ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿರುವ ವರುಣ ದೇವರ ವಿಗ್ರಹಕ್ಕೆ ಮಾ.27ರಂದು ಪೂಜೆ ನೆರವೇರಿಸಲಾಯಿತು.
ಈಗಾಗಲೇ ಪುಷ್ಕರಣಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿತ್ತು. ಪುಷ್ಕರಣಿಯ ನಡುವೆ ಇರುವ ಕಟ್ಟೆಯನ್ನು ಶಿಲಾಮಯ ಕಟ್ಟೆಯನ್ನಾಗಿ ಪುನರ್‌ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರೆಯ ಕಟ್ಟೆಯ ಬಳಿ ಮಾತ್ರ ಸುತ್ತು ಕಾಫರ್‌ಡ್ರಮ್ ಅಳವಡಿಸಿ ನೀರನ್ನು ಹೊರ ತೆರೆಯಲಾಯಿತು. ಈ ವೇಳೆ ನೀರಿನಲ್ಲಿ ಆಳದಲ್ಲಿದ್ದ ಶ್ರೀ ವರುಣ ದೇವರ ವಿಗ್ರಹ ಬೆಳಕಿಗೆ ಬಂತು. ಸದಾ ನೀರಿನಲ್ಲಿ ತುಂಬಿರುವ ಪುಷ್ಕರಣಿಯಿಂದಾಗಿ ವರುಣ ದೇವರು ಕಾಣಸಿಗುವುದಿಲ್ಲ. ವರುಣ ದೇವರ ವಿಗ್ರಹ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ದೇವಳದ ವತಿಯಿಂದ ಪೂಜೆ ಮಾಡಲಾಯಿತು.
ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಪೂಜೆ ನೆರವೇರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರು, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಸಹಿತ ನೂರಾರು ಮಂದಿ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.