ಪುತ್ತೂರು:ಮಾಂಗಲ್ಯವರ ಪ್ರದಾಯಕನಾಗಿರುವ ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ 7 ದಿನಗಳ ಕಾಲ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಮಾ.25ರಂದು ಅದ್ದೂರಿಯ ಚಾಲನೆ ದೊರೆಯಿತು. ಊರ, ಪರವೂರು ಭಕ್ತರಿಂದ ಹಸಿರು ಹೊರೆಕಾಣಿಕೆಯ ಸಮರ್ಪಣೆ ಹಾಗೂ ದೇವರಿಗೆ ನೂತನವಾಗಿ ಸಮರ್ಪಣೆಯಾಗಲಿರುವ ಪುಷ್ಪರಥದ ಆಗಮನದೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ದೊರೆಯಿತು.
ಬೆಳಿಗ್ಗೆ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನಡೆದ ಬಳಿಕ ಊರ ಹಾಗೂ ಪರವೂರ ಭಕ್ತಾದಿಗಳಿಂದ ಸಂಗ್ರಹವಾದ ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಿತು. ಗ್ರಾಮದ ವಿವಿಧ ಭಾಗಗಳಿಂದ ಸಂಗ್ರಹಗೊಂಡ ಹೊರೆಕಾಣಿಕೆ ಮೆರವಣಿಗೆ ಹಾಗೂ ಪುಷ್ಪರಥದ ಮೆರವಣಿಗೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಚಾಲನೆ ನೀಡಲಾಯಿತು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ ಗೌಡ, ಉಮಾಮಹೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀಶ ತಂತ್ರಿಗಳು ಹಾಗೂ ಟ್ರಸ್ಟ್‌ನ ಸದಸ್ಯರು ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು.
ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಹೊರಟು ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಮುಂಭಾಗದಿಂದಾಗಿ ಮುಖ್ಯರಸ್ತೆ, ದರ್ಬೆ, ಕೂರ್ನಡ್ಕ, ಮರೀಲ್, ಮುಕ್ವೆ ಮಾರ್ಗವಾಗಿ ಮೆರವಣಿಗೆಯು ದೇವಸ್ಥಾನಕ್ಕೆ ಆಗಮಿಸಿತು. ಪುರುಷರಕಟ್ಟೆ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಆಕರ್ಷಕ ಸ್ಥಬ್ದಚಿತ್ರ, ಚೆಂಡೆ, ಬ್ಯಾಂಡ್ ವಾಲಗ, ಭಜನೆ, ಪೂರ್ಣಕುಂಭ ಸ್ವಾಗತ ಮೆರವಣಿಗೆಯಲ್ಲಿ ಆಕರ್ಷಣಿಯವಾಗಿತ್ತು. ಹೊರೆಕಾಣಿಕೆ ಹೊತ್ತ ನೂರಕ್ಕೂ ಅಧಿಕ ವಾಹನಗಳು ಮೆರವಣಿಗೆಯಲ್ಲಿ ಸಾಗಿಬಂದವು. ದೇವಸ್ಥಾನದ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಉಪ ಸಮಿತಿಗಳ ಸಂಚಾಲಕರು, ಸದಸ್ಯರು ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹರಿದು ಬಂದ ಹೊರೆಕಾಣಿಕೆ:
ಬ್ರಹ್ಮಕಲಶೋತ್ಸವಕ್ಕೆ ಊರ, ಪರವೂರ ಭಕ್ತರಿಂದ ಅಕ್ಕಿ, ತೆಂಗಿನ ಕಾಯಿ, ಸೀಯಾಳ, ವಿವಿಧ ತರಕಾರಿಗಳು, ವಿವಿಧ ಜಿನಸು ಸಾಮಾಗ್ರಿಗಳು ಸೇರಿದಂತೆ ಹಲವು ರೀತಿಯ ಸಾಮಾಗ್ರಿಗಳ ಹಸಿರು ಹೊರೆಕಾಣಿಕೆಯು ಹರಿದು ಬಂದಿದ್ದು ಉಗ್ರಾಣ ತುಂಬಿ ತುಲುಕುತ್ತಿದೆ. ಹೊರೆಕಾಣಿಕೆ ಸಮರ್ಪಿಸಿದ ಭಕ್ತರಿಗೆ ದೇವಾಲಯದ ವತಿಯಿಂದ ಕೃತಜ್ಞತಾ ಪತ್ರವನ್ನು ನೀಡಲಾಗಿತ್ತು. ಮಧ್ಯಾಹ್ನ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.