ಪುತ್ತೂರು:ನ್ಯಾಯಾಲಯದಿಂದ ತಾತ್ಕಾಲಿಕ ನಿರ್ಬಂಧಕಾಜ್ಞೆ ಇದ್ದರೂ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ಆಕ್ಷೇಪಿಸಿದ ಮನೆಯವರಿಗೆ ಬೆದರಿಕೆಯೊಡ್ಡಿ ಕೊಲೆಗೆ ಯತ್ನಿಸಿರುವುದಾಗಿ ಆರೋಪಿಸಿ ನೀಡಲಾಗಿರುವ ಖಾಸಗಿ ದೂರಿನ ಮೇರೆಗೆ ಸಂಪ್ಯ ಪೊಲೀಸರು 12 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ದ.27ರಂದು ಘಟನೆ ನಡೆದಿದ್ದುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮುಂಡೂರು ಗ್ರಾಮದ ಮುಲಾರು ರವೀಂದ್ರ ಪೂಜಾರಿ ಎಂಬವರು ಈ ಕುರಿತು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ‘ನಾನು ಮುಂಡೂರು ಗ್ರಾಮದ ಸ.ನಂ.248/3ರಲ್ಲಿ 1.70 ಎಕರೆ ಜಾಗದ ಹಕ್ಕು ಸ್ವಾಧೀನ ಹೊಂದಿದ್ದು, ಸದ್ರಿ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿಯ ಅಧ್ಯಕ್ಷ ಭಾಸ್ಕರ ಆಚಾರ್‌ರವರ ವಿರುದ್ಧ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ಆದೇಶ ಮಾಡಿದೆ.ಹೀಗಿದ್ದರೂ ದ.27ರಂದು ಭಾಸ್ಕರ ಆಚಾರ್, ಅರುಣ್ ಕುಮಾರ್ ಪುತ್ತಿಲ, ಶ್ರೀಕಾಂತ್ ಆಚಾರ್, ಸದಾಶಿವ ಪಟ್ಟಿ, ಅನಿಲ್ ಕಣ್ಣರ್ನೂಜಿ, ಗಣೇಶ್ ಸುವರ್ಣ, ರಮೇಶ್ ಅಂಚನ್, ನವೀನ್, ಸಂತೋಷ್ ಕುಮಾರ್ ಶೆಟ್ಟಿ, ವಿನೋದ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಮತ್ತು ಪ್ರವೀಣ ಎಂಬವರು ನಮ್ಮ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಜೆಸಿಬಿಯ ಮೂಲಕ ಜಾಗ ನೆಲಸಮ ಮಾಡಲು ಬಂದು, ಸಿಮೆಂಟ್ ಕಂಬ ಮತ್ತು ಮುಳ್ಳು ತಂತಿಯಿಂದ ನಿರ್ಮಿಸಿದ ಬೇಲಿಯನ್ನು ಕಿತ್ತು ತೆಗೆದು ಜೆಸಿಬಿಯಿಂದ ನೆಲವನ್ನು ಅಗೆಯಲು ಪ್ರಾರಂಭಿಸಿದ್ದರು. ತಡೆಯಲು ಹೋದಾಗ ನನಗೆ ಮತ್ತು ಮಕ್ಕಳಾದ ಶ್ರೇಯ ಮತ್ತು ಶ್ರಾವ್ಯಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ ಕೊಲೆಗೆ ಯತ್ನಿಸಿ, ಮಕ್ಕಳ ಮೇಲೆ ಕಲ್ಲುಗಳನ್ನು ಎಸೆದು ಹಾನಿ ಉಂಟು ಮಾಡಿರುವುದಲ್ಲದೆ ಜೀವ ಬೆದರಿಕೆ ಹಾಕಿರುತ್ತಾರೆ ’ ಎಂದು ರವೀಂದ್ರ ಪೂಜಾರಿಯವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ 1860(ಸೆಕ್ಷನ್ 107,141,144,148,120¹,504,506,447,307,149 ಅಡಿಯಲ್ಲಿ)ಪ್ರಕರಣ ದಾಖಲಿಸಿಕೊಂಡಿದ್ದಾರೆ.