ನಿಡ್ಪಳ್ಳಿ : ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ, ದೇವಸ್ಯರವರ ಅಧ್ಯಕ್ಷತೆಯಲ್ಲಿ ಮಾ.20 ರಂದು ಜರುಗಿತು.
ಶಾಲೆಯ ಹಿರಿಯ ವಿದ್ಯಾರ್ಥಿ, ನೌಕಾ ದಳದ ನಿವೃತ್ತ ಯೋಧ ಪುಷ್ಪರಾಜ ಶೆಟ್ಟಿ ಕೋಟೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅತಿ ಅಗತ್ಯ ಎಂದರು.
ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಾದ ರಕ್ಷಿತಾ ರಾವ್ ಕೆ (96.32%), ಅನನ್ಯ ಎಸ್ (93.28), ಅವನೀಶ್ ಭಾರದ್ವಾಜ್ (92.32) ಅವರನ್ನು ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ಟರು ನೀಡಿದ ವಿಶೇಷ ಬಹುಮಾನವನ್ನು ಶಾಲು ಹೊದೆಸಿ ಫಲ ಪುಷ್ಪ, ಬೆಳ್ಳಿಯ ಪದಕದೊಂದಿಗೆ ನೀಡಿ ಗೌರವಿಸಿ ಅಭಿನಂದಿಸಲಾಯಿತು. ವಿವಿಧ ದತ್ತಿ ನಿಧಿಯನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ವಿಜಯಿಗಳಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೀರ್ತಿ ಸುಬ್ರಹ್ಮಣ್ಯ ಹಾಗೂ ಪ್ರಜ್ಞಾ ಅವರನ್ನು ಅವರ ಕರ್ತವ್ಯ ನಿಷ್ಠೆಯನ್ನು ಗೌರವಿಸಿ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ಟರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಶ್ರೀಪತಿ ಭಟ್ ಇಂದಾಜೆ ವಂದಿಸಿದರು. ಸಹಶಿಕ್ಷಕಿ ನಿರ್ಮಲ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಎಸ್.ಪಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯವರು ಸಹಕರಿಸಿದರು.