ಪುತ್ತೂರು:ಕಲಿಯುಗ ಕಲೆ,ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸ್ವಾಮಿ ಕೊರಗಜ್ಜ ದೈವದ ೫೦ ಅಡಿ ಎತ್ತರದ ಮೂರ್ತಿ ಸಮರ್ಪಣೆ ಮತ್ತು ವರ್ಷಾವಧಿ ನೇಮೋತ್ಸವ ಮಾ.18ರಂದು ನೆರವೇರಿತು.
ವಾರ್ಷಿಕ ನೇಮೋತ್ಸವದ ಅಂಗವಾಗಿ ಮೊಗೇರ್ಕಳ ತಂಬಿಲ, ಸೂರ್ಯಪ್ರಕಾಶ ಅಂಗಿತ್ತಾಯ ಅವರ ನೇತೃತ್ವದಲ್ಲಿ ಬೆಳಿಗ್ಗೆ ಗಣಹೋಮ, ಕಲಶಾಭಿಷೇಕ, ತಂಬಿಲ ನಡೆಯಿತು.ಸಂಜೆ ಕೆಂಡಸೇವೆಗಾಗಿ ಅಗ್ನಿ ಹಾಕಿದ ಬಳಿಕ ದೈವಗಳ ಭಂಡಾರ ತೆಗೆದು ಅಗ್ನಿ ಸೇವೆ, ದೈವಗಳಿಗೆ ಎಣ್ಣೆಕೊಡುವ ಕಾರ್ಯಕ್ರಮ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ನಂತರ ಅಗ್ನಿ ಕಲ್ಲುರ್ಟಿ, ಮಂತ್ರಗುಳಿಗ, ಧರ್ಮದೈವ, ಅಣ್ಣಪ್ಪ ಪಂಜುರ್ಲಿ, ಕೊರಗಜ್ಜ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
೫೦ ಅಡಿ ಎತ್ತರದ ಕೊರಗಜ್ಜ ಮೂರ್ತಿ ಲೋಕಾರ್ಪಣೆ:
ದೈವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಸುಮಾರು 50 ಅಡಿ ಎತ್ತರದ ಕೊರಗಜ್ಜ ದೈವದ ಮೂರ್ತಿಯನ್ನು ಮಾಣಿಲ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿದರು.ಬಳಿಕ ಮಾತನಾಡಿದ ಅವರು ದೈವ, ದೇವರ ಆರಾಧನೆ ತುಳುನಾಡಿನ ಮಣ್ಣಿನ ಶಕ್ತಿ. ಆರಾಧನೆಯೇ ನಮ್ಮ ತುಳು ಸಂಸ್ಕೃತಿಯ ಆಚರಣೆ.ಆಚರಣೆಗಳನ್ನು ನಿಷ್ಠೆಯಿಂದ ಮಾಡಿದಾಗ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ.ಭಕ್ತಿ ಮತ್ತು ನಿಷ್ಠೆಯಿಂದ ದೈವ, ದೇವರನ್ನು ಆರಾಧಿಸಬೇಕು. ನಮ್ಮಲ್ಲಿ ಭಕ್ತಿಯಿದ್ದಾಗ ಕ್ಷೇತ್ರದ ಶಕ್ತಿ ವೃದ್ಧಿಸಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯತ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ನಾಯ್ಕ್, ನಾಗೇಶ್ ಬಾಳೆಹಿತ್ಲು ಮಾತನಾಡಿ ಶುಭಹಾರೈಸಿದರು.ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ,ಹರ್ಷಿಲ್ ಸೂತ್ರಬೆಟ್ಟು, ಚಂದ್ರಶೇಖರ ಉಪಸ್ಥಿತರಿದ್ದರು.
ಸನ್ಮಾನ:
ಹಿರಿಯ ವಾಲಗ ಕಲಾವಿದ ಸಾಂತಪ್ಪ, ಕ್ಷೇತ್ರದ ಭಕ್ತಿ ಗೀತೆಯನ್ನು ಹಾಡಿದ ಆದ್ಯಾರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಭಕ್ತಿಗೀತೆ ಬಿಡುಗಡೆ:
ಕ್ಷೇತ್ರದ ಕಾರಣಿಕ, ಮಹಿಮೆಯನ್ನು ಆಧಾರಿತ ಭಕ್ತಿಗೀತೆಗಳನ್ನೊಳಗೊಂಡ, ಸಂತೋಷ್ ಮಜಲು ನಿರ್ಮಾಣದಲ್ಲಿ ಮಿಥುನ್ರಾಜ್ ವಿದ್ಯಾಪುರ, ಪದ್ಮರಾಜ್ ಬಿ.ಸಿ ಚಾರ್ವಾಕ ಹಾಗೂ ಆದ್ಯಾ ಅವರ ಗಾಯನದ ಮಜಲ್ದ ಮಾಯೆ',
ಮಜಲ್ದ ವರಮಾಯೆ’ ಹಾಗೂ ಮಜಲ್ದ ಬೊಳ್ಪು' ವೀಡಿಯೋ ಹಾಡುಗಳನ್ನು ಬಿಡುಗಡೆಗೊಳಿಸಲಾಯಿತು.ಪದ್ಮರಾಜ್ ಬಿ.ಸಿ.ಚಾರ್ವಾಕ ಕಾರ್ಯಕ್ರಮ ನಿರ್ವಹಿಸಿದರು.
ಮಹಿಮೆದ ಪಂಜುರ್ಲಿ’ ಯಕ್ಷಗಾನ ಬಯಲಾಟ:
ರಾತ್ರಿ ಶ್ರೀ ಮಂಗಳಾದೇವಿ ಪ್ರಸಾದಿತ ಯಕ್ಷಗಾನ ಮಂಡಳಿ ಮಂಗಳೂರು ಇವರಿಂದ ಮಹಿಮೆದ ಪಂಜುರ್ಲಿ' ತುಳು ಯಕ್ಷಗಾನ ಬಯಲಾಟ ನಡೆಯಿತು.
ರಂಗ್ದ ರಾಜೆ’ ಸುಂದರ ರೈ ಮಂದಾರ ಅವರು ವಿಶೇಷ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ಮಹಾಲಿಂಗೇಶ್ವರ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಸಹಿತ ಹಲವು ಮಂದಿ ಗಣ್ಯರು ಆಗಮಿಸಿ, ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು.