ಪುತ್ತೂರು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಕೊಡ ಮಾಡುವ ಕೆ.ವಿ. ಆರ್ ಹ್ಯಾಗೋರ್ ಸ್ಮರಣಾರ್ಥ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಟಿ. ತಿಮ್ಮೆಗೌಡ ಹಾಗೂ ಡಾ.ವೆಂಕಟೇಶ್ ತುಪ್ಪಿಲ್ ನೀಡುವ ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತ ಬದ್ರುದ್ದೀನ್ ಕೆ. ಮಾಣಿ ಅರ್ಹರಾಗಿದ್ದಾರೆ.
ಬಂಟ್ವಾಳ ಮಾಣಿಯ ಕೊಡಾಣೆ ನಿವಾಸಿಯಾದ ಇವರು ಆರಂಭದಲ್ಲಿ ಮಂಡ್ಯದ ಸ್ಥಳೀಯ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಮೂಲಕ ಮಾಧ್ಯಮಕ್ಕೆ ಕಾಲಿಟ್ಟರು. ೧೯೯೫ರಲ್ಲಿ ಕೇಬಲ್ ವಾಹಿನಿ ಮೂಲಕ ಎಂಟಿಎನ್ ವಾರ್ತೆ’ ಪ್ರಾರಂಭಿಸಿದರು. ‘ಎಂಟಿಎನ್ ವಾರ್ತೆ ಮುಖ್ಯ ವರದಿಗಾರನಾಗಿ ಸೇವೆ ಸಲ್ಲಿಸಿ ಬಳಿಕ ೨೦೦೨ರಿಂದ ಉದಯ ಟಿವಿ ಮಂಡ್ಯ ಜಿಲ್ಲಾ ವರದಿಗಾರರಾಗಿಯೂ ೨೦೦೭ರಿಂದ ಬೆಂಗಳೂರಿನಲ್ಲಿ ಕಸ್ತೂರಿ ವಾಹಿನಿ ರಾಜಕೀಯ ವರದಿಗಾರರಾಗಿಯೂ, ೨೦೧೪ರಿಂದ ಪಬ್ಲಿಕ್ ಟಿವಿ ರಾಜಕೀಯ ವಿಭಾಗದಲ್ಲಿ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಧ್ಯಮದಲ್ಲಿ ಸರಿ ಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಯಾಗಿ ಹಲವು ವರ್ಷ ಕಾರ್ಯನಿರ್ವಹಿಸಿ, ಮಂಡ್ಯ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಂಡ್ಯ ಜಿಲ್ಲಾ ತೋಟಗಾರಿಕಾ ಸಂಘದಲ್ಲಿ ಪದಾಧಿಕಾರಿ, ಬೆಂಗಳೂರು ವರದಿಗಾರರ ಕೂಟದ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಕಳೆದ ೧೨ ವರ್ಷಗಳಿಂದ ಇದ್ದಾರೆ. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾಗಿ ಎರಡುವರೆ ವರ್ಷ ಸೇವೆ ಸಲ್ಲಿಸಿದ್ದಾರೆ. ೪ ವರ್ಷದಿಂದ ರಾಜ್ಯ ಪತ್ರಕರ್ತರ ಮಾನ್ಯತಾ ಸಮಿತಿ ಸದಸ್ಯನಾಗಿ, ಕರ್ನಾಟಕ ಬ್ಯಾರಿ ಸಾಹಿಯ ಅಕಾಡೆಮಿ ಸದಸ್ಯನಾಗಿ ೩ವರ್ಷ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿದ್ದಾರೆ. ೨೦೦೬ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ೨೦೧೮ ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ, ೨೦೨೦ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಾಡಪ್ರಭು ಕಂಪೇಗೌಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪತ್ನಿ ಸಮೀಮ್ ಹಾಗೂ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ.