ಪುತ್ತೂರು ಹತ್ತೂರಿನಲ್ಲಿಯೂ ಪ್ರಸಿದ್ದಿ. ಈ ಮಾತು ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಉದ್ಯಮ, ಉದ್ಯೋಗ, ವ್ಯವಹಾರ, ಕಲೆ, ಸಂಸ್ಕೃತಿ, ರಾಜಕೀಯ ಹೀಗೆ ನಾನಾ ಕ್ಷೇತ್ರಗಳಲ್ಲಿಯೂ ರಾಜ್ಯ ರಾಜಧಾನಿಯಲ್ಲಿ ಪುತ್ತೂರು ಅತ್ಯಂತ ಪ್ರಸಿದ್ದಿ ಮತ್ತು ಕುತೂಹಲಕಾರಿಯಾದ ಸಂಗತಿಗಳಿಗೆ ಸಾಕ್ಷಿಯಾಗುವ ಹೆಸರಾಗಿ ಪರಿಣಮಿಸಿದೆ. ಪುತ್ತೂರಿನ ಆರಾಧ್ಯಮೂರ್ತಿ ಮಹಾಲಿಂಗೇಶ್ವರ ದೇವರಿಗಂತೂ ನಿಜಾರ್ಥದಲ್ಲಿ ಹತ್ತೂರಿನಲ್ಲಿ ಭಕ್ತಗಣವಿದೆ.
ಎಲ್ಲಾ ಕ್ಷೇತ್ರಗಳಂತೆ ಇಲ್ಲೊಂದು ಪುತ್ತೂರಿನ ಕಲಾ ಕ್ಷೇತ್ರದ ಕಲಾವಿದರ ಗುಂಪು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುತ್ತೂರಿನ ಹೆಸರನ್ನು ಪಸರಿಸಿದೆ. ಪುತ್ತೂರಿನ ಕುಂಚ ಕಲಾವಿದರ ಕಲಾಕೃತಿಗಳ ಸಮಾಗಮದೊಂದಿಗೆ ಬೆಂಗಳೂರಿನ ಆರ್ಟ್ ಗ್ಯಾಲರಿಯಲ್ಲಿ ಚಿತ್ರ ಪ್ರದರ್ಶನ ನಡೆಯುತ್ತಿದೆ.
ಪುತ್ತೂರಿನಲ್ಲಿ ಹುಟ್ಟಿ ಬೆಳೆದ ಮತ್ತು ಕಲಾಸಾಧನೆಯಲ್ಲೂ ಬೆಳೆದು ದೊಡ್ಡವರಾದ, ಪುತ್ತೂರಿನಲ್ಲಿಯೇ ಇರುವ ಮತ್ತು ಪುತ್ತೂರಿನ ಕಲಾವಿದರೆಲ್ಲರನ್ನೂ ಒಗ್ಗೂಡಿ, ಅವರೆಲ್ಲರೂ ತಮ್ಮ ತಮ್ಮ ಕಲಾಕೃತಿಗಳ ಪ್ರದರ್ಶನ ಬೆಂಗಳೂರಿನ ಜಯನಗಗರದಲ್ಲಿರುವ ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ ಮಾರ್ಚ್ 25 ರಿಂದ ನಡೆಯುತ್ತಿದೆ.
ಪ್ರದರ್ಶನದಲ್ಲಿ ಪುತ್ತೂರು ಮೂಲದ, ಈಗ ಬೆಂಗಳೂರಿನಲ್ಲಿ ನೆಲೆಸಿರುವ ಹಿರಿಯ ಕಲಾವಿದರಾದ ಚಂದ್ರನಾಥ ಆಚಾರ್ಯ ಸೇರಿದಂತೆ, ಗಿಳಿಯಾಲು ಜಯರಾಮ್ ಭಟ್, ಮನೋಹರ ಆಚಾರ್ಯ, ಆನಂದ ಬೆದ್ರಾಳ, ಶ್ರೀಪಾದ ಆಚಾರ್ಯ, ಸುಧಾಕರ ದರ್ಬೆ, ನವೀನ್ ಕುಮಾರ್, ರಾಜೇಶ ಆಚಾರ್ಯ, ರಾಘವೇಂದ್ರ ಆಚಾರ್ಯ, ರೊನಾಲ್ಡೋ ಪಿಂಟೋ, ಓಬಯ್ಯ, ಯೋಗೇಶ್ ಕಡಂದೇಲು, ವಿನೋದ್‌ರಾಜ್ ಪುತ್ತೂರು, ಪ್ರಸಾದ್ ಪುತ್ತೂರು, ರಂಜಿತ್ ಬಲ್ಯಾಯ, ದೀಪಕ್ ಎಂ, ವಿಷ್ಣು ಎಂ. ಎನ್., ಲಕ್ಷ್ಮೀಪ್ರಸಾದ್ ಕೆ ಆಚಾರ್, ಪ್ರಜಿತ್ ರೈ, ಅರ್ಪಿತಾ, ವೈಶಾಲಿ ಭಟ್, ನಿಕಿತಾ ಪಾಣಾಜೆ, ಶರಣ್ಯ ಪಿ, ಸುಹಾಸ್ ಕಿರಣ್, ಚೇತನಾ, ಶಿವಪ್ರಸಾದ್ ಕೆ ಆಚಾರ್ ರವರ ಕಲಾಕೃತಿಗಳು ಪ್ರದರ್ಶನಗೊಂಡಿದೆ.
ಪ್ರದರ್ಶನದ ಉದ್ಘಾಟನೆಯನ್ನು ಮುಳಿಯ ಜ್ಯುವೆಲ್ಸ್‌ನ ಬೆಂಗಳೂರು ಶಾಖೆಯ ಮ್ಯಾನೆಜರ್ ಸುಬ್ರಹ್ಮಣ್ಯ ಭಟ್‌ರವರು ಉದ್ಘಾಟಿಸಿದರು. ಕಲಾಪ್ರದರ್ಶನವು ಏಪ್ರಿಲ್ 20ರ ವರೆಗೆ ನಡೆಯಲಿದ್ದು, ಹಿರಿಯ ಕಲಾವಿದರು, ಕಲಾವಲಯದಲ್ಲಿ ವಿಶೇಷ ಸಾಧನೆ ಮಾಡಿರುವ ಕಲಾವಿದರು, ಕಲಾ ವೃತ್ತಿಯಲ್ಲಿ ತೊಡಗಿಕೊಂಡಿರುವ ಕಲಾವಿದರೊಂದಿಗೆ, ಹವ್ಯಾಸಿ ಕಲಾವಿದರ ಕಲಾಕೃತಿಗಳೂ ಪ್ರದರ್ಶನಗೊಂಡಿವೆ. ಈ ಪ್ರಯತ್ನ ಪುತ್ತೂರಿನ ಕಲಾ ಕ್ಷೇತ್ರದ ಚಟುವಟಿಕೆಯಲ್ಲಿ ವಿಶಿಷ್ಟ ಹೆಜ್ಜೆಯಾಗಿದೆ ಎಂದು ಬಣ್ಣಿಸಲಾಗಿದೆ.