ಪುತ್ತೂರು: ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶಾಸಕ ವಿರೂಪಾಕ್ಷ ಮಾಡಾಳ್ ಮನೆಯಲ್ಲಿ 8 ಕೋಟಿ ರೂಪಾಯಿಗಳು ಪತ್ತೆಯಾಗಿದ್ದು ಒಬ್ಬ ಶಾಸಕನ ಮನೆಯಲ್ಲಿ ಅಷ್ಟೊಂದು ದೊಡ್ಡ ಮೊತ್ತ ಹಣವಿರಬೇಕಾದರೆ ಇನ್ನು ಸಚಿವರ ಮನೆಯಲ್ಲಿ ಎಷ್ಟಿರಬಹುದು. ಬಿಜೆಪಿಯ ಭ್ರಷ್ಟಾಚಾರಕ್ಕೆ ಶಾಸಕ ವಿರೂಪಾಕ್ಷ ಮಾಡಾಳ್ ಮೋಡೆಲ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದರು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾ.15ರಂದು ಮುರ ಗೌಡ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್‌ನ ಕರಾವಳಿಯ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರವರು ರಾಜ್ಯ ಸರಕಾರದ ಶೇ.40ಕಮಿಷನ್ ಬಗ್ಗೆ ಆರೋಪಿಸಿ, ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಪತ್ರ ಬರೆದು ಒಂದು ವರ್ಷವಾದರೂ ಪ್ರಧಾನಿಯವರು ಕ್ರಮಕೈಗೊಂಡಿಲ್ಲ. ಜನ ಸಾಮಾನ್ಯರಿಗೆ ವಿರುದ್ಧವಾಗಿ ಬಿಜೆಪಿಯವರು ಆಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಒಂದೇ ಒಂದು ಕಡೆ ದಾಳಿ ನಡೆಸಿಲ್ಲ. ಯಾರನ್ನೂ ಬಂಧಿಸಿಲ್ಲ. ಆದರೆ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ವಿರೋಧ ಪಕ್ಷದವರ ಮೇಲೆ ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಭ್ರಷ್ಠಾಚಾರ ನಡೆಸಿದ್ದೇ ಆದರೆ ಜೈಲಿಗೆ ಹಾಕಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗವುದು. ಬಿಜೆಪಿ ಜನಸಾಮಾನ್ಯರ ಜೀವನ ಸುಧಾರಣೆ ಮಾಡದೇ ಲೂಟಿ ಮಾಡಿರುವುದು ಮಾತ್ರ ಅವರ ಸಾಧನೆಯಾಗಿದೆ. ಬಿಜೆಪಿಯವರು ಸಮಾಜಕ್ಕೆ, ಕುಟುಂಬಕ್ಕೆ ಪೂರಕವಾದ ಯಾವುದೇ ಕಾನೂನು ಮಾಡಿಲ್ಲ. ಲವ್ ಜಿಹಾದ್, ಕೋಮುವಾದವೇ ಮಾತ್ರ ಅವರ ಸಾಧನೆ. ಅವರು ಗೋಮುಖ ವ್ಯಾಘ್ರರಂತೆ. ಅವರಿಂದ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನೆರೆ, ಕೋವಿಡ್ ಬಂದಾಗ ಪ್ರಧಾನಿಯವರು ರಾಜ್ಯಕ್ಕೆ ಬಂದಿಲ್ಲ. ಈಗ ಎರಡು ಬಾರಿ ಬರುತ್ತಾರೆ. ಮೈಸೂರಿನಲ್ಲಿ ಪ್ರಧಾನಿ ಮೋದಿಯವರು ರೌಡಿ ಮುಂದೆ ಕೈ ಮುಗಿದು ನಿಲ್ಲುತ್ತಾರೆ ಅಂದರೆ ಪಾಕಿಸ್ತಾನದವರು ಬಂದರೆ ಏನು ಮಾಡುತ್ತಾರೋ ಎಂದು ಪ್ರಶ್ನಿಸಿದ ಬಿ.ಕೆ ಹರಿಪ್ರಸಾದ್ ಕೃಷಿ ಕಾಯಿದೆ ತಿದ್ದುಪಡಿಯ ಮೂಲಕ ಮೋದಿ ಉಳ್ಳವರಿಗೆ ಮಾತ್ರ ಭೂಮಿ ಎನ್ನುವ ಕಾನೂನು ಜಾರಿಗೆ ತಂದು ಪುನಃ ನಿರ್ಗತಿಕರನ್ನಾಗಿ ಬಿಜೆಪಿ ಮಾಡುತ್ತಿದೆ. ಸಾಮಾಜಿಕ ನ್ಯಾಯ, ಹಕ್ಕನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಘೊಷಣೆ ಮಾಡಿರುವ ಪ್ರಮುಖ ಘೋಷಣೆಯಾದ ಪ್ರತಿ ತಿಂಗಳು 2೦೦ ಯೂನಿಟ್ ವಿದ್ಯುತ್ ಉಚಿತ, ಪ್ರತಿ ಮನೆಯ ಯಜಮಾನಿಗೆ ರೂ.2೦೦೦ ಹಾಗೂ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದ್ದು ವರ್ಷಕ್ಕೆ ಒಂದು ಮನೆಗೆ 55,2೦೦ ದೊರೆಯಲಿದೆ. ಜೊತೆಗೆ ಇತರ ಸಣ್ಣ ಪುಟ್ಟ ಕಾಯಕ ಸಮುದಾಯ ಸಂಬಂಧಪಟ್ಟಂತೆ ಅಭಿವೃದ್ದಿ ನಿಗಮ ಸ್ಥಾಪನೆ, ಅಲ್ಪ ಸಂಖ್ಯಾತ ನಿಗಮ ಮರುಸ್ಥಾಪನೆ ಮಾಡಿ ಅವರಿಗೂ ಸಹಾಯಧನ, ವಂಚಿತ ಸಮುದಾಯಗಳಿಗೆ ಡಿಸಿ ಮನ್ನಾ ಭೂಮಿ. ರೈತರ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು ಇವುಗಳ ಬಗ್ಗೆ ಬೂತ್ ಮಟ್ಟದಲ್ಲಿ ಜನರಿಗೆ ತಿಳಿಸಬೇಕು. ಬಿಜೆಪಿಯವರು ಭಾವನಾತ್ಮಕ ಪ್ರಚೋದನೆ ಹೇಳಿಕೆ ನೀಡಿ ಜನರ ದಾರಿತಪ್ಪಿಸುತ್ತಿದ್ದಾರೆ. ಅಭ್ಯರ್ಥಿ ಯಾರೆಂಬುದು ಮುಖ್ಯವಲ್ಲ ಪಕ್ಷದ ಚಿಹ್ನೆಯೇ ನಮ್ಮ ಅಭ್ಯರ್ಥಿ. ಪಕ್ಷದ ಸಾಧನೆ ಜನರಿಗೆ ಮನವರಿಕೆ ಮಾಡಬೇಕು. ಕೊಡುಗೆಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷವನ್ನು ಗೆಲ್ಲುವಂತೆ ಮಾಡಬೇಕು ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಕಾಂಗ್ರೆಸ್‌ನ ಪ್ರಣಾಳಿಕೆಯ ಕಾರ್ಡ್‌ನ್ನು ಪ್ರತಿ ಮನೆಗಳಿಗೆ ವಿತರಿಸಲಾಗುತ್ತಿದ್ದು ಈ ಕಾರ್ಡ್ ಜನರನ್ನು ಗ್ಯಾರಂಟಿ ಬದಲಾವಣೆ ಮಾಡುತ್ತದೆ. ಜನರಿಗೆ ವಿತರಿಸಿ ಅದರ ಮಹತ್ವವನ್ನು ಮನವರಿಕೆ ಮಾಡಬೇಕು. ಬಿಜೆಪಿಗೆ ಪ್ರತಿಭಟನೆ ಮಾಡಿ, ಬೇಡಿ ಗೊತ್ತು. ಆದರೆ ಕಾಂಗ್ರೆಸ್‌ಗೆ ನೀಡಿ ಮಾತ್ರ ಗೊತ್ತಿರುವುದು. ಪ್ರತಿಭಟನೆ ಮಾಡಿಯೇ ಆಡಳಿತಕ್ಕೆ ಸುಳ್ಳು ಹೇಳಿಯೇ ಅಧಿಕಾರಕ್ಕೆ ಬಂದಿದ್ದಾರೆ. ಹನುಮಗಿರಿಗೆ ರೂ.100 ಕೋಟಿ ಅನುದಾನ ನೀಡಿರುವುದಾಗಿ ಸುಳ್ಳು ಹೇಳಿದವರು ಇನ್ನೇನು ಹೇಳದಿರಲು ಸಾಧ್ಯವಿಲ್ಲ. ಕಾಂಗ್ರೆಸ್ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದಾಗಿ ಭಾರತದವರು ಇಂಗ್ಲೆಂಡ್‌ನಲ್ಲಿ ಅಡಳಿತ ನಡೆಸುವಲ್ಲಿ ಸಾಧ್ಯವಾಗಿದೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯರು, ಚುನಾವಣಾ ಉಸ್ತುವಾರಿಯಾಗಿರುವ ಭರತ್ ಮುಂಡೋಡಿ ಮಾತನಾಡಿ ವಿಧಾನ ಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ನಾವು ಈಗ ಯುದ್ದ ರಂಗದಲ್ಲಿದ್ದೇವೆ. ಶೀಘ್ರದಲ್ಲೇ ಪ್ರಾರಂಭವಾಗಲಿದೆ. ನಮ್ಮಲ್ಲಿ ಯಾವ ಅಸ್ತ್ರವಿದೆ ಮುಖ್ಯವಲ್ಲ. ಎದುರಾಳಿಯಲ್ಲಿರುವ ಅಸ್ತ್ರಕ್ಕೆ ಪ್ರತ್ಯಸ್ತ್ರವನ್ನು ಪ್ರಯೋಗಿಸಬೇಕು. ಜನರಿಗೆ ಅಭಿವೃದ್ಧಿ, ಜನಪರ ಕೆಲಸಗಳು ಪ್ರಾಮುಖ್ಯವಲ್ಲ. ಅಭಿವೃದ್ಧಿಯಲ್ಲಿ ಬಂಟ್ವಾಳ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದರೂ ಸೋತಿದೆ. ಇದಕ್ಕೆ ಕಾರಣವನ್ನು ಹುಡುಕಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ, ಕೆಪಿಸಿಸಿ ಸದಸ್ಯರಾದ ಸತೀಶ್ ಕೆಡೆಂಜ, ರಘು ಬೆಳ್ಳಿಪ್ಪಾಡಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆ:
ಬಿಜೆಪಿ ಕಾರ್ಯಕರ್ತರಾದ ಪ್ರೇಮಾನಂದ ಕಲ್ಲೇಗ, ಶಮಿತ್ ಹಾಗೂ ಪುರಂದರರವರು ಜಯಂತ ಕಲ್ಲೇಗರವರ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ ಸ್ವಾಗತಿಸಿ, ವಂದಿಸಿದರು. ಸಂತೋಷ್ ಮುರ ಕಾರ್ಯಕ್ರಮ ನಿರೂಪಿಸಿದರು.