ಧರ್ಮವೇ ಮೈವೆತ್ತು ನಿಂತರೆ ಅದು ಶ್ರೀರಾಮನಂತೆ ಕಾಣಿಸುತ್ತದೆ : ತೇಜಶಂಕರ ಸೋಮಯಾಜಿ
ಪುತ್ತೂರು: ಭಾರತದ ಸಂಸ್ಕೃತಿಯಲ್ಲಿ ನಮ್ಮದೇ ಆದ ವೇಳಾಪಟ್ಟಿ ಇದೆ, ಅದುವೇ ಪಂಚಾಂಗ. ಒಂದು ವರ್ಷವನ್ನು ಸಂವತ್ಸರ ಎಂದು ಕರೆಯುತ್ತಾರೆ. ಚೈತ್ರ ಮಾಸದ ನವಮಿಯಂದು ರಾಮ ಹುಟ್ಟಿದ್ದರಿಂದ ಆ ದಿನ ರಾಮನವಮಿಯನ್ನು ಆಚರಣೆ ಮಾಡುತ್ತೇವೆ ಎಂದು ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜ ಶಂಕರ ಸೋಮಯಾಜಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಶುಕ್ರವಾರ ಆಚರಿಸಲಾದ ರಾಮನವಮಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಾವು ಯೋಚಿಸುವಾಗ ಕೆಟ್ಟದರಲ್ಲೂ ಏನು ಒಳ್ಳೆಯದಿದೆ ಎಂಬುವುದನ್ನು ಯೋಚಿಸಬೇಕು. ಅಂತೆಯೇ ಜೀವನದಲ್ಲಿ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಪರೀಕ್ಷೆ ಎಂಬುದು ಮುಖ್ಯ. ಅಂತಹ ಪರೀಕ್ಷೆಗಳನ್ನು ಎದುರಿಸಿದ ದಿವ್ಯ ಪುರುಷ ಶ್ರೀರಾಮ. ಧರ್ಮವೇ ಮನು? ರೂಪದಲ್ಲಿ ಇದ್ದರೆ ಅದು ರಾಮನಾಗಿ ಕಾಣಿಸುತ್ತದೆ. ನಾವು ಕಷ್ಟ ಕಾಲದಲ್ಲಿಯೂ ಕೂಡ ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ರಾಮನ ಆದರ್ಶದ ಕುರಿತು ತಿಳಿಸಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಮಾತಿನಲ್ಲಿ ಹೇಳುವುದು ಸುಲಭ. ಆದರೆ ಅದನ್ನು ಆಚರಣೆಗೆ ತರುವುದು ಕಷ್ಟ. ತಂದೆಯ ವಾಕ್ಯವನ್ನು ಪರಿಪಾಲನೆ ಮಾಡಿದವನು ಶ್ರೀರಾಮ. ಹಾಗಾಗಿ ಆತ ಮರ್ಯಾದ ಪುರುಷೋತ್ತಮ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಂದ ರಾಮ ಸಂಕೀರ್ತನೆ ನೆರವೇರಿತು. ಶಿಕ್ಷಕಿ ಶ್ರುತಿ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.