




ನೆಲ್ಯಾಡಿ: ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ಹಳೆನೇರೆಂಕಿ ಹಾಲು ಉತ್ಪಾದಕರ ಮಹಿಳಾ ನವಸಾಕ್ಷರರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ.



ಆಡಳಿತ ಮಂಡಳಿಯ ಒಟ್ಟು 13 ಸ್ಥಾನಗಳಿಗೆ 12 ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ. ಪರಿಶಿಷ್ಠ ಪಂಗಡಕ್ಕೆ ಮೀಸಲಾಗಿರುವ 1 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಇದ್ದ ಹಿನ್ನೆಲೆಯಲ್ಲಿ ಈ ಸ್ಥಾನ ಖಾಲಿಯಾಗಿದೆ. ಸಾಮಾನ್ಯ ಸ್ಥಾನಕ್ಕೆ ಹರಿಣಾಕ್ಷಿ, ಭಾಗೀರಥಿ, ಭವ್ಯಲತಾ ಕೆ., ಕುಸುಮಾವತಿ, ಮೀನಾಕ್ಷಿ, ಯಶೋಧ ಕೆ.ಎಂ., ಮೋಹಿನಿ ಹೆಚ್., ನೀಲಾವತಿ ಹಾಗೂ ವನಿತಾರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಠ ಜಾತಿ ಸ್ಥಾನದಿಂದ ಸೀತಾ, ಹಿಂದುಳಿದ ಎ ಪ್ರವರ್ಗದಿಂದ ಪುಷ್ಪಾವತಿ ಯು., ಹಿಂದುಳಿದ ಬಿ ಪ್ರವರ್ಗದಿಂದ ಭಾನುಮತಿ ಎಸ್.ಕೆ.,ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾ.11 ನಾಮಪತ್ರ ಹಿಂತೆಗೆತಕ್ಕೆ ಕೊನೆ ದಿನವಾಗಿತ್ತು. ಎಲ್ಲಾ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಎಲ್ಲಾ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದೆ. ಬೆಳ್ತಂಗಡಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ.ಚುನಾವಣಾಧಿಕಾರಿಯಾಗಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಶೀಲಾ ಎಸ್.ಎನ್.ಹಾಗೂ ಸಿಬ್ಬಂದಿಗಳು ಸಹಕರಿಸಿದರು.





ಹಿಂದಿನ ಆಡಳಿತ ಮಂಡಳಿ ಬರ್ಖಾಸ್ತು:
ಹಳೆನೇರೆಂಕಿ ಹಾ.ಉ.ಮಹಿಳಾ ನವಸಾಕ್ಷರರ ಸಹಕಾರ ಸಂಘದ 13 ಸ್ಥಾನಗಳ ಪೈಕಿ 11 ಸ್ಥಾನಕ್ಕೆ ಈ ಹಿಂದೆ 11-11-2020ರಂದು ಚುನಾವಣೆ ನಡೆದಿತ್ತು. ಎರಡು ಸ್ಥಾನಗಳು ಖಾಲಿಯಾಗಿತ್ತು. ಬಳಿಕ ಅಧ್ಯಕ್ಷರಾಗಿ ಫಿಲೋಮಿನಾ ಮ್ಯಾಥ್ಯು ಹಾಗೂ ಉಪಾಧ್ಯಕ್ಷರಾಗಿ ಪುಷ್ಪಾವತಿ ಆಯ್ಕೆಗೊಂಡಿದ್ದರು. 2022ರ ಎ.22ರಂದು ಫಿಲೋಮಿನಾ ಮ್ಯಾಥ್ಯುರವರು ಅಕಾಲಿಕವಾಗಿ ನಿಧನರಾದ ಹಿನ್ನೆಲೆಯಲ್ಲಿ ಉಪಾಧ್ಯಕ್ಷರೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕದ ಬೆಳವಣಿಗೆಯಲ್ಲಿ ಐವರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸಿ ಹೊಸದಾಗಿ ಚುನಾವಣೆ ಘೋಷಿಸಲಾಗಿತ್ತು. ಇದೀಗ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.







