ಪುತ್ತೂರು: ಇರ್ದೆ-ಬೆಟ್ಟಪಾಡಿ ಗ್ರಾಮೀಣ ಕಾಂಗ್ರೆಸ್‌ನಿಂದ ಕಾಂಗ್ರೆಸ್ ಘೋಷಣೆ ಮಾಡಿರುವ ಎರಡು ಪ್ರಮುಖ ಪ್ರಣಾಳಿಕೆ ಗೃಹ ಲಕ್ಷ್ಮೀ ಮತ್ತು ಗೃಹ ಜ್ಯೋತಿ ಯೋಜನೆಗಳನ್ನು ಮನೆಗೆ ತಲುಪಿಸುವ ಕಾಂಗ್ರೆಸ್ ಗ್ಯಾರಂಟಿ ಅಭಿಯಾನವು ಮಾ.13ರಂದು ಚೆಲ್ಯಡ್ಕದಲ್ಲಿ ನಡೆಯಿತು.
ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ, ಕಾಂಗ್ರೆಸ್‌ಗೆ ಶಕ್ತಿ ಬರಬೇಕಾದರೆ ಜನರಿಗೆ ಶಕ್ತಿ ಬರಬೇಕು. ಕೇವಲ ವಿಮಾನ, ರೈಲು ನಿಲ್ದಾಣಗಳನ್ನು ನಿರ್ಮಿಸುವುದಲ್ಲ. ಜನರಿಗೆ ಆರ್ಥಿಕ ಶಕ್ತಿನೀಡಬೇಕು. ಸಾಮಾಜಿಕ ನ್ಯಾಯ ಒದಗಿಸಬೇಕು. ವಿದ್ಯುತ್, ಅಕ್ಕಿಯನ್ನು ಉಚಿತವಾಗಿ ನೀಡಿರುವುದರಿಂದ ಎಲ್ಲರಲ್ಲಿಯೂ ಹಣ ಉಳಿತಾಯವಾಗಲಿದೆ. ಹಣ ನೇರವಾಗಿ ಜನರ ಕೈಗೆ ದೊರೆಯಲಿದೆ. ಜನರು ಸುಭದ್ರವಾಗಿ ದೇಶ ಸುಭದ್ರವಾಗಲಿದೆ. ವಿಮಾನ ನಿಲ್ದಾಣ ಮಾಡಿದರೆ ಅದರಲ್ಲಿ ಅಂಬಾನಿ ಮಾತ್ರ ಹೋಗುತ್ತಾರೆ. ಜನ ಸಾಮಾನ್ಯರು ಹೋಗುವುದಿಲ್ಲ. ಬಿಜೆಪಿಯನ್ನು ತಮಾಷೆ ಮಾಡುವುದಕ್ಕಿಂತ ನಮ್ಮ ಬದುಕು ಹಸನಾಗಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವುದು ಖಚಿತ. ಕಾಂಗ್ರೆಸ್ ನೀಡಿದ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳಾದ ಪ್ರತಿ ಮನೆಗೆ 2೦೦ ಯೂನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿ ಮನೆಯ ಯಜಮಾನಿ ಮಹಿಳೆಗೆ ಪ್ರತಿ ತಿಂಗಳಿಗೆ ರೂ.2೦೦೦ ನೀಡಲಾಗುತ್ತಿದ್ದು ಇದರಲ್ಲಿ ಎಪಿಎಲ್, ಬಿಪಿಎಲ್ ಎಂಬುದಿಲ್ಲ. ರಾಜ್ಯದ ಎಲ್ಲಾ ವರ್ಗದ ಜನರಿಗೂ ದೊರೆಯಲಿದೆ. ಜೊತೆಗೆ ಹತ್ತು ಕೆ.ಜಿ ಅಕ್ಕಿ ದೊರೆಯಲಿದೆ. ಪಕ್ಷದ ನಾಯಕ ಸಿದ್ದರಾಮಯ್ಯ ಸಹಿ ಮಾಡಿದ ಪ್ರಣಾಳಿಕೆಯ ಕಾರ್ಡ್ ನ್ನು ರಾಜ್ಯದ ಎಲ್ಲಾ ಮನೆಗಳಿಗೂ ತಲುಪಿಸಲಾಗುವುದು. ನೀಡಿದ ಭರವಸೆಯನ್ನು ಶೇ.100ರಷ್ಟು ಆಡಳಿತ ಬಂದ ದಿನದಿಂದಲೇ ನೀಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆಲಿಕುಂಞಿ ಕೊರಿಂಗಿಲ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬಿಜೆಪಿ ನೀಡಿದ ಭರವಸೆಯಲ್ಲಿ ಶೇ.10 ಈಡೇರಿಸಿಲ್ಲ. ವಿದ್ಯುತ್ ಬಿಲ್ ಏರಿಕೆ ಮಾಡಿ ಕಟ್ಟದ ಸ್ಥಿತಿ ಉಂಟಾಗಿದ್ದು ಉಚಿತ ವಿದ್ಯುತ್ ಜನತೆಗೆ ಅನುಕೂಲವಾಗಲಿದೆ. ನಮ್ಮ ಭರವಸೆ ಗ್ಯಾಸ್ ದರ ಏರಿಕೆ ಮಾಡಿ ಕಿಸಾನ್ ಸನ್ಮಾನ ನೀಡಿದಂತಲ್ಲ. ನಮ್ಮ ಅಭ್ಯರ್ಥಿ ಯಾರೇ ಆಗಲಿ. ಪ್ರಣಾಳಿಕೆ ಮನವರಿಕೆ ಮಾಡಬೇಕು ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ ಮಾತನಾಡಿ, ಕಾಂಗ್ರೆಸ್ ಪಕ್ಷ ನೀಡಿದ ಉತ್ತಮ ಕೊಡುಗೆಗಳಿಂದ ಇಂದು ಭಾರತ ಉಸಿರಾಡುತ್ತಿದೆ. ಬಿಜೆಪಿ ನೀಡಿದಂತೆ ಸುಳ್ಳು ಭರವಸೆಗಳನ್ನು ಕಾಂಗ್ರೆಸ್ ನೀಡುವುದಿಲ್ಲ. ನೀಡಿದ ಭರವಸೆಗಳನ್ನು ಶೆ.100ರಷ್ಟು ಈಡೇರಿಸಲಿದೆ. ಕಾಂಗ್ರೆಸ್ ನೀಡಿದ ಪ್ರಣಾಳಿಕೆಗಳನ್ನು ಪ್ರತಿ ಮನೆಗೆ ತಲುಪಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಜನರಿಗೆ ಅತೀ ಆವಶ್ಯಕವಾದ ಎರಡು ಪ್ರಮುಖ ಅಂಶಗಳಾದ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಪ್ರಣಾಳಿಕೆಯಲ್ಲಿ ನೀಡಲಾಗಿದ್ದು ಅವುಗಳನ್ನು ಪ್ರತಿ ಮನೆ ಮನೆಗಳಿಗೆ ತಲುಪಿಸಿ, ಜನರ ಮನವೊಳಿಸಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಮೊಯಿದು ಕುಂಞಿ ಕೋನಡ್ಕ, ಮಹಾಲಿಂಗ ನಾಯ್ಕ, ಅಬೂಬಕ್ಕರ್ ಕೊರಿಂಗಿಲ, ಹಮೀದ್ ಕೊಮ್ಮೆಮಾರ್, ಐತ್ತಪ್ಪ ಪೇರಲ್ತಡ್ಕ, ಸೀತಾ ಭಟ್, ಮಹಮ್ಮದ್ ಕುಂಞಿ, ಪರಮೇಶ್ವರ ನಾಯ್ಕ ಸೇರಿದಂತೆ ಹಲವು ಮಂದಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ಐತ್ತಪ್ಪ ಪೇರಲ್ತಡ್ಕ ವಂದಿಸಿದರು.