ಕೆದಂಬಾಡಿ ಗ್ರಾಪಂ ಸಾಮಾನ್ಯ ಸಭೆ-

0

ಎಸ್.ಸಿ/ಎಸ್.ಟಿ ಕುಟುಂಬಕ್ಕೆ ಒಂದು ವರ್ಷ ಉಚಿತ ಕುಡಿಯುವ ನೀರು-ಗ್ರಾಪಂನಿಂದ ಯುಗಾದಿ ಉಡುಗೊರೆ

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಯುಗಾದಿ ಹಬ್ಬದ ಸಲುವಾಗಿ ಒಂದು ಮಹತ್ವದ ಕೊಡುಗೆಯನ್ನು ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ನೀಡಿದೆ. ಗ್ರಾಮದಲ್ಲಿರುವ ಎಸ್.ಸಿ ಮತ್ತು ಎಸ್.ಟಿ ಕುಡಿಯುವ ನೀರು ಫಲಾನುಭವಿ ಕುಟುಂಬಗಳಿಗೆ ಒಂದು ವರ್ಷ ಕಾಲ ಉಚಿತವಾಗಿ ಕುಡಿಯುವ ನೀರು ಸರಬರಾಜು ಮಾಡುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ಸಭೆಯು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ಮಾ.21 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ ರತನ್ ರೈಯವರು ಮಾತನಾಡಿ, ಗ್ರಾಮದಲ್ಲಿ ಒಟ್ಟು 107 ಪರಿಶಿಷ್ಠ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕವಿದ್ದು ಇವರಿಗೆ 2023 ಎಪ್ರೀಲ್ 1 ರಿಂದ 2024 ಎಪ್ರೀಲ್ ತನಕ ಒಂದು ವರ್ಷ ಕಾಲ ಉಚಿತವಾಗಿ ಕುಡಿಯುವ ನೀರು ಪೂರೈಕೆ ಮಾಡುವ ಬಗ್ಗೆ ತಿಳಿಸಿದರು.

ಕೊರೋನ ಸಂಕಷ್ಟದಿಂದ ಈಗಾಗಲೇ ಬಹಳಷ್ಟು ಮಂದಿಗೆ ನೀರಿನ ಬಿಲ್ ಪಾವತಿಗೆ ಕಷ್ಟವಾಗಿದ್ದು ಗ್ರಾಪಂಗೆ ಕಳೆದ ಮೂರು ವರ್ಷದಿಂದ ಪ್ರತಿವರ್ಷ ಸುಮಾರು ೮೦ ಸಾವಿರದಷ್ಟು ನೀರಿನ ಬಿಲ್ ಬರಲು ಬಾಕಿಯಾಗಿದೆ. ಇದನ್ನು ಸರಿದೂಗಿಸುವ ಸಲುವಾಗಿ ಒಂದು ವರ್ಷ ಕಾಲ ಎಸ್.ಸಿ ಮತ್ತು ಎಸ್.ಟಿ ಕುಟುಂಬಗಳಿಗೆ ಉಚಿತವಾಗಿ ನೀರನ್ನು ಕೊಡುವ ಮೂಲಕ ಈ ಸಮಯದಲ್ಲಿ ಅವರು ಬಾಕಿ ಇರುವ ಬಿಲ್ ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು.


ವರ್ಷಕ್ಕೆ 30ರಿಂದ 40ಸಾವಿರ ಮಾತ್ರ ಪಾವತಿ
ಗ್ರಾಮದಲ್ಲಿ 107 ಸಂಪರ್ಕವಿದ್ದು ವರ್ಷಕ್ಕೆ 1 ಲಕ್ಷದ 30 ಸಾವಿರ ನೀರಿನ ಬಿಲ್ ಸಂಗ್ರಹವಾಗಬೇಕಾಗಿದೆ. ಆದರೆ ಕಳೆದ 3 ವರ್ಷಗಳಿಂದ ನೀರಿನ ಬಿಲ್ ಸಂಗ್ರಹದಲ್ಲಿ ಪಂಚಾಯತ್‌ಗೆ ಹೊರೆಯಾಗುತ್ತಿದೆ. ವರ್ಷಕ್ಕೆ ಕೇವಲ 30 ರಿಂದ 40 ಸಾವಿರ ಬಿಲ್ ಮಾತ್ರ ಸಂಗ್ರಹವಾಗುತ್ತಿದೆ. 2 ಎರಡು ವರ್ಷಗಳ ಕಾಲ ಕೊರೋನ ಸಂಕಷ್ಟ ಸೇರಿದಂತೆ ನೀರಿನ ಬಿಲ್ ಪಾವತಿಗೆ ಫಲಾನುಭವಿಗಳಿಗೆ ಕಷ್ಟವಾಗಿದೆ ಇದನ್ನು ಸರಿದೂಗಿಸಲು ಪಂಚಾಯತ್ ಈ ನಿರ್ಣಯವನ್ನು ಕೈಗೊಂಡಿದ್ದು 1 ವರ್ಷ ಕಾಲ ಉಚಿತವಾಗಿ ಕುಡಿಯುವ ನೀರು ಪೂರೈಕೆ ಮಾಡುವುದು ಈ 1 ವರ್ಷದಲ್ಲಿ ಅವರು ಈ ಹಿಂದಿನ ಬಾಕಿಯನ್ನು ಪಂಚಾಯತ್‌ಗೆ ಪಾವತಿ ಮಾಡಬೇಕಾಗುತ್ತದೆ. ಈ ಬಗ್ಗೆ ಫಲಾನುಭವಿಗಳಿಗೆ ಒಂದು ಷರತ್ತುಬದ್ದ ಪತ್ರವನ್ನು ನೀಡಲಾಗುತ್ತದೆ. ಹಿಂದಿನ ಬಾಕಿ ಬಗ್ಗೆಯೂ ತಿಳಿಸಲಾಗುತ್ತದೆ ಎಂದು ಅವರು ತಿಳಿಸಿದರು.


ತಿಂಗಳಿಗೆ 15 ಯುನಿಟ್ ನೀರು
ಗ್ರಾಮ ಪಂಚಾಯತ್ ಕೆಲವೊಂದು ಷರತ್ತುಗಳನ್ನು ಹಾಕಿಕೊಂಡ ಈ ನಿರ್ಣಯವನ್ನು ಕೈಗೊಂಡಿದೆ. ಫಲಾನುಭವಿಗಳಿಗೆ ಪ್ರತಿ ತಿಂಗಳಿಗೆ 15 ಯುನಿಟ್ ಅಂದರೆ 15 ಸಾವಿರ ಲೀಟರ್ ನೀರು ಉಚಿತವಾಗಿ ಪೂರೈಕೆಯಾಗಲಿದೆ. ಇದಕ್ಕಿಂತ ಹೆಚ್ಚು ನೀರು ಬಳಕೆ ಮಾಡಿದರೆ ಪ್ರತಿ ಯುನಿಟ್‌ಗೆ ೫ ರೂ.ಗಳನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.


ಇತರ ವಿಷಯಗಳ ಬಗ್ಗೆಯೂ ಚರ್ಚಿಸಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಜಯಲಕ್ಷ್ಮೀ ಬಲ್ಲಾಳ್ ಬೀಡು, ಸುಜಾತ ಮುಳಿಗದ್ದೆ, ರೇವತಿ ಬೋಳೋಡಿ, ಕೃಷ್ಣ ಕುಮಾರ್ ಇದ್ಯಪೆ, ವಿಠಲ ರೈ ಮಿತ್ತೋಡಿ, ಸುಜಾತ, ಅಸ್ಮಾ ಚರ್ಚೆಯಲ್ಲಿ ಪಾಲ್ಗೊಂಡರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸರಕಾರದ ಸುತ್ತೋಲೆಗಳ ಬಗ್ಗೆ ಸಭೆಗೆ ತಿಳಿಸಿದರು. ಗ್ರೇಡ್೧ ಕಾರ್ಯದರ್ಶಿ ಸುನಂದ ರೈಯವರು ಸ್ವಾಗತಿಸಿ, ನಿರ್ಣಯಗಳನ್ನು ದಾಖಲಿಸಿಕೊಂಡು ಕೊನೆಯಲ್ಲಿ ವಂದಿಸಿದರು. ಸಿಬ್ಬಂದಿ ಜಯಂತ ಮೇರ್ಲ ಅರ್ಜಿಗಳನ್ನು ಸಭೆಯ ಮುಂದಿಟ್ಟರು. ಸಿಬ್ಬಂದಿಗಳಾದ ಗಣೇಶ್, ವಿದ್ಯಾಪ್ರಸಾದ್,ಮೃದುಳಾ, ಶಶಿಪ್ರಭಾ ರೈ ಸಹಕರಿಸಿದ್ದರು.

LEAVE A REPLY

Please enter your comment!
Please enter your name here