ಡಾ.ಎಂ.ಕೆ.ಪ್ರಸಾದ್ ಅವರಿಂದ ದ್ವೇಷಪೂರಿತ ಭಾಷಣ ಆರೋಪಿಸಿ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಧರ್ಮಗುರುಗಳಿಂದ ಪತ್ರಿಕಾಗೋಷ್ಠಿ

0

ಪುತ್ತೂರು: ಹಿಂದು ಜಾಗರಣ ವೇದಿಕೆಯ ಕಾರ್ಯಕ್ರಮದಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಕ್ರೈಸ್ತರು ನಡೆಸುವ ಸಂಸ್ಥೆಗಳ ಹೆಸರನ್ನು ಹೇಳಿ ದ್ವೇಷಪೂರಿತ ಭಾಷಣ ಮಾಡಿರುವುದು ಸಮುದಾಯಕ್ಕೆ ನೋವಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರು ಮತ್ತು ಧರ್ಮಗುರುಗಳಾಗಿರುವ ವಂ|ಲಾರೆನ್ಸ್ ಮಸ್ಕರೇನ್ಹಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕ್ರೈಸ್ತರು ನಡೆಸುವ ಶಿಕ್ಷಣ ಸಂಸ್ಥೆಗಳಾದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆ, ಸಂತ ಫಿಲೋಮಿನಾ ಕಾಲೇಜು, ಸಂತ ವಿಕ್ಟರ್‌ನ ಪ್ರೌಢಶಾಲೆ, ಬೆಥನಿ ಶಿಕ್ಷಣ ಸಂಸ್ಥೆಗಳು, ಫಾದರ್ ಪತ್ರಾವೋ ಆಸ್ಪತ್ರೆಯ ಪರವಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಾ.೨೫ರಂದು ವಾಟ್ಸಾಪ್‌ನಲ್ಲಿ ಪ್ರಚಾರವಾಗುತ್ತಿರುವ ಹಿಂದು ಜಾಗರಣ ವೇದಿಕೆಯ ಕಾರ್ಯಕ್ರಮದ ಭಾಷಣದಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಕ್ರೈಸ್ತ ಸಮುದಾಯದ ವಿರುದ್ಧ ನೇರವಾಗಿ ಸಮಾಜದಲ್ಲಿ ಅಶಾಂತಿಯನ್ನು ತರುವಂತೆ ಮಾತುಗಳನ್ನಾಡಿದ್ದಾರೆ. ಮಾತ್ರವಲ್ಲದೆ ಕೋಮು ಗಲಭೆಯನ್ನು ಸೃಷ್ಟಿಸಲು ಪ್ರಚೋದನೆ ನೀಡಿದ್ದಾರೆ. ಕ್ರೈಸ್ತರು ನಡೆಸುವ ಸಂಸ್ಥಗಳಾದ ಸಂತ ಫಿಲೋಮಿನಾ ಕಾಲೇಜು, ಫಾದರ್ ಪತ್ರವೋ ಆಸ್ಪತ್ರೆ, ಬೆಥನಿ ಶಿಕ್ಷಣ ಸಂಸ್ಥೆ, ಸಂತ ವಿಕ್ಟರನ ಸಂಸ್ಥೆ ಅದೇ ರೀತಿ ಮಂಜಲ್ಪಡ್ಪುವಿನಲ್ಲಿರುವ ಸುಧಾನ ಸಂಸ್ಥೆಯ ಹೆಸರನ್ನು ಹೇಳಿ ಈ ಜಾಗವೆಲ್ಲಾ ಹಿಂದುಗಳದ್ದು, ಬ್ರಿಟೀಷರು ಅವರಿಗೆ ನೀಡಿದ್ದು, ಅವರಿಗೆ ಜಾಗ ನೀಡಿ ಹಿಂದುಗಳಿಗೆ ಜಾಗವಿಲ್ಲದಂತಾಗಿದೆ ಎಂದು ಹೇಳಿದ್ದಾರೆ. ಆದರೆ ಇವರ ಮಕ್ಕಳು ಮತ್ತ ಪತ್ನಿ ಇದೇ ಸಂತ ವಿಕ್ಟರನ ಪ್ರೌಢ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿ ಇವತ್ತು ಕ್ರೈಸ್ತ ಸಮುದಾಕ್ಕೆ ಅಪಮಾನ ಮಾಡಿರುವುದು ನೋವು ತಂದಿದೆ. ದ್ವೇಷ ಭಾಷಣಗಳಂತಹ ಚಟುವಟಿಕೆಗಳು ಅಘಾತಕಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಲ್ಲಿ ಭಾರತೀಯ ದಂಡ ಸಂಹಿತೆ 1890ರ ಅಡಿಯಲ್ಲಿ ಡಾ. ಎಂ.ಕೆ.ಪ್ರಸಾದ್ ಅವರು ವಿವಿಧ ಅಪರಾಧಗಳನ್ನು ಮಾಡಿದ್ದಾರೆ. ಇಂತಹ ದ್ವೇಷ ಪೂರಿತ ಭಾಷಣಗಳಿಗೆ ಕಡಿವಾಣ ಹಾಕಿ, ಡಾ.ಎಂ.ಕೆ.ಪ್ರಸಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಾವು ಸಹಾಯಕ ಕಮೀಷನರ್ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಗೆ ಜ್ಞಾಪಕ ಪತ್ರ ನೀಡಿದ್ದೇವೆ ಎಂದು ಅವರು ಹೇಳಿದ ಅವರು ವೀಡಿಯೋವನ್ನು ಯುಟ್ಯೂಬ್ ಚಾನೆಲ್ ಮತ್ತಿತರ ಸಾಮಾಜಿಕ ಜಾಲತಾಣಗಳಿಂದ ತಕ್ಷಣ ಅಳಿಸಬೇಕು ಮತ್ತು ಕ್ಷಮೆಯಾಚಿಸಬೇಕೆಂದು ಅವರು ಹೇಳಿದರು.

ಇವತ್ತಿಗೂ ಅವರೊಂದಿಗೆ ಬಾಂಧವ್ಯ ಉತ್ತಮ:
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೋ ಅವರು ಮಾತನಾಡಿ ಸಂತ ಪಿಲೋಮಿನಾ ಶಿಕ್ಷಣ ಸಂಸ್ಥೆ ಸ್ವಾತಂತ್ರ್ಯ ಬಳಿಕ ಸ್ಥಾಪನೆ ಆದದ್ದು, 1958ರಲ್ಲಿ ಸಂತಪಿಲೋಮಿನಾ ಸಂಸ್ಥೆ ಅದಕ್ಕಿಂತ 5 ವರ್ಷದ ಹಿಂದೆ ಸಂತ ಪಿಲೋಮಿನಾ ಹೈಸ್ಕೂಲ್ ಸ್ಥಾಪನೆ ಆಗಿತ್ತು. ಈ ನಿಟ್ಟಿನಲ್ಲಿ ಡಾ. ಎಂ.ಕೆ.ಪ್ರಸಾದ್ ಅವರು ಹೇಳಿದ ಹೇಳಿಕೆ ಸತ್ಯಕ್ಕೆ ದೂರವಾದದ್ದು, ಪ್ರಸಾದ್ ಭಂಡಾರಿಯರನ್ನು ಬಹಳಷ್ಟು ಸಲ ನಮ್ಮ ಸಂಸ್ಥೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ವೈಯುಕ್ತಿಕವಾಗಿ ನನಗೆ ಅತ್ಯಂತ ಆತ್ಮೀಯರು. ಅವರ ಜೊತೆ ಬಾಂಧವ್ಯ ಅದ್ಭುತವಾಗಿದೆ. ಇವತ್ತಿಗೂ ಆ ಬಾಂಧವ್ಯ ಇದೆ. ಇಂತಹ ಸಂದರ್ಭದಲ್ಲಿ ಅವರು ಸ್ವಾತಂತ್ರ್ಯ ನಂತರ ಬಂದ ಸಂಸ್ಥೆಗಳ ಕುರಿತು ಆ ರೀತಿಯ ಹೇಳಿಕೆ ನೀಡಿರುವುದು ನಮ್ಮ ಸಮುದಾಯಕ್ಕೆ ನೋವಾಗಿದೆ. ಅವರು ಮಾತನಾಡಿದ ವಿಚಾರ ಹೇಗೆ ವೈರಲ್ ಆಯಿತೋ ಅದೇ ರೀತಿ ೭ ವರ್ಷದ ಹಿಂದೆ ಕ್ರಿಸ್‌ಮಸ್ ಕೇಕ್ ನಾನೇ ಅವರಿಗೆ ಬಾಯಿಗೆ ನೀಡಿದ್ದು ಕೂಡಾ ವೈರಲ್ ಆಯಿತು. ಆದರೆ ನಮಗೆ ಇವತ್ತಿಗೂ ಅವರು ಆತ್ಮೀಯರೇ. ಹಾಗಾಗಿ ನಾನೆ ಅವರಲ್ಲಿ ಕುದ್ದು ಮಾತನಾಡುತ್ತೇನೆ ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಪಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಸ್ಟ್ಯಾನಿ ಪಿಂಟೋ, ಸಂತ ಪಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ| ಅಶೋಕ್ ರಾಯನ್ ಕ್ರಾಸ್ತಾ, ಚರ್ಚ್‌ನ ಪಾಲನ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಜಾನ್ ಕುಟಿನ್ಹೋ, ಜೋ ಡಿಸೋಜಾ ಉಪಸ್ಥಿತರಿದ್ದರು.


ನಾನು ಕೋಮುಪ್ರಚೋದನೆ ಮಾಡಿಲ್ಲ – ಡಾ.ಎಂ.ಕೆ.ಪ್ರಸಾದ್ ಸ್ಪಷ್ಟನೆ:

ಕ್ರಿಶ್ಚಯನ್ ಶಿಕ್ಷಣ ಸಂಸ್ಥೆಯವರು ಮಾಡಿರುವ ಆರೋಪಕ್ಕೆ ಡಾ.ಎಂ.ಕೆ.ಪ್ರಸಾದ್ ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ಕೋಮು ಪ್ರಚೋದನೆ ಮಾಡಿಲ್ಲ. ಕೋಮು ಪ್ರಚೋದನೆ ಆಗುವ ಪ್ರಶ್ನೆಯೂ ಇಲ್ಲ. ಹಿಂದೆ ಬ್ರಿಟೀಷ್ ಸರಕಾರ ಇದ್ದಾಗ ಆಗಿನ ಆಡಳಿತಾಧಿಕಾರಿಗಳು ಅವರು ದೊಡ್ಡ ಜಾಗಗಳನ್ನು ಸಣ್ಣ ಮೊತ್ತಕ್ಕೆ ಅಥವಾ ಉಚಿತವಾಗಿ ಕ್ರಿಶ್ಚಯನ್ ಬಂಧುಗಳಿಗೆ ಕೊಟ್ಟಿದ್ದಾರೆ. ಹಾಗಾಗಿ ಇವತ್ತು ಎಲ್ಲಾ ಪೇಟೆಗಳ ನಡುವಿನಲ್ಲಿ ಚರ್ಚ್ ಇರುತ್ತದೆ. ಅವರಿಗೆ ಬೇಕಾದ ಚಟುವಟಿಕೆಗಳನ್ನು ಅವರು ಮಾಡುವುದಕ್ಕೆ ನನಗೆ ಬೇಸರವಿಲ್ಲ. ಯಾಕೆಂದರೆ ಕ್ರಿಶ್ಚಯನ್ನರು ಶಿಸ್ತುಬದ್ಧರು. ಅವರು ನಮ್ಮ ಮಕ್ಕಳಿಗೆಲ್ಲಾ ಶಿಕ್ಷಣ, ಆರೋಗ್ಯ ಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ಅದರೆ ಕೆಲವು ಕಡೆ ಕೆಲವರು ಧರ್ಮದ ವಿಚಾರದಲ್ಲಿ ನಮ್ಮ ದಲಿತರನ್ನು ಮತಾಂತರ ಮಾಡುತ್ತಿದ್ದಾರೆ. ಇದಕ್ಕೆ ನಾನು ಸಂಪೂರ್ಣ ವಿರೋಧ. ನನ್ನ ಹೋರಾಟ ಅದಕ್ಕೆ ಮಾತ್ರ. ನಾನು ಎಲ್ಲೂ ಕೂಡಾ ಜಾಗವನ್ನು ಹಿಂಪಡೆಯಬೇಕೆಂದು ಹೇಳಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ ಅವರು ಕೆಲವು ವರ್ಷಗಳ ಹಿಂದೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕ್ರಿಶ್ಚಯನ್ ಸಮುದಾಯದ ಮಂದಿಗೆ ಹೋಗಲು ದಾರಿ ವ್ಯವಸ್ಥೆಗೆ ಸಂಬಂಧಿಸಿ ನಾನೇ ಆ ಸಮುದಾದ ಪರ ನಿಂತು ಹೋರಾಟ ಮಾಡಿದ್ದೇನೆ. ಹಾಗಾಗಿ ಎಲ್ಲೂ ನಾನು ಅವರನ್ನು ವಿರೋಧಿಸಿಲ್ಲ. ಮತಾಂತರ ಮಾಡುವುದಕ್ಕೆ ಮಾತ್ರ ನನ್ನ ವಿರೋಧ ಎಂದರು.

LEAVE A REPLY

Please enter your comment!
Please enter your name here