ಡಬಲ್ ಎಂಜಿನ್ ಸರಕಾರದಿಂದ ಶರವೇಗದ ಅಭಿವೃದ್ಧಿ: ಸಂಜೀವ ಮಠಂದೂರು
ಉಪ್ಪಿನಂಗಡಿ: ಬಿಜೆಪಿಯ ಆಡಳಿತಾವಧಿಯಲ್ಲಿ ಕೊರೋನಾದಂತಹ ಆರ್ಥಿಕ ಸಂಕಷ್ಟದ ಕಾಲಘಟ್ಟ ಎದುರಾದರೂ, ಆ ಬಳಿಕದ ದಿನಗಳಲ್ಲಿ ಶರವೇಗದ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇದಕ್ಕೆ ಡಬಲ್ ಎಂಜಿನ್ ಸರಕಾರವಿರುವುದೇ ಕಾರಣ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಅಭಿಪ್ರಾಯಿಸಿದರು.
ಹಿರೇಬಂಡಾಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶುಕ್ರವಾರ ಉದ್ಘಾಟಿಸಿದ ಅವರು, ಬಳಿಕ ಉದಯಗಿರಿಯ ಶ್ರೀ ಉಮಾಮಹೇಶ್ವರ ಭಜನಾ ಮಂದಿರದ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರಾಜಕೀಯವಾಗಲಿ, ತಾರತಮ್ಯವಾಗಲಿ ಮಾಡಿಲ್ಲ. ಪ್ರತಿಯೋರ್ವನಿಗೂ ನ್ಯಾಯ ಕೊಡಬೇಕೆನ್ನುವ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಹಿರೇಬಂಡಾಡಿ ಗ್ರಾಮಕ್ಕೆ 23 ಕೋಟಿ 10 ಲಕ್ಷದ 55 ಸಾವಿರ ರೂ.ಗಳಷ್ಟು ಅನುದಾನ ನೀಡಿದ್ದೇನೆ. ಅಂತರ್ಜಲ ಅಭಿವೃದ್ಧಿ ಹಾಗೂ ಹಿರೇಬಂಡಾಡಿಯಿಂದ ಪುತ್ತೂರಿಗೆ ನೇರ ಸಂಪರ್ಕ ಕಲ್ಪಿಸಬೇಕೆಂಬ ದೃಷ್ಟಿಯಿಂದ ಕುಮಾರಧಾರ ನದಿಗೆ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣಕ್ಕೆ 350 ಕೋಟಿ ರೂ.ನ ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ತಿಳಿಸಿದ ಅವರು, 1.50 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾದ ಅಗರಿ- ಪೆರಿಯಡ್ಕ ಸಂಪರ್ಕ ಸೇತುವೆ ಸಮೇತ ಕಿಂಡಿ ಅಣೆಕಟ್ಟು, 1.86 ಕೋ.ರೂ. ಅನುದಾನದಲ್ಲಿ ನಿರ್ಮಾಣವಾದ ಅಡ್ಯಾಲು- ನೆಕ್ಕಿಲು- ಉದಯಗಿರಿ ಭಜನಾ ಮಂದಿರದ ರಸ್ತೆ, 10 ಲಕ್ಷ ರೂ.ನಲ್ಲಿ ನಿರ್ಮಾಣವಾದ ಉದಯಗಿರಿ- ಮುಡಿಪು ರಸ್ತೆಯನ್ನು ಈ ದಿನ ಉದ್ಘಾಟಿಸಿದ್ದು, ಹಿರೇಬಂಡಾಡಿ ಗ್ರಾಮದ ವಿವಿಧೆಡೆ 1.05 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಶಿಲಾನ್ಯಾಸ ನಡೆಸಿದ್ದೇನೆ. ಒಟ್ಟಿನಲ್ಲಿ ಈ ಹಿಂದೆ ಕಂಡು ಕೇಳರಿಯದ ರೀತಿಯಲ್ಲಿ ಗ್ರಾಮವನ್ನು ಅಭಿವೃದ್ಧಿಪಡಿಸುವ ಮೂಲಕ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಿದ ತೃಪ್ತಿ ನನಗಿದೆ ಎಂದರು.
ಹಿರೇಬಂಡಾಡಿ ಗ್ರಾ.ಪಂ. ಸದಸ್ಯ ಹಮ್ಮಬ್ಬ ಶೌಕತ್ ಅಲಿ ಮಾತನಾಡಿ, ಸಂಜೀವ ಮಠಂದೂರು ಅವರು ಶಾಸಕರಾಗಿ ಆಯ್ಕೆಯಾದ ಬಳಿಕ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಈ ಹಿಂದೆ ಕುಗ್ರಾಮವೆನಿಸಿದ್ದ ಹಿರೇಬಂಡಾಡಿಯಲ್ಲೇ ಕೋಟಿ ಕೋಟಿಗಳ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದರು.
ರಸ್ತೆಗೆ ಜಾಗ ಬಿಟ್ಟುಕೊಟ್ಟ ಗುರುವ ಅವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಸದಾನಂದ ಶೆಟ್ಟಿ, ಶಾಂಭವಿ, ಬಿಜೆಪಿ ಶಕ್ತಿ ಪ್ರಮುಖ್ ದಯಾನಂದ ಸರೋಳಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಕಾರ್ಯದರ್ಶಿ ಧರ್ನಪ್ಪ ಗೌಡ ಪೆರಾಬೆ, ಕೋಶಾಧಿಕಾರಿ ವಿಠಲ ಪೂಜಾರಿ ಪರಕೊಡಂಗೆ, ಉಪಾಧ್ಯಕ್ಷ ಕುಶಾಲಪ್ಪ ಪಡ್ಯೊಟ್ಟು, ಹಿರೇಬಂಡಾಡಿ ಗ್ರಾ.ಪಂ. ಸದಸ್ಯ ನಿತಿನ್ ತಾರಿತ್ತಡಿ, ಉಷಾ ಶಾಖೆಪುರ, ಬಿಜೆಪಿ ಬೂತ್ ಅಧ್ಯಕ್ಷ ಕೇಶವ ಬೋಳಮೆ, ಪ್ರಧಾನ ಕಾರ್ಯದರ್ಶಿ ಧನಂಜಯ ಮುಡಿಪು, ಕಾರ್ಯದರ್ಶಿ ನವೀನ್ ಕುಬಲ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ನಾರಾಯಣ ಕನ್ಯಾನ, ಪ್ರಮುಖರಾದ ಉಮೇಶ್ ಶೆಣೈ ಎನ್., ಶಶಿಕಲಾ ಎ. ಶೆಟ್ಟಿ, ಹರೀಶ್ ಶೆಟ್ಟಿ ಪೆರಾಬೆ, ಜನಾರ್ದನ ಭಟ್ ಕೆದುಮೂಲೆ, ಆನಂದ ಪರಕೊಡಂಗೆ, ಪ್ರಸಾದ್ ಪಲ್ಲೆಜಾಲ್, ಸೇಸಪ್ಪ ಗೌಡ ಪಡ್ಯೊಟ್ಟು, ಕುಶಾಲಪ್ಪ ಪಡ್ಯೊಟ್ಟು, ಆನಂದ ಗೌಡ ಪಡ್ಯೊಟ್ಟು, ಮೋನಪ್ಪ ಗೌಡ ಪಾಲೆತ್ತಡಿ, ನರಸಿಂಹ ಭಟ್ ಕೆದುಮೂಲೆ, ಅಣ್ಣು ಗೌಡ ಪಲ್ಲೆಜಾಲು ವಸಂತ ಗೌಡ ಪೆರಾಬೆ, ಸುರೇಶ್ ಮುಡಿಪು, ದಿವಾಕರ ಮುಡಿಪು, ವೀಕ್ಷಿತ್ ಮುಡಿಪು ಮತ್ತಿತರರು ಉಪಸ್ಥಿತರಿದ್ದರು.
ಕು. ದೀಕ್ಷಾ ಪ್ರಾರ್ಥಿಸಿದರು. ಶ್ರೀ ಉಮಾಮಹೇಶ್ವರ ಭಜನಾ ಮಂದಿರದ ಅಧ್ಯಕ್ಷ ಪ್ರಸಾದ್ ಶೆಟ್ಟಿ ದತ್ತನಿಕೇತನ ಪೆರಾಬೆ ಸ್ವಾಗತಿಸಿ, ವಂದಿಸಿದರು. ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.