ಕುಂಬ್ರ ವರ್ತಕರ ಸಂಘದಿಂದ ಉಚಿತ ದಂತ ಚಿಕಿತ್ಸಾ ಶಿಬಿರ

0

ಹಲ್ಲುಗಳೇ ಆರೋಗ್ಯದ ಬುನಾದಿ : ಮೋಹನದಾಸ ರೈ ಕುಂಬ್ರ

ಪುತ್ತೂರು: ಹಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತೀ ಅಗತ್ಯ ಏಕೆಂದರೆ ಹಲ್ಲುಗಳೇ ಆರೋಗ್ಯದ ಬುನಾದಿಯಾಗಿವೆ. ನಾವು ತಿನ್ನುವ ಆಹಾರವನ್ನು ಸರಿಯಾದ ರೀತಿಯಲ್ಲಿ ಜಗಿದು ಹೊಟ್ಟೆಗೆ ಕಳುಹಿಸುವ ಕೆಲಸವನ್ನು ಹಲ್ಲುಗಳು ಮಾಡುತ್ತವೆ. ಆದ್ದರಿಂದ ಹಲ್ಲನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆರೋಗ್ಯ ಮತ್ತು ಮುಖದ ಅಂದದ ದೃಷ್ಟಿಯಿಂದಲೂ ಅತೀ ಅಗತ್ಯ ಎಂದು ಕುಂಬ್ರ ಮಾತೃಶ್ರೀ ಅರ್ಥ್ ಮೂವರ್‍ಸ್‌ನ ಮಾಲಕ, ಉದ್ಯಮಿ ಮೋಹನದಾಸ ರೈ ಕುಂಬ್ರರವರು ಹೇಳಿದರು.


ಅವರು ಕುಂಬ್ರ ವರ್ತಕರ ಸಂಘದ ಆಶ್ರಯದಲ್ಲಿ ಕೆ.ವಿ.ಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇವರ ಸಹಕಾರದೊಂದಿಗೆ ಮಾ.19 ರಂದು ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಹಲ್ಲು ನಮ್ಮ ಮುಖದ ಅಂದವನ್ನು ಹೆಚ್ಚಿಸುವ ಪ್ರಮುಖ ಭಾಗವಾಗಿದ್ದು ಇಂತಹ ಹಲ್ಲಿನ ಸ್ವಚ್ಛತೆ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದ ಮೋಹನ್‌ದಾಸ ರೈಗಳು, ಕುಂಬ್ರ ವರ್ತಕರ ಸಂಘವು ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದು ಸಂಘದಿಂದ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ಕುಂಬ್ರ ವರ್ತಕರ ಸಂಘವು ಗ್ರಾಮದಲ್ಲಿ ಸದಾ ಚಟುವಟಿಕೆಯ ಸಂಘ ಎಂದೆನಿಸಿಕೊಂಡಿದ್ದು ಹಲವು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ಕೂಡ ಸಂಘ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.

ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಮಾತನಾಡಿ, ವರ್ತಕರ ಸಂಘದಿಂದ ಬಹಳಷ್ಟು ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಡೆಂಟಲ್ ಕಾಲೇಜಿನ ಪ್ರೋಫೆಸರ್ ಕೃಷ್ಣಪ್ರಸಾದ್ ಎಲ್‌ರವರು ಮಾತನಾಡಿ, ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಆದ್ದರಿಂದ ಹಲ್ಲಿನ ತಪಾಸಣೆ ಮಾಡಿಕೊಳ್ಳುವುದು ಅಗತ್ಯ ಎಂದರು.


ವರ್ತಕರ ಸಂಘದ ಗೌರವ ಸಲಹೆಗಾರ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಗೌರವ ಸಲಹೆಗಾರ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಗೌರವ ಸಲಹೆಗಾರ ಚಂದ್ರಕಾಂತ ಶಾಂತಿವನ, ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕೊಪ್ಪಳ, ಪತ್ರಕರ್ತ ಸಿಶೇ ಕಜೆಮಾರ್‌ರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.


ಸಂಘದ ಮಾಜಿ ಅಧ್ಯಕ್ಷ ಸುಂದರ್ ರೈ ಮಂದಾರ ಸ್ವಾಗತಿಸಿದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಸಂಘದ ಜತೆ ಕಾರ್ಯದರ್ಶಿ ಚರಿತ್ ಕುಮಾರ್, ಉರ್ಪಾಧ್ಯಕ್ಷ ಉದಯ ಆಚಾರ್ಯ ಕೃಷ್ಣನಗರ, ಸದಸ್ಯರುಗಳಾದ ಸುರೇಶ್ ಕುಮಾರ್ ಸುಶಾ, ಜಯರಾಮ ಆಚಾರ್ಯ, ಹನೀಫ್ ಭಾರತ್, ಕರುಣಾ ರೈ ಬಿಜಳ, ಹನೀಫ್ ಕುಂಬ್ರ, ಉಪಾಧ್ಯಕ್ಷೆ ರಮ್ಯಶ್ರೀ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಅಧ್ಯಕ್ಷ ರಫೀಕ್ ಅಲ್‌ರಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರ.ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಸಂಘದ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಮಾಜಿ ಪ್ರ.ಕಾರ್ಯದರ್ಶಿ ಅಝರ್ ಷಾ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಮಾಜಿ ಅಧ್ಯಕ್ಷ ಮೆಲ್ವಿನ್ ಮೊಂತೆರೋ, ಜತೆ ಕಾರ್ಯದರ್ಶಿ ರೇಷ್ಮಾ ಮೆಲ್ವಿನ್, ರಾಜೇಶ್ ರೈ ಪರ್ಪುಂಜ, ಹನೀಫ್ ಶೇಖಮಲೆ, ರಮೇಶ್ ಆಳ್ವ ಕಲ್ಲಡ್ಕ, ಹನೀಫ್ ಕುಂಬ್ರ, ಗೋವಿಂದ ಶಿವಗಿರಿ, ಡೆಂಟಲ್ ಕ್ಯಾಂಪ್‌ನ ಜಯಂತ್ ತಳ್ಳೂರು ಮತ್ತಿತರರು ಸಹಕರಿಸಿದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್, ಇನ್ಸ್‌ಪೆಕ್ಟರ್ ಶ್ರೀನಾಥ್ ರೆಡ್ಡಿ, ಕುಂಬ್ರ ಬೀಟ್ ಪೊಲೀಸ್ ಪ್ರವೀಣ್ ರೈರವರುಗಳು ಆಗಮಿಸಿ ಶುಭ ಹಾರೈಸಿದರು.

84 ಮಂದಿಯ ದಂತ ತಪಾಸಣೆ
ಶಿಬಿರದಲ್ಲಿ ದಂತ ಕುಳಿ ತುಂಬಿಸುವಿಕೆ, ಹಲ್ಲಿನ ಸ್ವಚ್ಛತೆ, ಹಲ್ಲು ಕೀಳುವಿಕೆ, ಕೃತಕ ದಂತ ಜೋಡಣೆ ಇತ್ಯಾದಿ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ನಡೆದ ಶಿಬಿರದಲ್ಲಿ ಸುಮಾರು 84 ಮಂದಿ ಚಿಕಿತ್ಸೆ ಪಡೆದುಕೊಂಡರು.


19 ನೇ ವರ್ಷದ ಹಾದಿಯಲ್ಲಿ
ಕುಂಬ್ರ ವರ್ತಕರ ಸಂಘವು 19 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಈ ವರ್ಷದಲ್ಲಿ ಈಗಾಗಲೇ ಸ್ವಚ್ಛತಾ ಕಾರ್ಯಕ್ರಮದೊಂದಿಗೆ ಸಂಘವು ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಜ್ಜೆ ಇಟ್ಟಿದ್ದು ಇದರೊಂದಿಗೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಸೇರಿದಂತೆ ತುರ್ತು ಚಿಕಿತ್ಸಾ ಧನ ಸಹಾಯವನ್ನು ಕೂಡ ಮಾಡಿದೆ. ಇದೀಗ ದಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿದ್ದು ಮುಂದಿನ ದಿನಗಳಲ್ಲಿ ಹಲವು ಜನಪರ ಕಾರ್ಯಕ್ರಮಗಳು ಸಂಘದ ಪಟ್ಟಿಯಲ್ಲಿವೆ.

“ ವರ್ತಕರ ಸಂಘದಿಂದ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರದಲ್ಲಿ ಸುಮಾರು 84 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದು ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಶಿಬಿರವು ಯಶಸ್ವಿಯಾಗಿ ನಡೆದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಲ್ಲರ ಸಹಕಾರ ಅಗತ್ಯ.”
ರಫೀಕ್ ಅಲ್‌ರಾಯ, ಅಧ್ಯಕ್ಷರು ವರ್ತಕರ ಸಂಘದ ಕುಂಬ್ರ

LEAVE A REPLY

Please enter your comment!
Please enter your name here