ಮಾ.23ಕ್ಕೆ ಕಾರ್ಮಿಕರ ಮುಷ್ಕರ, ಏ.5ಕ್ಕೆ ರೈತ, ಕಾರ್ಮಿಕರಿಂದ ಡೆಲ್ಲಿ ಚಲೋ – ಬಿ.ಎಂ.ಭಟ್

0

ಪುತ್ತೂರು: ಸರಕಾರದ ಕಾರ್ಮಿಕ ವಿರೋಧಿ ನಡೆ, ಕಾನೂನು ತಿದ್ದುಪಡಿಗಳನ್ನು ಖಂಡಿಸಿ ಮಾ.23ರಂದು ದೇಶಾದ್ಯಂತ ಪ್ರತಿಭಟನೆ ನಡೆಸಿ, ಏ.5ಕ್ಕೆ ದೇಶದ ರೈತ, ಕಾರ್ಮಿಕರು ಒಟ್ಟಾಗಿ ಡೆಲ್ಲಿ ಚಲೋ ಹೋರಾಟವನ್ನು ನಡೆಸಲಾಗುವುದು ಎಂದು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ. ಭಟ್ ಅವರು ತಿಳಿಸಿದ್ದಾರೆ.


ಕಾರ್ಮಿಕರ ಹಕ್ಕು ಸವಲತ್ತುಗಳ ಮೇಲಿನ ದಾಳಿ ಬಿಜೆಪಿ ಸರಕಾರದ ಕೊಡುಗೆಯಾಗಿದೆ. ಕಾರ್ಮಿಕರೇ ತ್ಯಾಗ, ಬಲಿದಾನದ ಹೋರಾಟಗಳಿಂದ ಪಡೆದ ಸವಲತ್ತು, ಹಕ್ಕುಗಳನ್ನೇ ನಾಶಮಾಡುತ್ತಿರುವ ಬಿಜೆಪಿ ಸರಕಾರದ ನಡೆ ಖಂಡನೀಯ. 135 ವರ್ಷ ಹಿಂದೆ 8 ಗಂಟೆ ಕೆಲಸ, 8 ಗಂಟೆ ಮನೋರಂಜನೆ, 8 ಗಂಟೆ ವಿಶ್ರಾಂತಿ ಎಂದು ತ್ಯಾಗ ಬಲಿದಾನಗಳ ಹೋರಾಟದ ಮೂಲಕ ಪಡೆದ ಕಾರ್ಮಿಕ ವರ್ಗದ ಹಕ್ಕಾಗಿದೆ. ಈ ಹೋರಾಟದ ನೆನಪಿಗಾಗಿ ಪ್ರತಿ, ವರ್ಷ ಮೇ ತಿಂಗಳಿನಲ್ಲಿ ಕಾರ್ಮಿಕ ದಿನಾಚರಣೆ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

ಆದರೆ ಬಿಜೆಪಿ ಸರಕಾರ ಈ 8 ಗಂಟೆ ದುಡಿಮೆಯ ಹಕ್ಕನ್ನು 12 ಗಂಟೆಗೆ ಏರಿಸುವುದು ಸರಿಯಲ್ಲ. ಇದು ದೇಶವನ್ನು ಹಿಂದಕ್ಕೆಳೆಯುವ ತಂತ್ರವಾಗಿದೆ. 36,೦೦೦ ಕಾನೂನುಗಳನ್ನು ತೆಗೆದು 4 ಸಂಹಿತೆಗಳ ಮೂಲಕ ಕೇವಲ 4,೦೦೦ ಕಾನೂನುಗಳಿಗೆ ಇಳಿಸಲಾಗಿದೆ. ಗುತ್ತಿಗೆ ಕಾರ್ಮಿಕ ಪದ್ದತಿಗೆ ಮಾನ್ಯತೆ ಹೆಚ್ಚಿಸಿ ಭದ್ರತೆಯ ಕೆಲಸಗಳೇ ಇಲ್ಲವಾಗಿಸಿದೆ. ಕೈಗಾರಿಕೆಗಳಲ್ಲಿದ್ದ ಸಾವಿರಾರು ಖಾಯಂ ಕೆಲಸಗಾರರ ಬದಲಿಗೆ ಇಂದು ಗುತ್ತಿಗೆ ಆಧಾರಿತ ಸಾವಿರ ಸಾವಿರ ಸಂಖ್ಯೆಯ ಕೆಲಸಗಾರರ ಇಟ್ಟುಕೊಳ್ಳಲು ಅವಕಾಶನೀಡಲಾಗಿದೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆಗೆ ಮಹತ್ವ ಇದೆ. ಜನರೇ ತಮ್ಮ ದೇಶದ ಆಡಳಿತ ನಡೆಸಲು ಯೋಗ್ಯರನ್ನು ಮತದಾನದ ಮೂಲಕ ಆರಿಸುವುದಕ್ಕೆ ಚುನಾವಣೆ ಎನ್ನುತ್ತೇವೆ. ಚುನಾವಣೆಯಲ್ಲಿ ಯಾವ ಅಭ್ಯರ್ಥಿಯನ್ನು ಗೆಲ್ಲಿಸಬೇಕು ? ಯಾಕೆ ಗೆಲ್ಲಿಸಬೇಕು? ಎಂಬುದು ಜನರ ಬದುಕಿನ ಭವಣೆಯ ಆಧಾರದಲ್ಲಿ, ಅಭಿವೃದ್ದಿಗೆ ಪೂರಕವಾದ ವಿಚಾರದಲ್ಲಿ ನಿರ್ಧಾರವಾಗಬೇಕು. ಬದಲಿಗೆ ಚುನಾವಣೆಯು ಜಾತಿಧರ್ಮ, ಭಾಷೆಯ ಆಧಾರದಲ್ಲಿ ನಡೆಯಬಾರದು. ಚುನಾವಣೆ ಸಮಯ ಜಾತಿ, ಧರ್ಮ, ಭಾಷೆ ಇತ್ಯಾದಿ ಭಾವನಾತ್ಮಕ ವಿಚಾರದಲ್ಲಿ ಚರ್ಚೆನಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆರೋಗ್ಯಕರ ವಿಚಾರವಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರ ಬದುಕಿನ ಮತ್ತು ದೇಶದ ಅಭಿವೃದ್ದಿಗಳ ಬಗ್ಗೆ ಹಾಗೂ ಜನರ, ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚೆ ನಡೆಯುವಂತಾಗಬೇಕು ಎಂಬುದು ಕಾರ್ಮಿಕ ವರ್ಗದ ಆಶಯ ಎಂದು ಬಿ.ಎಮ್. ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here