ಅಗಲ ಕಿರಿದಾದ ಸೇತುವೆ ಮನವಿಗೆ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಗರಂ
ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜದಿಂದ ದರ್ಬೆತ್ತಡ್ಕಕ್ಕೆ ಸಂಪರ್ಕ ಕಲ್ಪಿಸುವ ಮುಳಿಯಡ್ಕ ಕಲ್ಲಡ್ಕ ರಸ್ತೆಯಲ್ಲಿ ಕಲ್ಲಡ್ಕದಲ್ಲಿರುವ ಅಗಲ ಕಿರಿದಾದ ಸೇತುವೆಯನ್ನು ಬದಲಾಯಿಸಬೇಕು ಎಂದು ಕಳೆದ 20 ವರ್ಷಗಳಿಂದ ಈ ಭಾಗದ ಗ್ರಾಮಸ್ಥರು ಮನವಿ ಮಾಡುತ್ತಲೇ ಬಂದಿದ್ದರೂ ಗ್ರಾಮಸ್ಥರ ಮನವಿಗೆ ಕಿಂಚಿತ್ತು ಬೆಲೆಕೊಡದ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದಾರೆ. ಈ ಭಾಗದಲ್ಲಿ ಸುಮಾರು 200 ಕ್ಕೂ ಅಧಿಕ ಮನೆಗಳಿದ್ದು ಈ ವರ್ಷ ನಾವೆಲ್ಲರೂ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂಬ ನಿರ್ಧಾರದೊಂದಿಗೆ ಸೇತುವೆ ಬಳಿ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಸಿದ್ದಾರೆ.
ಒಳಮೊಗ್ರು ಗ್ರಾಮ ವ್ಯಾಪ್ತಿಯ ಪರ್ಪುಂಜ ದರ್ಬೆತ್ತಡ್ಕ ಸಂಪರ್ಕ ಕಲ್ಪಿಸುವ ಮುಳಿಯಡ್ಕದಲ್ಲಿರುವ ಈ ಅಗಲ ಕಿರಿದಾದ ಸೇತುವೆಯು ಕಳೆದ 30 ವರ್ಷಗಳ ಹಿಂದೆ ನಿರ್ಮಾಣಗೊಂಡದ್ದು ಇದೀಗ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಪಿಕ್‌ಅಪ್ ಬಿಟ್ಟರೆ ಘನವಾಹನ ಸಂಚಾರಕ್ಕೆ ಯೋಗ್ಯವಲ್ಲದ ಈ ಸೇತುವೆಯಿಂದ ಈ ಭಾಗದ ನೂರಾರು ಮಂದಿಗೆ ತೊಂದರೆಯಾಗುತ್ತಿದ್ದು ಹೊಸ ಸೇತುವೆ ನಿರ್ಮಿಸಿ ಕೊಡಿ ಎಂದು ಕಳೆದ 20 ವರ್ಷಗಳಿಂದ ಸಂಸದ ನಳಿನ್ ಕುಮಾರ್ ಕಟೀಲ್, ಡಿ.ವಿ ಸದಾನಂದ ಗೌಡರಿಂದ ಹಿಡಿದು ಇಂದಿನ ಸಂಜೀವ ಮಠಂದೂರು ತನಕ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೂ ನಮ್ಮ ಮನವಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಿಂಚಿತ್ತು ಬೆಲೆ ಕೊಡದೆ ಇರುವುದು ಬೇಸರ ತಂದಿದೆ. ಈ ಭಾಗದಲ್ಲಿ ಸುಮಾರು 200 ಕ್ಕೂ ಅಧಿಕ ಮನೆಗಳಿದ್ದು ನಮ್ಮ ಹಲವು ವರ್ಷಗಳ ಬೇಡಿಕೆ ಈಡೇರದೆ ಇದ್ದ ಕಾರಣ ಈ ವರ್ಷ ನಾವು ಸಾಮೂಹಿಕವಾಗಿ ಮತದಾನ ಬಹಿಷ್ಕಾರ ಮಾಡುತ್ತಿದ್ದೇವೆ ಈ ಬ್ಯಾನರ್‌ನಲ್ಲಿ ತಿಳಿಸಲಾಗಿದೆ.
ಅಗಲ ಕಿರಿದಾದ ಸೇತುವೆಯಿಂದ ಭಾಗದ ಜನರಿಗೆ ಮನೆಗೆ ಬೇಕಾದ ಸಾಮಾನುಗಳನ್ನು, ಕಟ್ಟಡ, ಮನೆ ನಿರ್ಮಾಣಕ್ಕೆ ಬೇಕಾದ ಕಲ್ಲು, ಸಿಮೆಂಟ್, ಮರಳು ಇತ್ಯಾದಿಗಳನ್ನು ಸಾಗಿಸಲು ಸುತ್ತುಬಳಸಿ ಬರಬೇಕಾಗುತ್ತದೆ. ಇದೀಗ ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಬೀಳುವ ಹಂತದಲ್ಲಿದೆ. ಹೀಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸೇತುವೆ ಪರಿಶೀಲನೆಗೂ ಬಂದು ಹೋಗುವುದಿಲ್ಲ, ಕನಿಷ್ಠ ಗ್ರಾಮಸ್ಥರ ಮನವಿಗೂ ಸ್ಪಂದನೆ ನೀಡುತ್ತಿಲ್ಲ ಹೀಗಿರುವಾಗ ನಾವ್ಯಾಕೆ ಮತದಾನ ಮಾಡಬೇಕು ಎಂದು ಭಾಗದ ಜನರು ಹೇಳುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎನಿಸಿಕೊಂಡವರು ಎಚ್ಚೆತ್ತುಕೊಂಡು ಗ್ರಾಮಸ್ಥರ ಸಮಸ್ಯೆ ಆಲಿಸುತ್ತಾರೋ ಕಾದು ನೋಡಬೇಕಾಗಿದೆ.