ಪುತ್ತೂರು: ಭವಿಷ್ಯದಲ್ಲಿ ಉತ್ತಮ ಉದ್ಯೋಗ ದೊರೆಯಬೇಕಾದರೆ ಈ ಹಂತದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಈ ಸ್ಪರ್ಧಾತ್ಮಕ ಯುಗದಲ್ಲಿ ಆಯ್ಕೆ ಮುಖ್ಯವಾಗಿರುತ್ತದೆ. ನಾವು ಏನಾಗಬೇಕೆಂದು ಬಯಸುತ್ತೇವೆಯೋ ಆ ಗುರಿಯ ಕಡೆಗೆ ನಾವು ಸಾಗಬೇಕು ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಂಪನಿ ಸೆಕ್ರೆಟರಿ ವಿಭಾಗದಲ್ಲಿ ವಿಪುಲ ಅವಕಾಶಗಳು ಲಭ್ಯವಿದೆ ಎಂದು ಉಡುಪಿಯ ಸಿ ಎಸ್ ಸಂತೋಷ್ ಪ್ರಭು ಹೇಳಿದರು.
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ವಾಣಿಜ್ಯ ಸಂಘವು ಆಯೋಜಿಸಿದ್ದ ‘ವಾಣಿಜ್ಯ ಪದವೀಧರರಿಗಿರುವ ಉದ್ಯೋಗಾವಕಾಶಗಳು’ ಎಂಬ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಕಂಪನಿ ಸೆಕ್ರೆಟರಿ ಉದ್ಯೋಗ ಮತ್ತು ಕಲಿಕೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ತಿಳಿಸಿದರು.
ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ICSI ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಶಂಕರ್ ಬಿ, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಸಂಧ್ಯಾಲಕ್ಷ್ಮಿ, ಹರ್ಷಿತಾ ಹಾಗೂ ಶಶಿಕಲಾ, ವಾಣಿಜ್ಯ ಸಂಘದ ಪದಾಧಿಕಾರಿಗಳು ಹಾಗೂ ಅಂತಿಮ ವರ್ಷದ ವಾಣಿಜ್ಯ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಲಿಖಿತ, ಶೈಲಜಾ, ಕೃತಿ, ಕವಿತಾ ಮತ್ತು ಜಯಶ್ರೀ ಪ್ರಾರ್ಥಿಸಿದರು. ವಾಣಿಜ್ಯ ಸಂಘದ ಖಜಾಂಚಿಯಾದ ದೀಪಿಕಾ ಸ್ವಾಗತಿಸಿದರು. ಶೃತಿಕಾ ಪಿ ವಂದಿಸಿದರು ಹಾಗೂ ವಾಣಿಜ್ಯ ಸಂಘದ ಅಧ್ಯಕ್ಷರಾದ ಕವಿತಾ ಎಸ್ ಪೈ ನಿರೂಪಿಸಿದರು.