ಪಾನ್‌ಕಾರ್ಡ್‌ಗೆ ಆಧಾರ್ ಲಿಂಕ್ ಮಾಡದವರಿಗೆ ದಂಡ ವಿಧಿಸುವ ಮೂಲಕ ಸರಕಾರದಿಂದ ಹಣಲೂಟಿ; ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕ ಆರೋಪ

0

ಪುತ್ತೂರು:ಪಾನ್‌ಕಾರ್ಡ್‌ಗೆ ಆಧಾರ್ ಲಿಂಕ್ ಮಾಡದವರಿಗೆ 1000 ರೂಪಾಯಿ ದಂಡ ವಿಧಿಸುವ ಮೂಲಕ ಬಡವರಿಂದ ಹಣ ಲೂಟಿ ಮಾಡುವ ಕಾರ್ಯ ಬಿಜೆಪಿ ಸರಕಾರದಿಂದ ನಡೆಯುತ್ತಿದೆ. ಆಧಾರ್ ಲಿಂಕ್‌ಗೆ ದಂಡ ಪಡೆಯುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು ಹಾಗೂ ಈಗಾಗಲೇ ದಂಡ ರೂಪವಾಗಿ ಪಡೆದುಕೊಂಡ ಹಣವನ್ನು ಹಿಂತಿರುಗಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಂತರು ಅವರ ವ್ಯವಹಾರಗಳಿಗೆ ಸಂಬಂಧಿಸಿ ಈಗಾಗಲೇ ಲಿಂಕ್ ಮಾಡಿಸಿಕೊಂಡಿದ್ದಾರೆ. ಪಾನ್‌ಕಾರ್ಡ್ ಆವಶ್ಯಕತೆ ಇಲ್ಲದೆ ಇರುವ ಬಡವರ ಪಾನ್‌ಕಾರ್ಡ್‌ಗಳಿಗೆ ಲಿಂಕ್ ಆಗಿಲ್ಲ. ಇದಕ್ಕಾಗಿ ಲಿಂಕ್ ಮಾಡದವರಿಗೆ ಈಗ ಮಾ.30ರ ತನಕ ಸರಕಾರ 1000 ರೂಪಾಯಿ ದಂಡ ಹಾಕುತ್ತಿದೆ. ಮಾ.30ರ ನಂತರ 10,000 ದಂಡ ಹಾಕಲಿದೆ. ಈಗ ಲಿಂಕ್ ಮಾಡಲು 1000 ರೂಪಾಯಿ ದಂಡದ ಜೊತೆಗೆ ಸೈಬರ್ ಸೆಂಟರ್‌ನವರು ಅವರ ಶುಲ್ಕ 200 ರೂಪಾಯಿ, 500ರೂಪಾಯಿ ಸೇರಿಸಿ ಹಣ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಪಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸುಲಲಿತವಾಗಿ ಮಾಡಿಕೊಡದೇ ದಂಡ ವಿಧಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ, ರಾಜ್ಯ ಬಿಜೆಪಿ ಸರಕಾರ ಲೂಟಿ ಮಾಡಿಕೊಳ್ಳಲು ಹುಟ್ಟಿದೆ ಎಂದು ಆರೋಪಿಸಿದರು.

ಬಿಜೆಪಿಯ 40% ಸರಕಾರ ಬಡವರಿಂದ ದಂಡವನ್ನು ಸರಕಾರದ ಬೊಕ್ಕಸಕ್ಕೆ ತುಂಬಿಸಿಕೊಂಡು ಇನ್ನಷ್ಟು ಹಗರಣಕ್ಕೆ ಈ ಹಣ ಬಳಸಿಕೊಳ್ಳಬಹುದು. ಆಧಾರ್ ಲಿಂಕ್ ಮಾಡುವ ಕುರಿತು ಇಲಾಖೆಯಿಂದ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡದೇ ದಂಡ ವಿಧಿಸುವುದರಿಂದ ಬಡವರಿಗೆ ಮಾತ್ರ ಸಮಸ್ಯೆ ಉಂಟಾಗುತ್ತಿದ್ದು, ಈ ರೀತಿ ಸಾರ್ವಜನಿಕರಿಂದ ಲೂಟಿ ಮಾಡುವುದನ್ನು ಖಂಡಿಸುತ್ತೇವೆ. ದಂಡ ವಿಧಿಸುವ ಮೂಲಕ ಸಾರ್ವಜನಿಕರನ್ನು ಹಿಂಡುತ್ತಿದ್ದಾರೆ. ಮೋದಿಯವರು ಚಾ ಮಾಡುವಾಗ ಹಿಂಡಿ ಅಭ್ಯಾಸವಾಗಿದ್ದು ಈಗ ಸಾರ್ವಜನಿಕರನ್ನು, ಬಡವರನ್ನು ಹಿಂಡುವ ಕಾರ್ಯವಾಗುತ್ತಿದೆ ಎಂದು ಅವರು ಆರೋಪಿಸಿದರು.

ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಮಾತನಾಡಿ, ಪಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಬಗ್ಗೆ ಸ್ಪಷ್ಟ ನೀತಿಯಿಲ್ಲದೆ ತುಘಲಕ್ ಆಡಳಿತ ನಡೆಸುತ್ತಿದೆ. ಆಧಾರ್ ಲಿಂಕ್ ಮಾಡಲು 2022ರಲ್ಲಿ ಆದೇಶವಾಗಿದ್ದರೂ ಅದರ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ. ಪತ್ರಿಕೆಗಳಲ್ಲಿಯೂ ಮಾಹಿತಿ ನೀಡಿಲ್ಲ. ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಿಂದ ಜನರಿಗೆ ಮಾಹಿತಿ ದೊರೆತಿದೆ. ಸರಕಾರಕ್ಕೆ ಹಣ ಮಾಡುವುದೇ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬೀಬ್ ಕಣ್ಣೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here