲಾಕ್ ಕಾಂಗ್ರೆಸ್ ರಾಜೀವ್‌ಗಾಂಧಿ ಸೇವಾದಳದ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಕಾಂಗ್ರೆಸ್ ಸೇವಾದಳದ ಜಿಲ್ಲಾ ಅಧ್ಯಕ್ಷ ಜೋಕಿಂ ಡಿ’ಸೋಜಾ, ವಿಶ್ವಹಿಂದೂಪರಿಷತ್ತು ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಂತೋಷ್ ರೈ ಕೈಕಾರ, ಒಳಮೊಗ್ರು ಹಾ.ಉ.ಸ.ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರು, ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಜನನಿ ಕನ್‌ಸ್ಟ್ರಕ್ಷನ್‌ನ ಗುತ್ತಿಗೆದಾರ ಯುವರಾಜ್ ಶೆಟ್ಟಿ ಮೇರ್ಲ, ಒಳಮೊಗ್ರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರವೀಣ್ ಪಲ್ಲತ್ತಾರು, ತಾಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ, ಕಟ್ಟಡ ಕಾರ್ಮಿಕರ ಸಂಘದ ಕುಂಬ್ರ ವಲಯ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ಉದ್ಯಮಿ ಮೋಹನ್‌ದಾಸ ರೈ ಕುಂಬ್ರ, ಎ.ಕೆ ಕನ್‌ಸ್ಟ್ರಕ್ಷನ್‌ನ ಅಬ್ದುಲ್ ಕುಂಞ ಕಾವು ಸಹಿತ ಹಲವು ಮಂದಿ ಉಪಸ್ಥಿತರಿದ್ದರು.
ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್‌ಗೆ ಸನ್ಮಾನ: ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರನ್ನು ಗ್ರಾಮಸ್ಥರ ಪರವಾಗಿ ಶಾಸಕ ಸಂಜೀವ ಮಠಂದೂರು ಹಾಗೂ ವಿಧಾನ ಪರಿಷತ್ತು ಶಾಸಕ ಮಂಜುನಾಥ ಭಂಡಾರಿಯವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಒಳಮೊಗ್ರು ಗ್ರಾಪಂಗೆ ನೂತನ ಕಟ್ಟಡ ನಿರ್ಮಾಣವಾಗಲು ಹಗಲಿರುಳು ಶ್ರಮಿಸಿದ ಪಿಡಿಒರವರನ್ನು ಜನಪ್ರತಿನಿಧಿಗಳು ಹಾಡಿಹೊಗಳಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಆಡಳಿತ ಮತ್ತು ಗ್ರಾಮಸ್ಥರು ಹೊಂದಾಣಿಕೆಯಲ್ಲಿ ಕೆಲಸ ಮಾಡಿದರೆ ಏನೂ ಮಾಡಬಹುದು ಎಂಬುದನ್ನು ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿಯವರು ಸಾಧಿಸಿ ತೋರಿಸಿದ್ದಾರೆ ಎಂದು ಶಾಸಕರು ಈ ಸಂದರ್ಭದಲ್ಲಿ ಅಭಿನಂದನಾ ಮಾತುಗಳನ್ನಾಡಿದರು. ಪಿಡಿಒರವರ ಕಾರ್ಯಕ್ಕೆ ಗ್ರಾಮಸ್ಥರು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು. ಭಾವುಕರಾದ ಪಿಡಿಒರವರು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಬಕೆಟ್ ಕೊಟ್ಟದ್ದು ಬೆಲ್ಲ ಹಾಕ್ಲಿಕ್ಕಾ?
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 17 ಸಾವಿರ ಮನೆಗಳಿದ್ದು ಈ ಪೈಕಿ 16 ಸಾವಿರ ಮನೆಗಳಿಗೆ ಕಸ ಹಾಕಲು ಬಕೆಟ್ ನೀಡಲಾಗಿದೆ. ಪುತ್ತೂರು ನಗರದಲ್ಲಿ ಸ್ವಚ್ಛತೆ ಕಾಪಾಡುವುದೇ ಇದರ ಉದ್ದೇಶವಾಗಿದೆ. ನಾನು ಶಾಸಕನಾಗಿ ಬರುವ ವೇಳೆ ಪುತ್ತೂರು ನಗರಸಭೆ ಸ್ವಚ್ಚತೆಯಲ್ಲಿ 31 ನೇ ಸ್ಥಾನದಲ್ಲಿತ್ತು. ಈಗ ಪುತ್ತೂರು ನಗರದ ಜನತೆಯ ಸಹಕಾರದಿಂದ ಮತ್ತು ಸ್ವಚ್ಛತಾ ಮನೋಭಾವದಿಂದ ಪುತ್ತೂರು ನಗರಸಭೆಯು ಸ್ವಚ್ಚತೆಯಲ್ಲಿ ರಾಜ್ಯದಲ್ಲಿ 3 ನೇ ಸ್ಥಾನವನ್ನು ಪಡೆದಿದೆ. ನಾವು ಪ್ರತಿ ಮನೆಗೆ ಬಕೆಟ್ ಕೊಡುವಾಗ ಮೀನು ಹಾಕಲಿಕ್ಕೆ ಅಥವಾ ಬೆಲ್ಲ ಹಾಕಲಿಕ್ಕೆ ಡಬ್ಬ ಕೊಟ್ಟಿದ್ದಾರೆ ಎಂದು ಹೇಳಿದವರಿಗೆ ಈಗ ಗೊತ್ತಾಗಿರಬಹುದು ನಾವು ಕೊಟ್ಟದ್ದು ಮೀನು, ಬೆಲ್ಲ ಹಾಕಲಿಕ್ಕೆ ಅಲ್ಲ ಸ್ವಚ್ಛತೆಗೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ನನ್ನ ದೊಡ್ಡ ಕನಸು ನನಸಾಗಿದೆ. ನಾನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಬೆನ್ನೆಲ್ಲೆ ಗ್ರಾಪಂಗೆ ಒಂದು ಸುಸಜ್ಜಿತ ಕಟ್ಟಡ ಆಗಬೇಕು ಎಂಬ ಕನಸು ಇತ್ತು ಅದು ಇಂದಿಗೆ ನನಸಾಗಿದೆ. ಒಂದೇ ಸೂರಿನಡಿ ಗ್ರಾಮಸ್ಥರಿಗೆ ಎಲ್ಲಾ ವ್ಯವಸ್ಥೆಗಳು ಲಭಿಸುವ ಕೆಲಸ ಮಾಡಲಾಗಿದೆ. ಗ್ರಾಮಕ್ಕೆ ಗಾಂಧಿ ಪುರಸ್ಕಾರ, ಸ್ವಚ್ಛತೆಯ ಸ್ಲೋಗನ್ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಈ ಎಲ್ಲಾ ಕಾರ್ಯಗಳು ಗ್ರಾಪಂ ಸದಸ್ಯರುಗಳ, ಅಧಿಕಾರಿ ವರ್ಗದವರ ಹಾಗೂ ಗ್ರಾಮಸ್ಥರ ಸಹಕಾರ, ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಮುಖ್ಯವಾಗಿ ಅಭಿವೃದ್ಧಿ ಅಽಕಾರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆಯೂ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಬಯಸುತ್ತೇವೆ.
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ
ನಾನು ಬಂಟ್ವಾಳ ತಾಲೂಕು ಇರ್ವತ್ತೂರು ಪಂಚಾಯತ್‌ನಲ್ಲಿ ಕೆಲಸ ಮಾಡುತ್ತಿದ್ದೆ ಆಗ ಪ್ರಕಾಶ್ಚಂದ್ರ ರೈಯವರ ತಮ್ಮ ನನ್ನ ಗೆಳೆಯ ಸಂತೋಷ್ ಕುಮಾರ್ ರೈ ಕೈಕಾರರವರು ನೀವು ನಮ್ಮ ಒಳಮೊಗ್ರು ಗ್ರಾಪಂಗೆ ಬರಬೇಕು ಎಂದರು. ಅವರು ನನ್ನಲ್ಲಿ ಮೂರು ಷರತ್ತು ಬೇಡಿಕೆಗಳನ್ನು ಇಟ್ಟಿದ್ದರು. ಅದೇನೆಂದರೆ ಭ್ರಷ್ಟಾಚಾರ ಮುಕ್ತ ಸೇವೆ ಬೇಕು, ಗ್ರಾಮಕ್ಕೆ ಸ್ವಚ್ಛ ಸಂಕೀರ್ಣ ಘಟಕ ನಿರ್ಮಾಣ ಆಗಬೇಕು, ಪ್ರಶಸ್ತಿ ಬರಬೇಕು ಹಾಗೂ ನೂತನ ಕಟ್ಟಡ ನಿರ್ಮಾಣ ಆಗಬೇಕು ಎಂದು ಅದರಲ್ಲಿ ಎಲ್ಲವೂ ಆಗಿದೆ. ಎರಡು ಪ್ರಶಸ್ತಿಗಳು ಲಭಿಸಿದೆ. ನಾನು ಹಿಂದೆಯೂ ಭ್ರಷ್ಟಾಚಾರ ಮುಕ್ತ ಸೇವೆಗೆ ಪಣತೊಟ್ಟವನಾಗಿದ್ದೇನೆ. ಒಳಮೊಗ್ರು ಪಂಚಾಯತ್‌ಗೆ ಹೊಸ ಕಟ್ಟಡ ನಿರ್ಮಾಣವಾಗಬೇಕು ಎಂದು ನಾನು ಅಧಿಕಾರ ವಹಿಸಿಕೊಂಡ ವೇಳೆ ಬಂದ ಮೊಟ್ಟ ಮೊದಲ ಬೇಡಿಕೆಯಾಗಿತ್ತು. ಈ ಬೇಡಿಕೆ ಈಡೇರಿಸಲು ಜಾಗದ ಕೊರತೆಯೂ ಇತ್ತು. ಎಲ್ಲರ ಸಹಕಾರದಿಂದ ಕೃಷಿ ಇಲಾಖೆಗೆ ಸಂಬಂಧಪಟ್ಟ ಜಾಗವನ್ನು ಗ್ರಾಪಂಗೆ ಹಸ್ತಾಂತರ ಮಾಡಿಕೊಂಡು ಸುಂದರವಾದ ಕಟ್ಟಡ ನಿರ್ಮಾಣವಾಗಿದೆ. ನನ್ನಲ್ಲಿ ಗ್ರಾಮಸ್ಥರು ಯಾವುದೆಲ್ಲಾ ಪ್ರಮುಖ ಬೇಡಿಕೆಯನ್ನು ಇಟ್ಟಿದ್ದರೋ ಅದೆಲ್ಲವನ್ನು ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಮಾಡಿದ್ದೇನೆ ಎಂದು ಹೇಳುವಾಗ ಪಿಡಿಒರವರು ಭಾವುಕರಾದ ಘಟನೆಯು ನಡೆಯಿತು. ಒಳಮೊಗ್ರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದ ಗ್ರಾಪಂ ಆಡಳಿತ ಮಂಡಳಿ, ಗ್ರಾಮಸ್ಥರಿಗೆ, ಜನಪ್ರತಿನಿಧಿಗಳಿಗೆ ಹಾಗೇ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
ಅವಿನಾಶ್ ಬಿ.ಆರ್. ಅಭಿವೃದ್ಧಿ ಅಧಿಕಾರಿ ಒಳಮೊಗ್ರು ಗ್ರಾಪಂ
ಹೊಸ ವಿನ್ಯಾಸ, ಜಿಲ್ಲೆಯಲ್ಲೇ ಮಾದರಿ ಪಂಚಾಯತ್ ಕಟ್ಟಡ
ಒಳಮೊಗ್ರು ಗ್ರಾಮ ಪಂಚಾಯತ್ ಕಟ್ಟಡವು ಹೊಸ ವಿನ್ಯಾಸದಿಂದ ಎಲ್ಲರ ಗಮನ ಸೆಳೆಯುತ್ತಿದೆ. ವಿಧಾನಸೌಧದ ಮಾದರಿಯಲ್ಲಿ ನಿರ್ಮಾಣಗೊಂಡ ಜಿಲ್ಲೆಯಲ್ಲೇ ಮಾದರಿ ಪಂಚಾಯತ್ ಕಟ್ಟಡ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಈ ಕಟ್ಟಡಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೂ.28 ಲಕ್ಷದ 60 ಸಾವಿರ ರೂಪಾಯಿಗಳನ್ನು ಬಳಸಿಕೊಳ್ಳಲಾಗಿದೆ. ಉಳಿದಂತೆ 2022-23 ನೇ ಸಾಲಿನ 15 ನೇ ಹಣಕಾಸು ಅನುದಾನದಡಿ ರೂ.4.70 ಲಕ್ಷ, 2021-22 ನೇ ಸಾಲಿನ ಗ್ರಾಮ ಪಂಚಾಯತ್ ಸ್ವಂತ ನಿಧಿಯಡಿ ರೂ.2 ಲಕ್ಷದ 24 ಸಾವಿರ, 2022-23 ನೇ ಸಾಲಿನ ಗ್ರಾಮ ಪಂಚಾಯತ್ ಸ್ವಂತ ನಿಧಿಯಡಿ ರೂ.4 ಲಕ್ಷದ 70 ಸಾವಿರ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ರೂಪಾಯಿಗಳನ್ನು ಬಳಸಿಕೊಳ್ಳಲಾಗಿದೆ. ಪಂಚಾಯತ್ ಕಟ್ಟಡಕ್ಕೆ ಧ್ವಜ ಕಟ್ಟೆ ಮತ್ತು ಸ್ತಂಭವನ್ನು ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಿಂದ ಕೊಡುಗೆಯಾಗಿ ನೀಡಲಾಗಿದೆ. ಕಟ್ಟಡ ಮೇಲಂತಸ್ತಿನಲ್ಲಿ ಸಭಾ ಭವನ, ಗ್ರಂಥಾಲಯ ಹಾಗೂ ಮೀಟಿಂಗ್ ಹಾಲ್ ನಿರ್ಮಾಣಗೊಳ್ಳಲಿದೆ.