ದರ್ಬೆ: ಕೃಷಿ ಇಲಾಖೆಯ `ರೈತ ಸಂಪರ್ಕ ಕೇಂದ್ರ’ದ ಉದ್ಘಾಟನೆ

0

ಪುತ್ತೂರು: ಕೃಷಿಕರು ಸರಕಾರದ ಸವಲತ್ತುಗಳನ್ನು ಭ್ರಷ್ಟಾಚಾರ ರಹಿತವಾಗಿ ಪಡೆದುಕೊಳ್ಳುವ ವ್ಯವಸ್ಥೆಯಿದೆ. ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ನೀಡುವ ಸವಲತ್ತುಗಳನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡುವ ಮೂಲಕ ಭ್ರಷ್ಟಾಚಾರ ರಹಿತವಾಗಿ ಸರಕಾರದ ಸವಲತ್ತುಗಳನ್ನು ರೈತರು ನೀಡಲಾಗುತ್ತಿದೆ. ಇದರಿಂದಾಗಿ ಒಂದೂ ಪೈಸೆಯೂ ಇತರರಿಗೆ ಹೋಗದೆ ಸೌಲಭ್ಯಗಳು ಶೇ.100 ರೈತರು ಪಡೆದಯುವಂತಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ದರ್ಬೆಯಲ್ಲಿ ಮಾ.20ರಂದು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನ ಮಂತ್ರಿಯವರು ರೈತರ ಮೇಲಿನ ಕಾಳಜಿಯಿಂದ ಜಾರಿಗೆ ತಂದಿರುವ ಕಿಸಾನ್ ಸನ್ಮಾನ್ ಯೋಜನೆಯ ಮೊತ್ತವನ್ನು ರೈತರ ಖಾತೆಗೆ ಜಮೆಯಾಗುತ್ತಿದೆ. ಇದರ ಜೊತೆಗೆ ರಾಜ್ಯ ಸರಕಾರ ಪಾಲು ರೈತರ ಖಾತೆಗೆ ಜಮೆಯಾಗುತ್ತಿದೆ. ಈ ಬಾರಿಯ ಬಜೆಟ್ ಬಳಿಕ ಮುಖ್ಯಮಂತ್ರಿಯವರು ಘೋಷಣೆ ಮಾಡಿದ ರೈತ ಶಕ್ತಿ ಯೋಜಯ ಇಂಧನ ಸಬ್ಸಿಡಿಯ ಮೊತ್ತವು ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತಿದೆ. ರೈತರ ನೆಮ್ಮದಿಯ ಬದುಕಿಗೆ ಪೂರಕವಾಗಿ ರೈತ ವಿದ್ಯಾನಿಧಿ, ಕಿಸಾನ್ ಸನ್ಮಾನ್, ಫಸಲ್ ಭಿಮಾ ಯೋಜನೆ, ಅಡಿಕೆ ಉತ್ಪಾದನಾ ವೆಚ್ಚ ಏರಿಕೆ, ಪುತ್ತೂರಿಗೆ ಉಪ ಕೃಷಿ ನಿರ್ದೇಶಲನಾಯ ಕಚೇರಿ ಮೊದಲಾದ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರಿಗೆ ಕೃಷಿಗೆ ಸಂಬಂಧಿಸಿದ ಮಾಹಿತಿ, ಸರಕಾರದ ಸೌಲಭ್ಯಗಳು ಸುಲಭವಾಗಿ ಪಡೆದುಕೊಳ್ಳಲು ರೈತ ಸಂಪರ್ಕ ಕೇಂದ್ರದ ಉತ್ತಮ ಕಟ್ಟಡವನ್ನು ಒದಗಿಸಲಾಗಿದೆ ಎಂದು ಹೇಳಿದರು.


ಪುತ್ತೂರು ಅತೀ ಹೆಚ್ಚು ಇಲಾಖೆ ಹೊಂದಿರುವ ತಾಲೂಕು. ಇಲ್ಲಿರುವಷ್ಟು ಇಲಾಖೆಗಳು ಎಲ್ಲಿಯೂ ಇಲ್ಲ. ಎಲ್ಲಾ ಇಲಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಡಳಿತ ಸೌಧದಲ್ಲಿ ಕಂದಾಯ ಇಲಾಖೆಯ ಸೇವೆಗಳು ಒಂದೇ ಕಡೆ ದೊರೆಯುವಂತೆ ರೈತರಿಗೆ ಕೃಷಿಗೆ ಸಂಬಂಧಿಸಿ ಎಲ್ಲಾ ಸೇವೆಗಳು ಒಂದೇ ಸೂರಿನಡಿಯಲ್ಲಿ ದೊರೆಯಬೇಕು. ಇದಕ್ಕೆ ಪೂರಕವಾಗಿ ಕೃಷಿ ಇಲಾಖೆಗೂ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೂ ಪ್ರಯತ್ನಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ರೈತರು ಬೆಳೆಯುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ನಗರ ಸಭೆಯಿಂದ ದಿನವಹಿ ಮಾರುಕಟ್ಟೆ ತೆರೆಯಲು ಚಿಂತನೆ ನಡೆಸಲಾಗುವುದು ಎಂದು ಹೇಳಿದರು.


ಮುಖ್ಯ ಅತಿಥಿ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಮಾತನಾಡಿ, ಕೃಷಿಕರಿಗೆ ಅತೀ ಆವಶ್ಯಕವಾದ ರೈತ ಸಂಪರ್ಕ ನಿರ್ಮಿಸುವ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಅವರು ಕೃಷಿಕ ಸಮಾಜಕ್ಕೂ ಜಾಗ ಮಂಜೂರಾಗಿದ್ದು ಅಲ್ಲಿ ರೂ.40ಲಕ್ಷದಲ್ಲಿ ನಿರ್ಮಾಣವಾಗಲಿರುವ ಭವನಕ್ಕೆ ಅಂದಾಜುಪಟ್ಟಿ ಸಿದ್ದವಾಗಿದೆ ಎಂದರು.


ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ ಮಾತನಾಡಿ, ರೈತ ಸಂಪರ್ಕ ಕೇಂದ್ರದ ಮೂಲಕ ಕೃಷಿಯ ಸಂಬಂಧಿಸಿದ ವಿಭಿನ್ನ ತಳಿ, ಪರಿಕರಗಳ ಮಾಹಿತಿ, ಸರಕಾರ ಸೌಲಭ್ಯಗಳ ಮಾಹಿತಿ ದೊರೆಯುವ ಮೂಲಕ ಕೃಷಿಕರ ಬೃಹತ್ ಮಾಹಿತಿ ಕೇಂದ್ರವಾಗಿ ಬೆಳೆಯಲಿ ಎಂದರು.


ಉಪ ಕೃಷಿ ನಿರ್ದೇಶಕ ಶಿವಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ರೈತ ಸಂಪರ್ಕ ಕೇಂದ್ರಗಳು ರೈತರ ಪ್ರಾಥಮಿಕ ಸಂಪರ್ಕ ಕೇಂದ್ರಗಳಾಗಿದೆ. ಅಲ್ಲಿ ಕೃಷಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಶಾಸಕರ ಮುತುವರ್ಜಿಯಿಂದ ಜಾಗ ಮಂಜೂರಾಗಿ ವ್ಯವಸ್ಥಿತವಾಗಿ ಸ್ವಂತ ಕಟ್ಟಡದಲ್ಲಿ ನಿರ್ಮಾಣಗೊಂಡಿದೆ. ಮುಂದೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಬಾಡಿಗೆ ಕಟ್ಟಡದಲ್ಲಿರುವುದಲ್ಲದೆ ಸಹಾಯಕ ನಿರ್ದೇಶಕರ ಕಚೇರಿಯು ಹಳೆಯ ಕಟ್ಟಡದಲ್ಲಿದ್ದು ನೂತನ ಕಟ್ಟಡ ಮಂಜೂರುಗೊಳಿಸುವಂತೆ ಶಾಸಕರಲ್ಲಿ ವಿನಂತಿಸಿದರು.
ಸಹಾಯಕ ಆಯುಕ್ತ ಗಿರೀಶ್ ನಂದನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ವಿವಿಧ ಸವಲತ್ತುಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಕೃಷಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಯಶಸ್ ಮಂಜುನಾಥ ಸ್ವಾಗತಿಸಿ, ವಂದಿಸಿದರು. ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here