ಬೆಂಗಳೂರು : ಹಿಂದುತ್ವದ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು, ಸುಳ್ಯ ಕ್ಷೇತ್ರದ ಅಭ್ಯರ್ಥಿ ಬದಲಾವಣೆಗೆ ಹೈಕಮಾಂಡ್ ಹಾಗೂ ಕೋರ್ ಕಮಿಟಿ ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಸಂಘಟನೆಯ ಹಿನ್ನೆಲೆಯಲ್ಲಿ ಬಂದಿರುವ ಅಭ್ಯರ್ಥಿ ಆಯ್ಕೆಗೆ ತಲಾಷ್ ಮಾಡಿದೆ.
ಪುತ್ತೂರು ಕ್ಷೇತ್ರದಲ್ಲಿ ಸಕ್ರೀಯವಾಗಿರುವ ಹಾಗೂ ಹಿಂದೂ ಸಂಘಟನೆಯಲ್ಲಿ ತೊಡಗಿಕೊಂಡವರಿಗೆ ಟಿಕೇಟ್ ನೀಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿಯಲ್ಲಿ ಸಕ್ರೀಯರಾಗಿರುವ ಪುತ್ತೂರು ತಾ.ಪಂ.ಮಾಜಿ ಉಪಾಧ್ಯಕ್ಷ ಹಾಗೂ ಪುತ್ತೂರು ಎಪಿಎಂಸಿ ಅಧ್ಯಕ್ಷರಾಗಿದ್ದ ದಿನೇಶ್ ಮೆದು ಅವರಿಗೆ ಈ ಬಾರಿಯ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಎಳವೆಯಿಂದಲೇ ಸಕ್ರೀಯವಾಗಿದ್ದ ದಿನೇಶ್ ಮೆದು ಅವರು ವಿವೇಕಾನಂದ ಪದವಿ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದಿದ್ದಾರೆ. ಕಾಲೇಜು ಜೀವನದಲ್ಲಿ ಎಬಿವಿಪಿಯಲ್ಲೂ ತೊಡಗಿಸಿಕೊಂಡಿದ್ದರು. ಎಬಿವಿಪಿಯಲ್ಲಿ ತಾಲೂಕು ಹೋರಾಟ ಪ್ರಮುಖ್ ಆಗಿ ಮುಂಚೂಣಿಯಲ್ಲಿದ್ದರು.
ಮಂಗಳೂರು ವಿ.ವಿ.ಯ ಸೆನೆಟ್ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಸವಣೂರು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ದಿನೇಶ್ ಮೆದು ಅವರು ಸಂಘಟನೆಯ ಮೂಲಕ ಬೆಳೆದು ಬಂದವರು.
ರಾಜಕೀಯ ಕ್ಷೇತ್ರದ ಮೊದಲ ಪ್ರಯತ್ನದಲ್ಲೇ ಪುತ್ತೂರು ತಾ.ಪಂ.ಸದಸ್ಯರಾಗಿ ಆಯ್ಕೆಯಾಗಿ, ತಾ.ಪಂ. ಉಪಾಧ್ಯಕ್ಷರಾಗಿಯೂ ಸೇವೆ ಮಾಡಿದ್ದರು. ಪುತ್ತೂರು ಎಪಿಎಂಸಿ ನಿರ್ದೇಶಕರಾಗಿ ಆಯ್ಕೆಯಾದ ಅವರು ಎರಡು ಅವಧಿಗೆ ಎಪಿಎಂಸಿ ಅಧ್ಯಕ್ಷರಾಗಿ ರೈತ ಪರ ಕೆಲಸ ಮಾಡಿದ್ದರು. ಕೊರೊನಾ ಸಮಯದಲ್ಲಿ ಮಾರುಕಟ್ಟೆ ಇಲ್ಲದೇ ಕಂಗಾಲಾಗಿದ್ದ ಅಡಿಕೆ ಸೇರಿದಂತೆ ಇತರ ವಾಣಿಜ್ಯ ಉತ್ಪನ್ನ, ತರಕಾರಿಗಳಿಗೆ ಮಾರುಕಟ್ಟೆ ಒದಗಿಸಿಕೊಟ್ಟು ರೈತಸ್ನೇಹಿಯಾಗಿ ಗುರುತಿಸಿಕೊಂಡಿದ್ದರು.
ಪುತ್ತೂರಿನ ಬಹು ಬೇಡಿಕೆಯ ಎಪಿಎಂಸಿ ಅಂಡರ್ಪಾಸ್ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ದಿನೇಶ್ ಮೆದು ಅವರದ್ದು.
ಇದೀಗ ದಿನೇಶ್ ಮೆದು ಅವರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಲು ಒಲವು ತೋರಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.