ವಿಟ್ಲ: ಜಾಗದಲ್ಲಿ ವಿದ್ಯುತ್ ಲೈನ್ ಹಾದು ಹೋದ ವಿಚಾರ – ಪರಸ್ಪರ ಹಲ್ಲೆ ಆರೋಪ -ಇತ್ತಂಡಗಳವರ ವಿರುದ್ಧ ಪ್ರಕರಣ ದಾಖಲು

0

ವಿಟ್ಲ: ಜಾಗದಲ್ಲಿ ವಿದ್ಯುತ್ ಲೈನ್ ಹಾದು ಹೋದ‌ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇತ್ತಂಡಗಳವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದು ಪ್ರಕರಣದಲ್ಲಿ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಚೆಂಬರಕಲ್ಲು ನಿವಾಸಿ ಕೃಷ್ಣ ನಾಯ್ಕ್ ರವರ ಪತ್ನಿ ಲೀಲಾ(54 ವ.)ರವರು ದೂರುದಾರರಾಗಿದ್ದಾರೆ. ಈ ಪ್ರಕರಣದಲ್ಲಿ ಕುಶ, ಲವ, ನಾರಾಯಣ ನಾಯ್ಕ, ಕೃಷ್ಣ ನಾಯ್ಕ್‌ ಆರೋಪಿಗಳಾಗಿದ್ದಾರೆ.

ಮಾ.13ರಂದು ನಾನು ನನ್ನ ಮಕ್ಕಳಾದ ಸುನಿಲ್‌ ಮತ್ತು ಸುರೇಶನೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಚೆಂಬರಕಲ್ಲು ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ನಮ್ಮ ಹತ್ತಿರದ ಮನೆಯ ಕುಶ ನಾಯ್ಕ್‌ ರವರು ಸ್ಕೂಟರಿನಲ್ಲಿ ಬಂದ ವೇಳೆ ನಾನು ಆತನಲ್ಲಿ ನೀವು ನಿಮ್ಮ ಮನೆಗೆ ನಮ್ಮ ಅನುಮತಿ ಇಲ್ಲದೆ ನಮ್ಮ ಜಾಗದಿಂದಾಗಿ ವಿದ್ಯುತ್‌ ಲೈನ್ ಎಳೆದಿರುವ ವಿಚಾರವಾಗಿ ಕೇಳಿದಾಗ ಕುಶ ನಾಯ್ಕರವರು ಆ ವಿದ್ಯುತ್‌ ಲೈನ್ ತೆಗೆಯುವುದಿಲ್ಲ. ನೀವು ಏನು ಬೇಕಾದರು ಮಾಡಿ ಎಂದು ಹೇಳಿ ನನಗೆ ಸ್ಕೂಟ‌ರ್‌ನಿಂದ ತಾಗಿಸಿದ್ದಲ್ಲದೆ ನನ್ನ ಮಗ ಸುನಿಲ್‌ನಿಗೆ ಕೈಯಿಂದ ಹೊಟ್ಟೆಗೆ, ಎದೆಗೆ ಹೊಡೆದು ದೂಡಿ ಹಾಕಿದ್ದರು. ಈ ವೇಳೆ ಆ ದಾರಿಯಾಗಿ ಕಾರೊಂದರಲ್ಲಿ ಬಂದ ಕುಶನ ಸಹೋದರರಾದ ಲವ, ನಾರಾಯಣ ನಾಯ್ಕ, ಕೃಷ್ಣ ನಾಯ್ಕ್‌ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಾವು ಬೊಬ್ಬೆ ಹಾಕಿದಾಗ ನನ್ನ ಗಂಡ ಕೃಷ್ಣ ನಾಯ್ಕ್‌ ,ಮೈದುನ ಸುಂದರ ನಾಯ್ಕ್‌ , ಮೈದುನನ ಮಗ ರೋಹಿತ ಹಾಗೂ ನೆರೆಯ ರವಿರವರು ಬರುವುದನ್ನು ನೋಡಿದ ಆರೋಪಿಗಳು ಇನ್ನು ಮುಂದೆ ವಿದ್ಯುತ್‌ ಲೈನ್ ವಿಚಾರಕ್ಕೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಲೀಲರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪಡ್ಪು ಆನೆಕಲ್ಲು ನಿವಾಸಿ ರಾಮ ನಾಯ್ಕ್ ರವರ ಪುತ್ರ ನಾರಾಯಣ ನಾಯ್ಕ್ ರವರು ದೂರುದಾರರಾಗಿದ್ದು,‌ ಪ್ರಕರಣದಲ್ಲಿ ಸುರೇಶ್‌, ಸುನೀಲ್‌, ರೋಹಿತ್‌, ಕೃಷ್ಣ ನಾಯ್ಕ ಆರೋಪಿಗಳಾಗಿದ್ದಾರೆ.

ನನ್ನ ತಮ್ಮನಾದ ಕುಶರವರ ಮನೆಗೆ ಸರ್ಕಾರದ ಬೆಳಕು ಯೋಜನೆಯಡಿ ವಿದ್ಯುತ್ ಲೈನ್‌ನನ್ನು ರಾಮ ನಾಯ್ಕರವರ ಜಮೀನಿನಲ್ಲಿ ಹಾದು ಹೋಗುವುದಕ್ಕೆ ಕೃಷ್ಣ ನಾಯ್ಕ್‌ ಹಾಗೂ ಅವರ ಮನೆಯವರು ಆಕ್ಷೇಪಿಸಿರುತ್ತಾರೆ. ಮಾ.13ರಂದು ಸಾಯಂಕಾಲ ನನ್ನ ತಮ್ಮ ಕುಶ ತನ್ನ ಸ್ಕೂಟರ್‌ನಲ್ಲಿ ನೆರೆಯ ಗಣೇಶ್‌ರವರನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಔಷಧಿ ತರಲು ಹೋಗುತ್ತಿರುವಾಗ ಬಂಟ್ವಾಳ ತಾಲೂಕು ಕರೋಪ್ಪಾಡಿ ಗ್ರಾಮದ ಪಡ್ಪು ಎಂಬಲ್ಲಿ ತಲುಪಿದಾಗ ಆರೋಪಿಗಳಾದ ಸುರೇಶ್‌, ಸುನೀಲ್‌, ರೋಹಿತ್‌ ಹಾಗೂ ಕೃಷ್ಣ ನಾಯ್ಕರವರುಗಳು ಕುಶನ ಸ್ಕೂಟರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡ ನಾನು ಅಲ್ಲಿಗೆ ತೆರಳಿದಾಗ ನನ್ನ ಮೇಲೆಯೂ ತಂಡ ಹಲ್ಲೆ ನಡೆಸಿದೆ. ಈ ವೇಳೆ ನಾನು ಬೊಬ್ಬೆ ಹೊಡೆದಾಗ ನನ್ನ ಸಹೋದರ ಬರುವುದನ್ನು ಕಂಡು ಆರೋಪಿಗಳು ನೀವು ಕರೆಂಟು ಲೈನ್‌ ತೆಗೆಯದೇ ಇದ್ದರೆ ನಿಮ್ಮನ್ನು ಕೊಂದು ಹಾಕುತ್ತೇವೆ ಎಂಬುದಾಗಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ನಾರಾಯಣ‌ ನಾಯ್ಕ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇತ್ತಂಡಗಳವರು ನೀಡಿದ ದೂರನ್ನು ಸ್ವೀಕರಿಸಿದ ಪೊಲೀಸರು ಪರಸ್ಪರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here