ಬೊಳುವಾರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಆಶ್ಲೇಷ ಬಲಿ, ಅರ್ಧ ಏಕಾಹ ಭಜನೆ, ಜನಜಾಗೃತಿ ಸಭೆ

0
  • 2ನೇ ಹೋರಾಟವೂ ಯಶಸ್ವಿಯಾಗಿದೆ-ಶ್ರೀ ರಾಜಶೇಖರಾನಂದ ಸ್ವಾಮೀಜಿ
  • ಸ್ವಾಭಿಮಾನಿಯಾಗಿ ಎದ್ದು ನಿಂತರೆ ಎಲ್ಲ ಕಾರ್ಯ ಸಾಧ್ಯ ಎಂಬುದಕ್ಕೆ ಸಾಕ್ಷಿ – ಕುಂಟಾರು ರವೀಶ ತಂತ್ರಿ
  • ಹಿಂದು ಜಾಗರಣ ವೇದಿಕೆ ದೇಶಕ್ಕಾಗಿ ಹೋರಾಡುವ ದೊಡ್ಡ ಸಂಘಟನೆ- ಡಾ.ಎಂ.ಕೆ.ಪ್ರಸಾದ್
  • ಡಾ.ಎಂ.ಕೆ.ಪ್ರಸಾದ್ ಅವರ ಕನಸು ನನಸಾಗಿದೆ – ಮೋಹನ್‌ರಾಮ್ ಸುಳ್ಳಿ
  • ನ್ಯಾಯ ಸಮ್ಮತವಾದ ಹೋರಾಟಕ್ಕೆ ಸಮಾಜ ಸಂಘಟನೆ ಸೇರಬೇಕು- ರವಿರಾಜ್ ಶೆಟ್ಟಿ ಕಡಬ

ಪುತ್ತೂರು:ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಬಂಧಿಸಿ ಇಲ್ಲಿನ ಬೊಳುವಾರಿನಲ್ಲಿರುವ ಸ್ಥಳದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಆಶ್ಲೇಷ ಬಲಿ, ಅರ್ಧ ಏಕಾಹ ಭಜನೆ, ಜನಜಾಗೃತಿ ಸಭೆಯು ವೈಭವದಿಂದ ನಡೆಯಿತು. ಸಂಜೆ ಜನಜಾಗೃತಿ ಸಭೆಗೆ ಮೊದಲು ದೇವಳಕ್ಕೆ ಸಂಬಂಧಿಸಿದ ಜಾಗಕ್ಕೆ ನೂತನವಾಗಿ ‘ಸುಬ್ರಹ್ಮಣ್ಯ ನಗರ’ ನಾಮಫಲಕವನ್ನು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಅನಾವರಣಗೊಳಿಸಿದರು.

ಬಳಿಕ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕಾರಿಂಜೇಶ್ವರ ದೇವಸ್ಥಾನದ ಸುತ್ತ ಗಣಿಗಾರಿಕೆ ನಡೆಯಬಾರದು ಎಂಬ ಹೋರಾಟಕ್ಕೆ ಸಂಘಟನೆ ಮೂಲಕ ಮೊದಲ ಯಶಸ್ವಿ ಸಿಕ್ಕಿತ್ತು. ಪುತ್ತೂರಿನ ಬೊಳುವಾರಿನದ್ದು 2ನೇ ಹೋರಾಟ. ಕುಕ್ಕೆ ಸುಬ್ರಹ್ಮಣ್ಯ ಎಲ್ಲಿ ಪುತ್ತೂರಿನ ಬೊಳುವಾರು ಎಲ್ಲಿ.? ಈ ಜಾಗವನ್ನು ದೇವಸ್ಥಾನಕ್ಕೆ ದಾನ ಕೊಟ್ಟದ್ದು ಬ್ರಾಹ್ಮಣರು, ಆದರೆ ಅದರಲ್ಲಿ ಇದ್ದದ್ದು ಗುಜರಿ ಅಂಗಡಿಯವರು. ಈ ಜಾಗವನ್ನು ಮತ್ತೆ ಸ್ವಾಧೀನ ಪಡೆಯಲು ದೇವಳದ ಹಿಂದಿನ ವ್ಯವಸ್ಥಾಪನಾ ಸಮಿತಿ ಮುಂದೆ ಹೋಗಿಲ್ಲ. ಅಧಿಕಾರಿಗಳ ತಂಡವೂ ಮುಂದೆ ಬರಲಿಲ್ಲ. ನ್ಯಾಯಾಲಯದ ತೀರ್ಪಿಗೂ ಬೆಲೆ ಇಲ್ಲದಾಗ ಮತ್ತೆ ಬೆಲೆ ಯಾವುದಕ್ಕೆ ಎಂದು ಪ್ರಶ್ನಿಸಿದರು. ಈ ದೇಶಕ್ಕೆ ಇವತ್ತು ಗಟ್ಟಿಯಾದ ಪ್ರಧಾನಿ ಇರುವುದರಿಂದಾಗಿ ಅದರ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಈಗ ಹಿಂದು ಜಾಗರಣ ವೇದಿಕೆ ಜಾಗವನ್ನು ಮತ್ತೆ ದೇವಸ್ಥಾನಕ್ಕೆ ಕೊಡಿಸುವಲ್ಲಿ ಕೆಲಸ ಮಾಡಿದೆ. ಹಿಂದು ದೇವಸ್ಥಾನ, ಮಂದಿರ, ಗೋವು, ಹಿಂದು ಮಹಿಳೆಯರಿಗೆ ಅನ್ಯಾಯವಾದಾಗ ಮುಂಚೂಣಿಯಲ್ಲಿ ಬರುವವರು ಹಿಂದು ಜಾಗರಣ ವೇದಿಕೆಯವರು. ಇವತ್ತು ಈ ಸಂಘಟನೆ ದೇವಸ್ಥಾನದ ಜಾಗವನ್ನು ಅನ್ಯರಿಂದ ಪಡೆಯುವ ಮೂಲಕ ಧರ್ಮ ಜಾಗೃತಿ ಮಾಡಿದೆ ಎಂದ ಸ್ವಾಮೀಜಿ, ಇವತ್ತು ಈ ಜಾಗವನ್ನು ಯಶಸ್ವಿಯಾಗಿ ಹಿಂಪಡೆದ ಬಳಿಕ ಈ ಜಾಗದ ಸ್ಥಳೀಯ ಹಿಂದು ಬಂಧುಗಳು ಭಯ ಪಡುವುದು ಬೇಡ. ಹಿಂದು ಬಂಧುಗಳಿಗೆ ದೇವರ ರಕ್ಷಣೆ, ಹಿಂದು ಜಾಗರಣ ವೇದಿಕೆಯೂ ರಕ್ಷಣೆಯಾಗಿ ಇದೆ. ಹಿಂದುಗಳಿಗೆ ಅನ್ಯಾಯ ಆಗುವಲ್ಲಿ ಹಿಂದು ಜಾಗರಣ ವೇದಿಕೆ ಹೋರಾಟ ಮಾಡುತ್ತದೆ ಎಂದರು.

ಸ್ವಾಭಿಮಾನಿಯಾಗಿ ಎದ್ದು ನಿಂತರೆ ಎಲ್ಲ ಕಾರ್ಯ ಸಾಧ್ಯ ಎಂಬುದಕ್ಕೆ ಸಾಕ್ಷಿ:

ಬ್ರಹ್ಮಶ್ರೀ ವೇ.ಮೂ. ಕುಂಟಾರು ರವೀಶ ತಂತ್ರಿಯವರು ದಿಕ್ಸೂಚಿ ಭಾಷಣ ಮಾಡಿದರು. ಸಮಾಜದಲ್ಲಿ ತಪ್ಪು ದಾರಿಯಲ್ಲಿ ಕೊಂಡೊಯ್ಯುವ ಸಂದರ್ಭದಲ್ಲಿ ಆ ತಪ್ಪು ದಾರಿಯ ವಿರುದ್ಧ ಸೆಟೆದು ಆತ್ಮವಿಶ್ವಾಸದಿಂದ ಯಾವ ರೀತಿಯ ಅಕ್ರಮ ನಡೆದರೂ ಆ ಆಕ್ರಮಮಣವನ್ನು ಸ್ವೀಕಾರ ಮಾಡಲಿರುವ ಆತ್ಮಸ್ಥೈರ್ಯದೊಂದಿಗೆ ಮುನ್ನುಗ್ಗುವ ಸಂಘಟನೆ ಪ್ರಪಂಚದಲ್ಲಿದ್ದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಸಂಘ ಪರಿವಾರದ ಸಂಘಟನೆಯಾಗಿದೆ. ಈ ನಿಟ್ಟಿನಲ್ಲಿ ನಾವು ಸ್ವಾಭಿಮಾನಿಯಾಗಿ ಎದ್ದು ನಿಂತರೆ ಎಲ್ಲ ಕಾರ್ಯ ಮಾಡಲೂ ಸಾಧ್ಯವಿದೆ ಎಂಬುದಕ್ಕೆ ಸಾಕ್ಷಿಯಾಗಿ, ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಿಂದ ಸಮಾಜದ ಒಳಿತಿಗಾಗಿ ನಡೆಯುವ ಸೇವೆಗಾಗಿ ಇವತ್ತು ಈ ಪ್ರದೇಶವನ್ನು ಸಮರ್ಪಣೆ ಮಾಡಲು ಹಿಂದು ಜಾಗರಣ ವೇದಿಕೆ ನೇತೃತ್ವ ವಹಿಸಿದೆ. ಇದು ಪ್ರಾರಂಭದ ಮುಹೂರ್ತ ಎಂದರು.ಪಿಎಫ್‌ಐ ಈಗಾಗಲೇ ನಿಷೇಧ ಆಗಿದ್ದರೂ ಇನ್ನೊಂದು ಹೆಸರಿನಲ್ಲಿ ಹುಟ್ಟಿಕೊಳ್ಳುತ್ತದೆ. ಯಾಕೆಂದರೆ ಕೇರಳದಲ್ಲಿ ಅವರ ಕನಸು ನಸಾಗಿಲ್ಲ.ಕರ್ನಾಟಕದಲ್ಲಿ ಆಗಬಹುದೆಂಬ ತೀರ್ಮಾನ ಮಾಡಿದ್ದರೂ ಇಲ್ಲಿಯೂ ಅದು ನನಸಾಗುವುದಿಲ್ಲ. ಹಾಗಾಗಿ ಭವಿಷ್ಯತ್‌ನಲ್ಲಿ ಅವರು ಭಾರತದ ಪ್ರಜೆಗಾಗಿ ಭಾರತೀಯತೆಯನ್ನು ಒಪ್ಪಿಕೊಂಡು ಭಾರತ ಮಾತೆಗ ಜಯಕಾರ ಕೂಗಿಕೊಂಡು ಜೀವಿಸುವುದಾದರೆ ಮಾತ್ರ ಅವರು ಭಾರತದಲ್ಲಿ ಇರಬೇಕು. ಧರ್ಮೋ ರಕ್ಷತಿ ರಕ್ಷಿತಃ ಎಂಬ ಕಲ್ಪನೆಯಂತೆ ಧರ್ಮ ರಕ್ಷಣೆಗಾಗಿ ಯಾರು ಮುಂದಡಿ ಇಡುತ್ತಾರೋ ಅವರಿಗೆ ಬೇಕಾಗಿರುವ ರಕ್ಷಣೆಯನ್ನು ಧರ್ಮ ನೀಡುತ್ತದೆ ಎಂಬ ವಿಚಾರ ಧಾರೆಯೊಂದಿಗೆ ನಾವು ಮುಂದಡಿಯಿಟ್ಟರೆ ನಾವು ಯಶಸ್ವಿಯಾಗುತ್ತೇವೆ ಎಂದರಲ್ಲದೆ, ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ಒಬ್ಬ ಕೇರಳದ ಸಂಘಟನೆಯ ಕಾರ್ಯಕರ್ತನಾಗಿ ಹೃದಯ ಪೂರ್ವಕ ನಮನ ಸಲ್ಲಿಸುವುದಾಗಿ ಹೇಳಿದರು. ಇಲ್ಲಿ ನಡೆದಿರುವ ಹೋರಾಟ ಕರ್ನಾಟಕ ಸ್ಟೈಲ್‌ನ ಹೋರಾಟವಲ್ಲ. ಕೇರಳ ಸ್ಟೈಲ್‌ನ ಹೋರಾಟ ಪ್ರಾರಂಭ ಮಾಡಿದ್ದೇವೆ.ಈ ಹೋರಾಟದಿಂದ ನಾವು ಜಯಿಸಿದ್ದೇವೆ.ನಾವೆಲ್ಲ ಒಗ್ಗಟ್ಟಾಗಿ ನಿಂತರೆ ಎಲ್ಲವನ್ನೂ ಎದುರಿಸಲು ಸಾಧ್ಯವಿದೆ ಎಂದವರು ಹೇಳಿದರು.

ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತಾಡುವುದು

ಇಲ್ಲಿ ಮಂದಿರ ನಿರ್ಮಾಣಕ್ಕೆ ದೈವಾನುಗ್ರಹವಿದೆ:

ಮೋಹನ್‌ರಾಮ್ ಸುಳ್ಳಿ ಅವರು ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ, ದೇವಸ್ಥಾನದಲ್ಲಿರುವ ಸಂಪತ್ತು ಸದ್ವಿನಿಯೋಗ ಆಗಬೇಕೆಂದಾಗ ಅದಕ್ಕೆ ಬೆಂಬಲವಾಗಿ ಹಿಂದು ಜಾಗರಣ ವೇದಿಕೆ ನಿಂತಿದೆ. ಆ ಪ್ರಯತ್ನದಿಂದ ಈ ಜಾಗದಲ್ಲಿ ಭವಿಷ್ಯತ್‌ನಲ್ಲಿ ಹಿಂದು ಸಮಾಜಕ್ಕೆ ಉಪಯೋಗ ಆಗುವ ಮಂದಿರವನ್ನು ನಿರ್ಮಾಣ ಮಾಡುವ ತೀರ್ಮಾನ ಮಾಡಿ ಆಗಿದೆ.ಅದಕ್ಕೆ ದೇವರ ಅನುಗ್ರಹವಿದೆ. ಸಮಾಜದ ಬೆಂಬಲವಿದೆ ಎಂದು ಕುಂಟಾರು ರವೀಶ್ ತಂತ್ರಿ ಹೇಳಿದರು.

ಮೋಹನ್‌ರಾಮ್ ಸುಳ್ಳಿ ಮಾತನಾಡುವುದು

ಹಿಂದು ಜಾಗರಣ ವೇದಿಕೆ ದೇಶಕ್ಕಾಗಿ ಹೋರಾಡುವ ದೊಡ್ಡ ಸಂಘಟನೆ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಅವರು ಮಾತನಾಡಿ ಹಿಂದೆ ಭಾರತದ ಎಲ್ಲಾ ಪ್ರಮುಖ ಸ್ಥಳಗಳನ್ನು ಬ್ರಿಟೀಷರು ಧರ್ಮಕ್ಕೆ ಅನ್ಯ ಧರ್ಮದವರಿಗೆ ಕೊಟ್ಟಿದ್ದರಿಂದ ಇವತ್ತು ನಮಗೆ ಜಾಗ ಇಲ್ಲದಂತಾಗಿದೆ. ಬೊಳುವಾರಿನಲ್ಲಿ ಇವತ್ತು ಅನ್ಯರ ಪಾಲಾಗಿದ್ದ ಜಾಗವನ್ನು ಮತ್ತೆ ದೇವಸ್ಥಾನಕ್ಕೆ ಕೊಡಿಸುವಲ್ಲಿ ನಮ್ಮ ಹುಡುಗರ ಪಾತ್ರ ಮಹತ್ವದ್ದು, ದೇಶ ಪ್ರೇಮ, ಹಿಂದು ಧರ್ಮದ ಪ್ರೇಮ ಇರುವುದು ನಮ್ಮ ಹುಡುಗರಿಗೆ ಮಾತ್ರ ಎಂದು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಅಭಿನಂದಿಸಿ, ನಿಮ್ಮ ಛಲ ಬಿಡಬೇಡಿ.ಮುಂದೆ ಹಿಂದು ಸಮಾಜಕ್ಕೆ ಸೇರಿದ ಜಾಗವನ್ನು ಬಿಡಿಸಿ ಕೊಡಿ. ಭಾರತ ಸಂಪೂರ್ಣ ಹಿಂದು ರಾಷ್ಟ್ರವಾಗಬೇಕು.ಆ ರೀತಿಯ ಕೆಲಸ ಮಾಡಿ ಎಂದರು.

ರವಿರಾಜ್ ಶೆಟ್ಟಿ ಕಡಬ ಮಾತನಾಡುವುದು

ಡಾ.ಎಂ.ಕೆ.ಪ್ರಸಾದ್ ಅವರ ಕನಸು ನನಸಾಗಿದೆ:

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ ಅವರು ಮಾತನಾಡಿ ಭಜನೆಯ ಮೂಲಕ ನಾವೆಲ್ಲ ಒಂದು ಗೂಡಲು ಸಾಧ್ಯವೆಂದು ಹಿಂದು ಜಾಗರಣ ವೇದಿಕೆ ಈ ಜಾಗದಲ್ಲಿ ಬೆಳಗ್ಗಿನಿಂದಲೇ ಭಜನಾ ಕಾರ್ಯಕ್ರಮ ನಡೆಸಿ ಧರ್ಮ ಜಾಗೃತಿ ಮಾಡಿದೆ.ಸುಬ್ರಹ್ಮಣ್ಯದ ಪುಣ್ಯ ಭೂಮಿಯನ್ನು ನಮಗೆ ಒಪ್ಪಿಸುವ ಕೆಲಸ ಮಾಡಿದ ಹಿಂದು ಜಾಗರಣ ವೇದಿಕೆಯ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸುತ್ತೇನೆ ಎಂದರು. ಸುಬ್ರಹ್ಮಣ್ಯದಲ್ಲಿ ಸುಮಾರು 75ಕ್ಕೂ ಅಧಿಕ ದೇವಸ್ಥಾನಕ್ಕೆ ಸಂಬಂಧಿಸಿದ ಕೇಸುಗಳಿವೆ. ಆದರೆ ಒಂದೇ ಒಂದು ಕೇಸ್‌ನಲ್ಲಿ ದೇವಸ್ಥಾನಕ್ಕೆ ಅಪಜಯ ಆಗಿಲ್ಲ. ಆದರೆ ಅದನ್ನು ಕಾರ್ಯಗತ ಮಾಡುವ ಕೆಲಸ ಆಡಳಿತ ವರ್ಗ ಮತ್ತು ಅಧಿಕಾರಿಗಳು ಮಾಡಬೇಕು. ಆದರೆ ಅಧಿಕಾರಿ ವರ್ಗ ಮುಂದೆ ಬಾರದೆ ಇದ್ದಾಗ ನಮ್ಮ ಜೊತೆ ಹಿಂದು ಜಾಗರಣ ವೇದಿಕೆ ನಿಂತಿದ್ದರಿಂದಾಗಿ ಸುಬ್ರಹ್ಮಣ್ಯದ ಜಾಗವನ್ನು ದೇವರಿಗೆ ಸಮರ್ಪಿಸಲಾಯಿತು. ಇದರಲ್ಲಿ ನಮ್ಮ ವ್ಯವಸ್ಥಾಪನಾ ಸಮಿತಿಯ ಸದಸ್ಯ ಪ್ರಸನ್ನ ದರ್ಬೆಯವರು ತುಂಬಾ ಮುತುವರ್ಜಿ ವಹಿಸಿದ್ದರು. ನಾವು ಅಧಿಕಾರ ಪಡೆದಾಗ ನಮ್ಮ ಸಮಿತಿಯೊಂದಿಗೆ ಡಾ.ಎಂ.ಕೆ.ಪ್ರಸಾದ್‌ರವರು ಈ ಜಾಗದ ವಿಚಾರ ತಿಳಿಸಿದ್ದರು. ಇವತ್ತು ಅವರ ಕನಸು ನನಸಾಗಿದೆ ಎಂದರು.

ಸುಬ್ರಹ್ಮಣ್ಯ ನಗರ ಫಲಕ ಅನಾವರಣ

ನ್ಯಾಯ ಸಮ್ಮತವಾದ ಹೋರಾಟಕ್ಕೆ ಸಮಾಜ ಸಂಘಟನೆ ಸೇರಬೇಕು:

ರವಿರಾಜ್ ಶೆಟ್ಟಿ ಕಡಬ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದು ಸಮಾಜದ ಜಾಗೃತಿಗಾಗಿ, ಸಂಘಟನೆ, ಸುರಕ್ಷತೆಗಾಗಿ ಕಳೆದ 36 ವರ್ಷಗಳಿಂದ ರಾಜ್ಯದ ಉದ್ದಗಲದಲ್ಲಿ ಬಹಳಷ್ಟು ಹೋರಾಟ, ಸಂಘರ್ಷ, ಚಳುವಳಿ ಮೂಲಕ ಹಿಂದು ಸಮಾಜದ ಜಾಗೃತಿ ನಡೆಯುತ್ತಿದೆ.ಇತ್ತೀಚೆಗೆ ಕಾರಿಂಜೇಶ್ವರ ದೇವಸ್ಥಾನದ ಸುತ್ತಮುತ್ತ ನಡೆಯುತ್ತಿದ್ದ ಅಧಿಕೃತ ಮತ್ತು ಅನಧಿಕೃತ ಗಣಿಗಾರಿಕೆ ತಾರ್ಕಿಕ ಅಂತ್ಯ ಕಂಡಿತು. ಅದೇ ರೀತಿ ಪುತ್ತೂರಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ 1.57 ಎಕ್ರೆ ಜಾಗವನ್ನು ದೇವಳದ ವ್ಯವಸ್ಥಾಪನಾ ಸಮಿತಿಯವರ ಸಹಕಾರದೊಂದಿಗೆ ಕಳೆದ ಗುರುವಾರದಿಂದ 9 ದಿನಗಳ ಕಾರ್ಯದ ಮೂಲಕ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಈ ಸ್ಥಳದ ಚಿತ್ರಣವನ್ನೇ ಬದಲಾಯಿಸಿ ಸುಬ್ರಹ್ಮಣ್ಯ ನಗರವನ್ನು ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ. ನ್ಯಾಯ ಸಮ್ಮತವಾದ ನಮ್ಮದನ್ನು ನಾವು ಉಳಿಸಿಕೊಳ್ಳಲು ಇಡೀ ಸಮಾಜ ಮತ್ತು ಸಂಘಟನೆ ಸೇರಿದರೆ ಸಾಧ್ಯ ಆಗುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ದೇವಸ್ಥಾನದ ಬಹಳಷ್ಟು ಆಸ್ತಿಗಳು ಯಾವುದೇ ಸೂಚನೆ ಇಲ್ಲದೆ ಅನ್ಯರ ಪಾಲಾಗುತ್ತಿದೆ. ಇಂತಹ ಬಹಳಷ್ಟು ಆಸ್ತಿ ಸೊತ್ತುಗಳನ್ನು ಮುಂದಿನ ದಿನಗಳಲ್ಲಿ ಅದು ನ್ಯಾಯ ಸಮ್ಮತವಾಗಿ ಏನು ಆಗಬೇಕೋ ಅದನ್ನು ಮಾಡಲು ಹಿಂದು ಜಾಗರಣ ವೇದಿಕೆ ಅತ್ಯಂತ ಕಟಿಬದ್ಧವಾಗಿ ನಿಲ್ಲುತ್ತದೆ ಎಂದರು.

ಡಾ.ಎಂ.ಕೆ.ಪ್ರಸಾದ್ ಮಾತನಾಡುವುದು

ಗೌರವ:

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾಗವನ್ನು ಮರಳಿ ಪಡೆದು ದೇವರಿಗೆ ಸಮರ್ಪಣೆ ಮಾಡುವಲ್ಲಿ ಪ್ರಮುಖ ಮಾರ್ಗದರ್ಶಕರಾಗಿರುವ ಡಾ.ಎಂ.ಕೆ.ಪ್ರಸಾದ್ ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಗೌರವಿಸಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಸದಸ್ಯರಾದ ಪ್ರಸಾದ್, ಮನೋಹರ್ ರೈ, ಶೋಭಾ ಗಿರಿಧರ್, ಪ್ರಸನ್ನ ದರ್ಬೆಯವರು ಡಾ.ಎಂ.ಕೆ.ಪ್ರಸಾದ್ ಅವರಿಗೆ ಶಾಲು ಹೊದೆಸಿ ಗೌರವಿಸಿದರು. ಹಿಂದು ಜಾಗರಣ ವೇದಿಕೆ ತಾಲೂಕು ಸಂಚಾಲಕ ದಿನೇಶ್ ಪಂಜಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕುಂಟಾರು ರವೀಶ ತಂತ್ರಿಯವರು ಮಾತನಾಡುವುದು

ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ಚಿನ್ಮಯ್ ರೈ ಈಶ್ವರಮಂಗಲ, ರಾಕೇಶ್ ಪಂಚೋಡಿ, ನರಸಿಂಹ ಮಾಣಿ, ಜಯರಾಮ, ಪ್ರೀತಮ್, ಚರಣ್, ಅಭಿ ಪುರುಷರಕಟ್ಟೆ, ಅಶೋಕರವರು ಶ್ರೀ ರಾಜಶೇಖರಾನಂದ ಸ್ವಾಮೀಜಿಯವರಿಗೆ ಮತ್ತು ಹಿಂದು ಜಾಗರಣ ವೇದಿಕೆ ವಿಭಾಗ ಸಂಚಾಲಕ ಅಜಿತ್ ರೈ ಹೊಸಮನೆ, ಅವಿನಾಶ್ ಪುರುಷರಟ್ಟೆ, ಪುಷ್ಪರಾಜ್ ಸವಣೂರು, ಮನೀಶ್ ಕುಲಾಲ್, ಕೃಷ್ಣಪ್ರಸಾದ್ ಶೆಟ್ಟಿ, ರಜನೀಶ್, ಪ್ರಜ್ವಲ್, ರಾಜು ಆಚಾರ್ಯ ಅವರು ಬ್ರಹ್ಮಶ್ರೀ ವೇ. ಮೂ. ಕುಂಟಾರು ರವೀಶ ತಂತ್ರಿಯವರನ್ನು ಫಲಪುಷ್ಪ ನೀಡಿ ಗೌರವಿಸಿದರು. ತಾಲೂಕು ಸಮಿತಿ ಸದಸ್ಯ ಮನೀಶ್ ದರ್ಬೆ, ಲತೇಶ್ ಕೆಮ್ಮಾಯಿ ಅತಿಥಿಗಳನ್ನು ಗೌರವಿಸಿದರು. ನೀಮಾ ವೈಯಕ್ತಿಕ ಗೀತೆ ಹಾಡಿದರು. ಪ್ರೀತಿ ಕುಡ್ವ ಪ್ರಾರ್ಥಿಸಿದರು. ಹಿಂಜಾವೇ ಪುತ್ತೂರು ತಾಲೂಕು ಸಹ ಸಂಚಾಲಕ ಸ್ವಸ್ತಿಕ್ ಮೇಗಿನಗುತ್ತು ಸ್ವಾಗತಿಸಿದರು. ತಾಲೂಕು ಸಹ ಸಂಚಾಲಕ ಗಿತೇಶ್ ಮಡಪ್ಪಾಡಿ ವಂದಿಸಿದರು. ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.

ಡಾ.ಎಂ.ಕೆ.ಪ್ರಸಾದ್ ಅವರಿಗೆ ಕುಕ್ಕೆ ಶ್ರೀ ದೇವಸ್ಥಾನದಿಂದ ಗೌರವ

ಸಭಾ ಕಾರ್ಯಕ್ರಮದ ಬಳಿಕ ಅಶ್ಲೇಷ ಪೂಜೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬೆಳಿಗ್ಗೆ ಗಣಪತಿ ಹೋಮ, ಅರ್ಧ ಏಕಾಹ ಭಜನೆ ಆರಂಭಗೊಂಡಿತ್ತು. ಸಂಜೆ ಆಶ್ಲೇಷ ಬಲಿ ಬಳಿಕ ಜನಜಾಗೃತಿ ಸಭೆ ನಡೆಯಿತು. ಬೆಳಿಗ್ಗೆ ವೇ ಮೂ ರಾಜೇಶ್ ಭಟ್ ಅವರು ಗಣಪತಿಹೋಮ ನೆರವೇರಿಸಿ ಬಳಿಕ ಅರ್ಧ ಏಕಾಹ ಭಜನೆಗೆ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಪ್ರಮುಖರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ಬಳಿಕ ಸಂಜೆಯ ತನಕ ವಿವಿಧ ಭಜನಾ ತಂಡಗಳಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಫಲಹಾರ, ಮಧ್ಯಾಹ್ನ ಮತ್ತು ರಾತ್ರಿಯ ಅನ್ನಸಂತರ್ಪಣೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದಲೇ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಭಕ್ತರು ಪೂಜೆಯ ಪ್ರಸಾದ ಸ್ವೀಕರಿಸಿದರು.

ಸಭೆಯಲ್ಲಿ ಆಸೀನರಾದ ಜನರು

ನಮ್ಮ ಹುಡುಗರ ಕೆಲಸ ರಾಜಕೀಯ ಸ್ಥಾನಕ್ಕಾಗಿ ಅಲ್ಲ
ನಮ್ಮ ಜಾಗರಣ ವೇದಿಕೆಯ ಹುಡುಗರು ಈ ರೀತಿಯ ಧರ್ಮದ ಕೆಲಸ ಮಾಡುವುದು ನಾಳೆ ಜಿ.ಪಂ, ತಾ.ಪಂ ಅಥವಾ ಶಾಸಕನಾಗಬೇಕೆಂಬ ದೃಷ್ಟಿಯಿಂದಲ್ಲ. ಬದಲಾಗಿ ಹಿಂದು ಧರ್ಮದ ಮೇಲಿನ ಪ್ರೇಮದಿಂದ. ಅವರಿಗೆ ತಮ್ಮ ಗುಣದಲ್ಲೇ ದೇಶದ ಮೇಲೆ ಪ್ರೀತಿ ಇದೆ. ಇವತ್ತು ಕೆಲವರಲ್ಲಿ ಬಿಜೆಪಿಯಲ್ಲಿ ಪೋಸ್ಟ್ ಸಿಗುತ್ತದೆ ಎಂದು ಹೋಗುವವರಿದ್ದಾರೆ. ಪೋಸ್ಟ್ ಸಿಕ್ಕಿದ ಬಳಿಕ ಎಲ್ಲಾ ಗುಳುಂ ಮಾಡುತ್ತಾರೆ. ನಮಗೆ ಅದೇ ಕಷ್ಟ. ಆದ್ದರಿಂದ ಗುಳುಂ ಗಿಳುಂ ಯಾವುದೂ ಬೇಡ. ನಾವು ದೇಶಕ್ಕಾಗಿ ಹೋರಾಡುತ್ತೇವೆ. ನಮಗೆ ಕಮಿಷನ್ ಬೇಡ. ಯಾವುದೂ ಬೇಡ. ದೇಶ ಪ್ರೇಮ ಒಂದೇ ಸಾಕು-
ಡಾ.ಎಂ.ಕೆ.ಪ್ರಸಾದ್

ಆಶ್ಲೇಷ ಪೂಜೆಯಲ್ಲಿ ಪಾಲ್ಗೊಂಡ ಭಕ್ತರು

ಸಮಾಜಕ್ಕೆ ಬೇಕಾಗುವ ಕಟ್ಟಡ ನಿರ್ಮಾಣಕ್ಕೆ ಚಿಂತನೆ
ಹಿರಿಯರ ಜೊತೆ ಮಾರ್ಗದರ್ಶನ, ಸಲಹೆ ಪಡೆದು ಇಲ್ಲಿ ಸಮಾಜಕ್ಕೆ ಬೇಕಾಗುವ ಒಂದು ಕಟ್ಟಡ ನಿರ್ಮಾಣಕ್ಕೆ ಚಿಂತನೆ ಮಾಡಲಾಗಿದೆ. ಅದಕ್ಕಾಗಿ ನಿಮ್ಮೆಲ್ಲರ ಸಲಹೆ ಸೂಚನೆ ಬೇಕು.ಯಾವುದೇ ವ್ಯಾಪಾರ ಮಳಿಗೆಗಳನ್ನು ಮಾಡಿ ಮುಂದಿನ ದಿನ ಅದು ಯಾರದ್ದೋ ಕೈ ಪಾಲಾಗುವುದು ಬೇಡ.ಇಲ್ಲಿ ಹಿಂದು ಸಮಾಜದ ಬಡವರ್ಗದವರಿಗೆ ಉಪಯೋಗ ಆಗುವಂತಹ ಯಾವುದಾದರು ಒಂದು ಯೋಜನೆಯನ್ನು ಮಾಡುವ ಚಿಂತನೆ ಮಾಡಿದ್ದೇವೆ.ಅದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ.ನಮಗೆ ವ್ಯವಸ್ಥಾಪನಾ ಸಮಿತಿ ಆಡಳಿತ ಮಾಡಲು ಉತ್ತಮ ಅಧಿಕಾರಿಗಳು ಬೇಕು. ಆದರೆ ಅದಕ್ಕೆ ಪೂರಕವಾಗಿ ಸ್ಪಂದಿಸುವ ಅಧಿಕಾರಿಗಳು ಇಲ್ಲ. ನಮಗೆ ಮೂರು ವರ್ಷ ದೇವಸ್ಥಾನದ ಆಡಳಿತ ನಡೆಸುವ ಸುಯೋಗ ಸಿಕ್ಕಿದೆ.ಮುಂದಿನ ದಿನಗಳಲ್ಲಿ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ಒಂದಷ್ಟು ಮೂಲಭೂತ ಸೌಕರ್ಯ ಒದಗಿಸಲು ಜಾಗರಣ ವೇದಿಕೆ, ಹಿರಿಯರು ನಮ್ಮ ಜೊತೆ ಕೈ ಜೋಡಿಸಬೇಕೆಂದು ವಿನಂತಿ-
ಮೋಹನ್‌ರಾಮ್ ಸುಳ್ಳಿ , ಅಧ್ಯಕ್ಷರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ

ಆಶ್ಲೇಷ ಬಲಿ

LEAVE A REPLY

Please enter your comment!
Please enter your name here