ಪಾಣಾಜೆ ಗ್ರಾ.ಪಂ. ಸಾಮಾನ್ಯ ಸಭೆ ; ಗ್ರಾಮಕ್ಕೆ ರೂ. 17.5 ಕೋಟಿ ಅನುದಾನ ಒದಗಿಸಿದ ಶಾಸಕರಿಗೆ ಅಭಿನಂದನೆ

0

ಪಾಣಾಜೆ: ಪಾಣಾಜೆ ಗ್ರಾ.ಪಂ. ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷೆ ಭಾರತೀ ಭಟ್ ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಆರ್ಲಪದವು ಪೇಟೆಯಲ್ಲಿ ನಾದುರಸ್ತಿಯಲ್ಲಿರುವ ಪೈಪ್‌ಲೈನ್ ದುರಸ್ತಿಗೆ ಅನುದಾನವಿಟ್ಟು ಕಾಮಗಾರಿ ಆರಂಭಿಸುವುದೆಂದು ನಿರ್ಣಯಿಸಲಾಯಿತು.

ಸ್ವರ್ಗ ಕರ್ನಾಟಕ ಚೆಕ್‌ಪೋಸ್ಟ್ ಬಳಿ ಶೌಚಾಲಯ ವ್ಯವಸ್ಥೆ ಆಗಬೇಕು – ಪೊಲೀಸರಿಂದ ಮನವಿ
ಕರ್ನಾಟಕ ಕೇರಳ ಗಡಿಭಾಗವಾದ ಸ್ವರ್ಗ ಚೆಕ್‌ಪೋಸ್ಟ್ ಬಳಿ ಶೌಚಾಲಯ, ಕುಡಿಯುವ ನೀರು ಇತ್ಯಾದಿ ಸೌಲಭ್ಯ ಕಲ್ಪಿಸಿಕೊಡುವಂತೆ ಪೊಲೀಸ್ ಇಲಾಖೆಯಿಂದ ಬಂದ ಮನವಿಯನ್ನು ಪ್ರಸ್ತಾಪಿಸಿ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಾಯಿತು. ಇಲ್ಲಿಯವರೆಗೆ ಸ್ಥಳೀಯ ಗ್ರಾ.ಪಂ. ಸದಸ್ಯೆಯೋರ್ವರ ಮನೆಯ ಶೌಚಾಲಯ ಬಳಕೆ ಮಾಡುತ್ತಿದ್ದರು. ಬಸ್ ಸ್ಟ್ಯಾಂಡ್ ಬಳಿ ಶೌಚಾಲಯ ಮಾಡಿದರೂ ನೀರಿನ ವ್ಯವಸ್ಥೆಗೆ ತೊಂದರೆಯಾಗುತ್ತದೆ‌. ಚುನಾವಣಾ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ ಲ್ಲಿ 4-5 ಪೊಲೀಸರು ಕರ್ತವ್ಯದಲ್ಲಿರುತ್ತಾರೆ‌. ಪ್ರಸ್ತುತ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುವ ಚೆಕ್‌ಪೋಸ್ಟ್ ಖಾಸಗಿ ಜಾಗದಲ್ಲಿರುವ ಸಾರ್ವಜನಿಕ ಬಸ್ ತಂಗುದಾಣವಾಗಿರುವುದರಿಂದ ಅಲ್ಲಿ ಯಾವುದೇ ಹೆಚ್ಚಿನ ಸೌಕರ್ಯ ನೀಡಲು ಅಸಾಧ್ಯವಾಗುತ್ತದೆ ಮತ್ತು ಈ ಹಿಂದೆ ನೀಡಿರುವ ಸಹಕಾರದಂತೆ ಪೊಲೀಸ್ ಇಲಾಖೆಗೆ ಸಹಕಾರ ನೀಡುವುದಾಗಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.

ಚುನಾಯಿತ ಜನಪ್ರತಿನಿಧಿಗಳ ಗೌರವ ಧನ ಹೆಚ್ಚಳ
ಸರಕಾರದ ಪರಿಷ್ಕೃತ ಗೌರವಧನ ಅಧ್ಯಕ್ಷರಿಗೆ ರೂ. 3000 ದಿಂದ ರೂ. 6,000 ಕ್ಕೆ, ಉಪಾಧ್ಯಕ್ಷರಿಗೆ ರೂ. 2000 ದಿಂದ ರೂ. 4000 ಕ್ಕೆ ಏರಿಕೆ, ಸದಸ್ಯರಿಗೆ ರೂ. 1000 ದಿಂದ ರೂ. 2000 ಕ್ಕೆ ಏರಿಕೆಯಾಗಿರುವುದರ ಬಗ್ಗೆ ಬಂದಿರುವ ಸುತ್ತೋಲೆಯನ್ನು ವಾಚಿಸಲಾಯಿತು. ನಮ್ಮ ಆದಾಯಕ್ಕೆ ಬೇಕಾಗುವಷ್ಡು ವೇತನ ದೊರಕಿದಲ್ಲಿ ಪಂಚಾಯತ್ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ಅಬೂಬಕ್ಕರ್ ಹೇಳಿದರು.

ಒಣ ಕಸ ಸಂಗ್ರಹ
ತ್ಯಾಜ್ಯ ವಿಲೇವಾರಿ ಘಟಕದವರಿಂದ ಹಲವು ಸಮಸ್ಯೆಗಳನ್ನು ಮುಂದಿರಿಸಿ ಬರೆದಿರುವ ಪತ್ರವನ್ನು ಪ್ರಸ್ತಾಪಿಸಲಾಯಿತು. ಕುಡಿಯುವ ನೀರು, ಪಾರಿವಾಳ ಹಿಕ್ಕೆ, ವಾಹನ ದುರಸ್ತಿ, ವೇತನ ಹೆಚ್ಚಳ ಇತ್ಯಾದಿ ಬೇಡಿಕೆಯನ್ನು ಘಟಕ ನಿರ್ವಹಣೆಯವರು ಸಲ್ಲಿಸಿದ್ದರು. ವೇತನವನ್ನು ಸದ್ಯ ರೂ. 750 ಕ್ಕೆ ಹೆಚ್ಚಿಸಲು ಸಾಧ್ಯವಿಲ್ಲ. ಉಳಿದಂತೆ ಮೂಲ‌ ಸೌಕರ್ಯ ಕಲ್ಪಿಸಲು ಸ್ಥಳ ಪರಿಶೀಲನೆ ನಡೆಸಿ ನಿರ್ವಹಣೆಗೆ ಬಜೆಟ್ ಇಟ್ಟು‌ ಮುಂದಿನ ಕ್ರಮ ಕೈಗೊಳ್ಳುವುದೆಂದು ನಿರ್ಣಯಿಸಲಾಯಿತು. ಒಣ ಕಸ ಸಂಗ್ರಹ ಈಗ ಅಂಗಡಿಗಳಲ್ಲಿ ಮಾತ್ರ ನಡೆಯುತ್ತದೆ‌. ಮನೆ‌ಮನೆಗೆ ಹೋಗುವುದಕ್ಕಾಗಿ ಸದಸ್ಯರು ಕೂಡಾ ಜೊತೆಗೆ ಹೋಗು ವ ಬಗ್ಗೆ ಚರ್ಚಿಸಲಾಯಿತು.

ಸಿಬಂದಿಗಳ ವೇತನ ಹೆಚ್ಚಳ
ಪಂಚಾಯತ್ ಸಿಬಂದಿಗಳ ವೇತನ ಹೆಚ್ಚಿಸಲು ಬಂದಿರುವ ಮನವಿ ಬಗ್ಗೆ ಚರ್ಚಿಸಲಾಯಿತು.
ಪಂಚಾಯತ್ ವಿವಿಧ ಮೂಲಗಳ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಹೇಗೆ ವೇತನ ಹೆಚ್ಚಿಸುವುದು ?
ಸರಕಾರದಿಂದ ಮೂಲ ಧನ ನಿಗದಿಯಾಗಿರುವಷ್ಟೆ ಬರುತ್ತಿದೆ. ಉಳಿದುದನ್ನು ಪಂಚಾಯತ್ ನಿಧಿಯಿಂದ ಹೆಚ್ಚುವರಿಯಾಗಿ‌ ಕೊಡಲಾಗುತ್ತಿದೆ.

ಪಂಚಾಯತ್ ಕೆಲಸಗಳು ಸರಿಯಾದ ಸಮಯದಲ್ಲಿ ಆಗುತ್ತಿಲ್ಲ ಎಂಬ ಆರೋಪ ವ್ಯಕ್ತವಾದಾಗ ಪ್ರತಿಕ್ರಿಯಿಸಿದ ಸಿಬಂದಿ ಸೌಮ್ಯರವರು ‘ನಾವು ನಮ್ಮ ಕೆಲಸವನ್ನು ಸರಿಯಾಗಿ ಮಾಡಿಕೊಡುತ್ತಿದ್ದೇವೆ‌. ಯಾವುದೇ ಬಾಕಿಯಿಲ್ಲ. ಯೂನಿಯನ್ ಕರೆಗೆ ನಾವು ಪ್ರತಿಭಟನೆಗೆ ಹೋದರೂ ನಮ್ಮ ಕೆಲಸ ಮಾಡಿ ಮುಗಿಸಿದ್ದೇವೆ’ ಎಂದರು. ಸಿಬಂದಿ‌ ನಿಧಿಯಲ್ಲಿ ಉಳಿಕೆ ಇರುವ ಹಣದಲ್ಲಿ ನಾಲ್ವರು ಸಿಬಂದಿಗಳಿಗೆ ತಲಾ ರೂ. 500 ರಂತೆ ವೇತನ ಹೆಚ್ಚಿಸುವ‌ ಬಗ್ಗೆ ನಿರ್ಣಯಿಸಲಾಯಿತು.

ಶಾಸಕರಿಗೆ ಅಭಿನಂದನೆ
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿರುವುದು ಸೇರಿದಂತೆ ಪಾಣಾಜೆ ಗ್ರಾಮದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ರೂ. 17.51 ಕೋಟಿ ಅನುದಾನ ಒದಗಿಸಿದ ಶಾಸಕ ಸಂಜೀವ‌ ಮಠಂದೂರುರವರಿಗೆ ಸರ್ವಸದಸ್ಯರು ಅಭಿನಂದನೆ ಸಲ್ಲಿಸಿದರು.

ಉಳಿದಂತೆ ಶಾಲೆಗಳಲ್ಲಿ ರಾಂಪ್ ಅಳವಡಿಕೆಗೆ ಅನುದಾನ ಇಡುವುದು, ಸಾರ್ವಜನಿಕ ಅರ್ಜಿಗಳನ್ನು ಸಕಾಲದ ಮೂಲಕ ಸೇವೆ ನೀಡುವುದರ ಬಗ್ಗೆ ನಿರ್ಣಯಿಸಲಾಯಿತು.
ಉಪಾಧ್ಯಕ್ಷ ಅಬೂಬಕ್ಕರ್, ಸದಸ್ಯರಾದ ಸುಭಾಶ್ ರೈ, ನಾರಾಯಣ ನೈಕ್, ಮೋಹನ ನಾಯ್ಕ, ಕೃಷ್ಣಪ್ಪ ಪೂಜಾರಿ, ಮೈಮೂನತ್ತುಲ್ ಮೆಹ್ರಾ, ಜಯಶ್ರೀ, ವಿಮಲ, ಸುಲೋಚನಾ ವಿವಿಧ ವಿಷಯಗಳಲ್ಲಿ ಚರ್ಚಿಸಿದರು.

ಪಿಡಿಒ ಚಂದ್ರಮತಿಯವರು ಸುತ್ತೋಲೆ ಓದಿದರು. ಕಾರ್ಯದರ್ಶಿ ಆಶಾ ವರದಿ ಓದಿದರು. ಸಿಬಂದಿಗಳಾದ ರೂಪಾ, ಸೌಮ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here