ಪುತ್ತೂರು: ಗ್ರಾಮೀಣ ಪ್ರದೇಶದಲ್ಲಿ ಕುಡಿಯವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ ಅನುಷ್ಠಾನಕ್ಕೆ ರೂಪಿಸಿರುವ 370 ಕೋ.ರೂ.ವೆಚ್ಚದ ಪ್ರಸ್ತಾವನೆಯು ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲ ಪಟ್ಟಣ ಪಂಚಾಯತ್ ಮತ್ತು ಅಳಿಕೆ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ.
ಮಾ.24ರಂದು ಸಚಿವ ಸಂಪುಟದಲ್ಲಿ ಅನುಮೋದನೆ ಲಭಿಸಿದ್ದು ಬಹು ಬೇಡಿಕೆಯ ಮಹತ್ವದ ಯೋಜನೆಯೊಂದು ಕಾರ್ಯಗತವಾಗಿದೆ. ಪ್ರತೀ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲು ರೂಪಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಈ ಕಾಮಗಾರಿ ಅನುಷ್ಠಾನಗೊಳ್ಳಲಿದೆ. ನಗರದಲ್ಲಿ ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ಅನುಷ್ಠಾನದ ಹಂತದಲ್ಲಿ ಇರುವ ಜಲಸಿರಿ ಯೋಜನೆಯ ಮಾದರಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತೀ ಮನೆಗೆ ಕುಡಿಯುವ ನೀರು ತಲುಪಬೇಕು ಎಂಬ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಅವರು 370 ಕೋ.ರೂ. ಕ್ರಿಯಾ ಯೋಜನೆ ತಯಾರಿಸಿ ನೀರಾವರಿ ಇಲಾಖೆ ಮೂಲಕ ಯೋಜನೆ ಜಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕ್ರಿಯಾಯೋಜನೆ ಪ್ರಕಾರ ವಿಧಾನಸಭಾ ಕ್ಷೇತ್ರದ 31 ಗ್ರಾಮ ಪಂಚಾಯತ್, 1 ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಒದಗಿಸುವ ಬೃಹತ್ ಯೋಜನೆ ಇದಾಗಿತ್ತು. ಯೋಜನೆಗೆ ಇದೀಗ ಸಚಿವ ಸಂಪುಟದಲ್ಲಿ ಅನುಮೋದನೆ ಲಭಿಸಿದೆ.
ನೇತ್ರಾವತಿ ನದಿಯಿಂದ ನೀರು ಸಂಗ್ರಹಿಸಿ ಪೂರೈಕೆ
ಬಂಟ್ವಾಳ ತಾಲೂಕಿನ ಶಂಬೂರು ಎಂಬಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ನೀರು ಪೂರೈಸುವುದು ಈ ಯೋಜನೆಯ ಮೊದಲ ಹೆಜ್ಜೆ. ಜಾಕ್ವೆಲ್ನಲ್ಲಿ ನೀರು ಸಂಗ್ರಹಿಸಿ ಶುದ್ಧೀಕರಿಸಿ ವಿಟ್ಲ- ಅಳಿಕೆ ಮೂಲಕ ಪೈಪ್ ಲೈನ್ ಅಳವಡಿಸಿ ನೀರು ಹರಿಸಲಾಗುತ್ತದೆ. ಬಂಟ್ವಾಳ ಗ್ರಾಮದ ಮೂರು ಗ್ರಾಮ ಮತ್ತು ಉಳಿದ ಪುತ್ತೂರು ತಾಲೂಕಿನ ಗ್ರಾಮಗಳಿಗೆ ನೀರು ಸರಬರಾಜು ಆಗುತ್ತದೆ.