ಉಪ್ಪಿನಂಗಡಿ: ಬಟ್ಟೆ ಮಳಿಗೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಕೋಟ್ಯಾಂತರ ರೂ. ನಷ್ಟ ಸಂಭವಿಸಿದ ಘಟನೆ ಇಲ್ಲಿನ ಜೆ.ಎಂ. ಬಿಲ್ಡಿಂಗ್‌ನಲ್ಲಿ ಎ.4ರ ಬೆಳಗ್ಗೆ ಸಂಭವಿಸಿದೆ.
ಇಲ್ಲಿನ ವಿವಾ ಫ್ಯಾಶನ್'ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ನೆಲ ಅಂತಸ್ತು ಸಹಿತ ಮೂರಂತಸ್ತನ್ನು ಈ ಕಟ್ಟಡ ಹೊಂದಿದ್ದು, ಇದರಲ್ಲಿ ಮೊದಲ ಮಹಡಿ ಹಾಗೂ ಎರಡನೇ ಮಹಡಿ ಸಂಪೂರ್ಣವಾಗಿ ವಿವಾ ಫ್ಯಾಶನ್‌ಗೆ ಸೇರಿದ ಮಳಿಗೆಯಾಗಿತ್ತು. ಸಂಪೂರ್ಣ ಹವಾನಿಯಂತ್ರಿತವಾಗಿ ವಿಶಾಲವಾಗಿದ್ದ ಈ ಷೋರೂಂನಲ್ಲಿ ಬಟ್ಟೆ ಬರೆ, ಫೂಟ್‌ವೇರ್, ಮಕ್ಕಳ ಆಟಿಕೆಗಳ ಹಾಗೂ ಬ್ಯಾಗ್‌ಗಳ ಬೃಹತ್ ಸಂಗ್ರಹವಿತ್ತು. ಬೆಳಗ್ಗೆ 6.30ರ ಸುಮಾರಿಗೆ ಇದರ ಮೊದಲ ಮಹಡಿಯಿಂದ ಹೊಗೆ ಹೊರಗೆ ಬಂದಿದ್ದನ್ನು ಸ್ಥಳೀಯರು ಗಮನಿಸಿದ್ದು, ಕೂಡಲೇ ಅಗ್ನಿಶಾಮಕದಳಕ್ಕೆ ಫೋನಾಯಿಸಿದ್ದರು. ಆದರೆ ಅಷ್ಟರಲ್ಲಾಗಲೇ ಮೊದಲ ಮಹಡಿಯ ಒಳಗಡೆಯಿದ್ದ ಸೊತ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದವು.
ಬೆಳಗ್ಗೆ ಈ ಘಟನೆ ಸಂಭವಿಸಿದ್ದರಿಂದ ಮಳಿಗೆ ತೆರೆದಿರಲಿಲ್ಲ. ಇದರಿಂದಾಗಿ ಅಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿ ಇಲ್ಲದಿದ್ದುದರಿಂದ ಇನ್ನಷ್ಟು ಅಪಾಯ ಸಂಭವಿಸುವುದು ತಪ್ಪಿದಂತಾಗಿದೆ. ಈ ಕಟ್ಟಡದ ನೆಲಮಹಡಿಯಲ್ಲಿ ಜ್ಯುವೆಲ್ಲರಿ, ಅಪ್ಟಿಕಲ್ಸ್ ಶೋರೂಂ ಸೇರಿದಂತೆ ಇನ್ನಿತರ ವ್ಯಾಪಾರ ಮಳಿಗೆಗಳಿದ್ದು, ಅದೃಷ್ಟವಶಾತ್ ಅವುಗಳಿಗೇನು ಹಾನಿ ಸಂಭವಿಸಿಲ್ಲ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ
ವಿವಾ ಫ್ಯಾಶನ್’ನ ಮಾಲಕ ಆತೂರಿನ ಇಮ್ತಿಯಾಝ್, ನನಗೆ ಬೆಳಗ್ಗೆ 7ರ ಸುಮಾರಿಗೆ ವಿಷಯ ನನ್ನ ಗಮನಕ್ಕೆ ಬಂದಿದ್ದು, ಸುಮಾರು 7.30ರಷ್ಟರ ಹೊತ್ತಿಗೆ ಅಗ್ನಿಶಾಮಕ ದಳವೂ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ಆದರೆ ಬೆಂಕಿ ಸಂಪೂರ್ಣ ನಂದುವಷ್ಟರ ಹೊತ್ತಿಗೆ ಒಂದನೇ ಮಳಿಗೆಯ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದವು. ಎರಡನೇ ಮಹಡಿಗೆ ಬೆಂಕಿ ವ್ಯಾಪಿಸಿಲ್ಲವಾದರೂ, ಅಲ್ಲಿ ಸಂಪೂರ್ಣ ಕಪ್ಪು ಹೊಗೆ ತುಂಬಿಕೊಂಡಿದ್ದರಿಂದ ಅಲ್ಲಿದ್ದ ಬಟ್ಟೆ-ಬರೆಗಳ ದಾಸ್ತಾನು ಉಪಯೋಗಕ್ಕೆ ಬಾರದಂತೆ ಆಗಿವೆ. ಮುಂಬರುವ ರಂಜಾನ್ ಹಬ್ಬಕ್ಕೆಂದು ಬಟ್ಟೆಯ ಸ್ಟಾಕ್‌ಗಳನ್ನು ಖರೀದಿಸಿ ಅದರ ಬಂಡಲ್‌ಗಳನ್ನು ಒಂದನೇ ಮಹಡಿಯಲ್ಲಿಡಲಾಗಿತ್ತು. ಅದೆಲ್ಲಾ ಸಂಪೂರ್ಣ ಸುಟ್ಟು ಕರಕಲಾಗಿವೆ. ಒಂದನೇ ಮಹಡಿಯಲ್ಲಿದ್ದ ಪೀಠೋಪಕರಣ, ಎಸಿ, ವಯರಿಂಗ್, ಕಂಪ್ಯೂಟರ್‌ಗಳು, ಬಟ್ಟೆ ಬರೆ ಸೇರಿದಂತೆ ಎಲ್ಲಾ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ಘಟನೆಯಿಂದ ಸುಮಾರು ೩ ಕೋಟಿಯಷ್ಟು ನಷ್ಟ ಸಂಭವಿಸಿರಬಹುದು. ಒಮ್ಮಿಂದೊಮ್ಮೆಲೇ ವಿದ್ಯುತ್ ಲೈನ್‌ನಲ್ಲಿ ಹೈ ವೋಲ್ಟೆಜ್ ಬಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ತಿಳಿಸಿದ್ದಾರೆ.