ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಎ.5ರಿಂದ ಎ.7ರ ವರೆಗೆ ವರ್ಷಾವಧಿ ಜಾತ್ರೆ ನಡೆಯಲಿದೆ. ಆ ಪ್ರಯುಕ್ತ ಎ.4 ರಂದು ಭಕ್ತಾದಿಗಳಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಗೊಳ್ಳಲಿದೆ.
ಎ.4ರಂದು ಬೆಳಗ್ಗೆ ಉಗ್ರಾಣ ಮುಹೂರ್ತ, ಸಾಯಂಕಾಲ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಬಳಿಕ ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಇವರಿಂದ ಹಲಸಿನಮಕ್ಕಿ ನರಸಿಂಹ ಶಾಸ್ತ್ರಿ ವಿರಚಿತ ‘ಶ್ರೀರಾಮ ದರ್ಶನ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಬಳಿಕ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ, ಶ್ರೀ ಜನಾರ್ದನ ದೇವರಿಗೆ ರಂಗಪೂಜೆ ನಡೆಯಲಿದೆ.
ಎ.5ರಂದು ಬೆಳಗ್ಗೆ ಗಣಪತಿಹೋಮ, ಸೀಯಾಳಾಭಿಷೇಕ, ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 6 ಗಂಟೆಯಿಂದ ಕೊಡಿಪಾಡಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ಕ್ಕೆ ರಂಗಪೂಜೆ, ನಂತರ ಬಲಿಹೊರಟು ಶ್ರೀದೇವರ ಭೂತಬಲಿ ಉತ್ಸವ, ಶ್ರೀದೇವರ ಉತ್ಸವ, ಪಲ್ಲಕಿ ಉತ್ಸವ, ನೃತ್ಯಬಲಿ, ಕಟ್ಟೆಪೂಜೆ ಬಳಿಕ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಎ.6ರಂದು ಬೆಳಗ್ಗೆ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲುಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಾಯಂಕಾಲ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಸಾರಥಿ ಪುತ್ತೂರು ಇವರಿಂದ ‘ಶ್ರೀ ದೇವಿ ಲೀಲೆ’ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ ಕಾರ್ತಿಕಪೂಜೆ ನಡೆದು, ದೈವದ ಭಂಡಾರ ತೆಗೆದು ಪ್ರಸಾದ ವಿತರಣೆ ನಡೆಯಲಿದೆ.
ಎ.7ರಂದು ಬೆಳಗ್ಗೆ ಹುಲಿಭೂತ ದೈವದ ವರ್ಷಾವಧಿ ನೇಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ರಕ್ತೇಶ್ವರಿ ದೈವಕ್ಕೆ ತಂಬಿಲ, ಶ್ರೀ ದೇವರಿಗೆ ಕಾರ್ತಿಕ ಪೂಜೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ಎ.4 ಹೊರೆಕಾಣಿಕೆ ಸಮರ್ಪಣೆ:
ಕ್ಷೇತ್ರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಎ.4ರಂದು ಸಾಯಂಕಾಲ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಕೊಡಿಪಾಡಿ ಶಾಲೆ, ಆನಾಜೆ, ಅರ್ಕ, ಓಜಾಲ, ಹನಿಯೂರು, ಪಲ್ಲತ್ತಾರು ಹಾಗೂ ಕೋಂಟ್ರುಪ್ಪಾಡಿ ಮೂಲಕ ಹಸಿರುವಾಣಿ ಮೆರವಣಿಗೆಯು ಸಂಚರಿಸಿ ಕ್ಷೇತ್ರ ತಲುಪಲಿದೆ.