ಉಪ್ಪಿನಂಗಡಿ: ವ್ಯಕ್ತಿಯೋರ್ವರ ಕೈಯಲ್ಲಿದ್ದ 10 ಲಕ್ಷ ರೂ. ಹಣದ ಕಟ್ಟನ್ನು ಕಿತ್ತೊಯ್ದ ಪ್ರಕರಣದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಶುಕ್ರವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಕಡವಿನಬಾಗಿಲು ಮನೆ ನಿವಾಸಿ ಅಬ್ದುಲ್ ಖಾದ್ರಿ ಎಂಬವರ ಪುತ್ರ ಮುಸ್ತಾಫಾ (41) ನ್ಯಾಯಾಂಗ ಬಂಧನಕ್ಕೊಳಗಾಗಿರುವ ಆರೋಪಿ, ಈತ ಇಳಂತಿಲ ಗ್ರಾಮದ ಪೆದಮಲೆಯ ಸರಳೀಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ಇಳಂತಿಲ ಗ್ರಾಮದ ಕಾಯರ್ಪಾಡಿ ಮನೆ ನಿವಾಸಿ 60 ವರ್ಷ ಪ್ರಾಯದ ಮಹಮ್ಮದ್ ಕೆ. ಎಂಬವರು 10 ಲಕ್ಷ ರೂಪಾಯಿ ಹಣದ ಕಟ್ಟನ್ನು ತನ್ನ ದ್ವಿಚಕ್ರ ವಾಹನದ ಸೀಟಿನಡಿಯಲ್ಲಿ ಇಡಲೆತ್ನಿಸುವಾಗ ಹಿಂಬದಿಯಿಂದ ಬಂದು ಹಣದ ಕಟ್ಟನ್ನು ಎಳೆದುಕೊಂಡು ಹೋಗಿ ಪರಾರಿಯಾಗಿದ್ದ.
ಈ ಬಗ್ಗೆ ದೂರು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ತನಿಖೆ ನಡೆಸಿ, ಗುರುವಾರ ಈತನನ್ನು ಬಂಧಿಸಿ, ಆತನಲ್ಲಿದ್ದ 9 ಲಕ್ಷ ರೂ.ವನ್ನು ವಶಪಡಿಸಿಕೊಂಡಿದ್ದಾರೆ. ಮಹಮ್ಮದ್ ಕೆ. ಅವರು ತನ್ನ ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು ಈ ಹಣವನ್ನು ಹಿಡಿದುಕೊಂಡು ಹೋದಾಗ ಈ ಘಟನೆ ನಡೆದಿತ್ತು.
ಲಾರಿ ಕಳವು ಪ್ರಕರಣದ ಆರೋಪಿ: ಬಂಧಿತ ಮುಸ್ತಾಫಾ ಈ ಹಿಂದೆ ಹಾಸನ ಜಿಲ್ಲೆಯ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಲಾರಿ ಕಳವು ಪ್ರಕರಣದ ಆರೋಪಿ ಕೂಡಾ ಆಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.