ನಾಳೆಯಿಂದ (ಮಾ.22) ಬಲ್ನಾಡು ಉಜ್ರುಪಾದೆ ವಿನಾಯಕನಗರದ ಕೊರಗಜ್ಜ, ಮಂತ್ರಗುಳಿಗ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ನೇಮೋತ್ಸವ

0

ಪುತ್ತೂರು: ತುಳುನಾಡಿನ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಬಲ್ನಾಡು ಗ್ರಾಮದ ಉಜ್ರುಪಾದೆ ವಿನಾಯಕ ನಗರ ಶ್ರೀ ಕೊರಗಜ್ಜ ಮತ್ತು ಶ್ರೀ ಮಂತ್ರಗುಳಿಗ ದೈವಗಳ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವವು ಮಾ.22 ಹಾಗೂ 23ರಂದು ನಡೆಯಲಿದೆ.

ಸುಮಾರು 50 ವರ್ಷಗಳ ಹಿಂದೆ ಕೃಷ್ಣ ಭಟ್ ವಿನಾಯಕನಗರ ಇವರ ಮಾರ್ಗದರ್ಶನದಲ್ಲಿ ದಿ.ಕುಟ್ಟಿ ನಲಿಕೆ ಇವರಿಂದ ಸ್ಥಾಪಿತಗೊಂಡ ಶ್ರೀ ಕೊರಗಜ್ಜ ಕ್ಷೇತ್ರವು ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ತನ್ನ ಕಾರಣಿಕತೆಯನ್ನು ತೋರಿಸಿದ ಹಲವು ನಿದರ್ಶನಗಳಿರುವ ಕ್ಷೇತ್ರವಾಗಿದೆ. ಕಷ್ಟದ ಸಮಯದಲ್ಲಿ ಕ್ಷೇತ್ರದಲ್ಲಿ ಬಂದು ಪ್ರಾರ್ಥಿಸಿದ ಭಕ್ತರಿಗೆ ಕೆಲವೇ ದಿನಗಳಲ್ಲಿ ಕಷ್ಟ ಪರಿಹಾರವಾದ ಅನೇಕ ಘಟನೆಗಳ ಬಗ್ಗೆಯೂ ಉಲ್ಲೇಖವಿದೆ. ದನಕರುಗಳಿಗೆ ಕಷ್ಟ ಬಂದಾಗ ತಕ್ಷಣ ಗುಣಮುಖವಾಗುವಂತೆ ಮಾಡಿದ ಹಲವು ಉದಾಹರಣೆಗಳಿವೆ. ಕ್ಷೇತ್ರದಲ್ಲಿ ಪ್ರತಿ ತಿಂಗಳು ಹರಕೆಯ ಅಗೇಲು ಸೇವೆ ನಡೆಯುತ್ತಿದೆ. ನಿತ್ಯ ದೀಪ ಇಡುವುದು, ಸೋಣ ತಿಂಗಳಲ್ಲಿ ವಿಶೇಷ ದೀಪ ಇಡುವುದು ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿದೆ.

ಬ್ರಹ್ಮಶ್ರೀ ವೇ.ಮೂ ರವಿಚಂದ್ರ ನೆಲ್ಲಿತ್ತಾಯ ಬಲ್ನಾಡು ಇವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾ.22 ರಂದು ಸಂಜೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದಶುದ್ಧಿ, ಸಪ್ತಶುದ್ಧಿ, ರಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರಬಲಿ, ಧ್ಯಾನ್ಯಾಽವಾಸ ರಾತ್ರಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಮಾ.23ರಂದು ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ, ಗಣಹೋಮ, ಪ್ರತಿಷ್ಠಾ ಹೋಮ, ಪಂಚವಿಂಶತಿ ಕಲಶ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ನಂತರ ಕಲ್ಲುರ್ಟಿ, ಮಂತ್ರಗುಳಿಗ ಹಾಗೂ ಕೊರಗಜ್ಜ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here