ಚುನಾವಣಾ ನೀತಿ ಸಂಹಿತೆ ಜಾರಿ: ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳ ತೆರವಿಗೆ ದ.ಕ.ಜಿಪಂ ಸಿಇಒ ಡಾ. ಕುಮಾರ್ ಸೂಚನೆ

0

ಮಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಮಾದರಿ ನೀತಿ ಸಂಹಿತೆ ಜಾರಿಗೊಂಡಿರುವ ಹಿನ್ನೆಲೆಯಲ್ಲಿ, ಸರಕಾರದ ಅನುದಾನವನ್ನು ಬಳಸಿಕೊಂಡು ಜಿಲ್ಲಾದ್ಯಂತ ಹಾಕಿರುವ ಜಾಹೀರಾತು ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳನ್ನು ಕೂಡಲೇ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದ.ಕ.ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ.ಕುಮಾರ್ ಸೂಚನೆ ನೀಡಿದ್ದಾರೆ. ಜಿಪಂನಲ್ಲಿ ಬುಧವಾರ ನಡೆದ ವೀಡಿಯೋ ಕಾನರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು ಅಧಿಕೃತ ಹಾಗೂ ಅನಧಿಕೃತವಾಗಿ ಹಾಕಲಾಗಿರುವ ಎಲ್ಲಾ ರೀತಿಯ ಜಾಹೀರಾತುಗಳನ್ನು ತೆರವುಗೊಳಿಸಬೇಕು, ಯಾವುದೇ ಸರಕಾರಿ ಕಚೇರಿ, ಅಧಿಕೃತ ವೆಬ್‌ಸೈಟ್‌ಗಳಲ್ಲಿ ಹಾಕಲಾಗಿರುವ ರಾಜಕೀಯ ಪಕ್ಷಗಳ ಮುಖಂಡರ ಭಾವಚಿತ್ರಗಳನ್ನು ತೆರವುಗೊಳಿಸಬೇಕು ಎಂದರು. ಸಂಬಂಧಿಸಿದ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ನಿಗದಿತ ಕಾಲಮಿತಿಯಲ್ಲಿ ವರದಿ ನೀಡಬೇಕು. ಅಧಿಕಾರಿಗಳು ಚುನಾವಣಾ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ನಿರ್ಲಕ್ಷ್ಯತನಕ್ಕೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ.,ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು, ತಹಶೀಲ್ದಾರರು, ಸಂಬಂಧಪಟ್ಟ ತಾಪಂ ಇಒ, ಪಿಡಿಒ ಮತ್ತಿತರರು ಪಾಲ್ಗೊಂಡಿದ್ದರು.

ತಕ್ಷಣದಿಂದ ಕಾರ್ಯಾರಂಭಕ್ಕೆ ಡಿಸಿ ಸೂಚನೆ
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೇಮಕವಾಗಿರುವ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ತಕ್ಷಣದಿಂದಲೇ ತಮ್ಮ ಕೆಲಸ ಕಾರ್ಯಗಳನ್ನು ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಿಂದಲೇ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here