ಆತೂರು ಶ್ರೀ ಸದಾಶಿವ ದೇವಸ್ಥಾನದ ವರ್ಷಾವಧಿ ಜಾತ್ರೆ-ದರ್ಶನ ಬಲಿ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ವರ್ಷಾವಧಿ ಜಾತ್ರೆ ಪ್ರಯುಕ್ತ ಮಾ.31ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.

ಪೂರ್ವಾಹ್ನ 9.30ರಿಂದ ಉತ್ಸವ ಆರಂಭಗೊಂಡು ಮಧ್ಯಾಹ್ನ ದರ್ಶನ ಬಲಿ, ಬಂಡಿರಥೋತ್ಸವ ನಡೆಯಿತು. ಬಟ್ಟಲು ಕಾಣಿಕೆ, ನಂತರ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಕೊನೆಮಜಲು ವೆಂಕಟ್ರಮಣ ಕುದ್ರೆತ್ತಾಯ ಮತ್ತು ಮನೆಯವರ ಸೇವೆಯಾಗಿ ಮೂಡಪ್ಪ ಸೇವೆ, ರಾತ್ರಿ ಬಲಿ ಹೊರಟು ಉತ್ಸವ, ಆನೆಗುಂಡಿಯವರೆಗೆ ಪೇಟೆ ಸವಾರಿ, ಆನೆಗುಂಡಿಯಲ್ಲಿ ಕೆರೆ ಉತ್ಸವ, ಕಟ್ಟೆಪೂಜೆ, ಆನೆಗುಂಡಿ ಬೂಡಿನಿಂದ ದುಗಲಾಯ ದೈವದ ಭಂಡಾರ ತರಲಾಯಿತು. ರಾತ್ರಿ ದೇವಸ್ಥಾನದಲ್ಲಿ ರಂಗಪೂಜೆ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿಯವರ ಪ್ರಾಯೋಜಕತ್ವದಲ್ಲಿ ಲಹರಿ ಸಂಗೀತ ಕಲಾಕೇಂದ್ರ ಐ.ಐ.ಸಿ.ಟಿ.ನೆಲ್ಯಾಡಿ ಇದರ ವಿದ್ಯಾರ್ಥಿಗಳಿಂದ ’ರಾಗಾಂತರಂಗ’ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಉತ್ಸವ ಸಮಿತಿಯವರು, ಎಲ್ಲಾ ಉಪಸಮಿತಿಗಳ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸುದ್ದಿಯಲ್ಲಿ ನೇರ ಪ್ರಸಾರ
ಮಾ.31ರಂದು ನಡೆದ ದರ್ಶನ ಬಲಿ, ಬಟ್ಟಲುಕಾಣಿಕೆ ಸುದ್ದಿ ಪುತ್ತೂರು ಯುಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರಗೊಂಡಿತು. ಎ.1ರಂದು ರಾತ್ರಿ ನಡೆಯುವ ಮಹಾರಥೋತ್ಸವವು ಸುದ್ದಿ ಪುತ್ತೂರು ಯುಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ.

ಇಂದು ಮಹಾರಥೋತ್ಸವ

ಎ.1ರಂದು ರಾತ್ರಿ 7ರಿಂದ ಬಲಿ ಹೊರಟು ಉತ್ಸವ, ರಕ್ತೇಶ್ವರಿ ಮತ್ತು ಹುಲಿ ದೈವಗಳ ನುಡಿಕಟ್ಟುಗಳು ನಡೆದು ರಾತ್ರಿ 9ರಿಂದ ಮಹಾರಥೋತ್ಸವ, ಬಳಿಕ ಅಶ್ವತ್ಥ ಕಟ್ಟೆಪೂಜೆಗಳು ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಹಿರಿಯರಿಗೆ ಸನ್ಮಾನ, ಯಕ್ಷಗಾನ ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here