





ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರಿವಾರ ದೇವರ ಗುಡಿಯಲ್ಲಿ ’ಶ್ರೀ ದೇವಿ ಗುಡಿ’ ನಾಮಫಲಕವನ್ನು ಮೂಲ ದಾಖಲೆಯಂತೆ ’ ಶ್ರೀ ದುರ್ಗಾ ಗುಡಿ’ ಎಂದು ನಮೂದಿಸಲಾಗಿದೆ.


ಸದ್ರಿ ಕ್ಷೇತ್ರದ ಅಽಕೃತ ಮೂಲ ಸೆಕ್ಷನ್ 38, ದಿಟ್ಟಂ ರಿಜಸ್ಟ್ರಿ ದಾಖಲೆಗಳಲ್ಲಿ ಶ್ರೀ ದುರ್ಗಾಗುಡಿ ಎಂದು ದಾಖಲಾಗಿದೆ ವಿನಃ ಶ್ರೀ ದೇವಿ ಗುಡಿ ಎಂದು ದಾಖಲಾಗಿಲ್ಲ. ಶಿವ ಕ್ಷೇತ್ರದಲ್ಲಿ ಶಿವ ಪತ್ನಿ ಪಾರ್ವತಿ ದೇವಿ ಪರಿವಾರ ದೇವರು. ಇಲ್ಲಿ ಶ್ರೀ ದುರ್ಗಾದೇವಿ ಗುಡಿ ಅಥವಾ ಶ್ರೀ ದುರ್ಗಾಪರಮೇಶ್ವರಿ ಗುಡಿ ಅಥವಾ ಶ್ರೀ ಪಾರ್ವತಿ ದೇವಿ ಗುಡಿ ಎಂದು ಮುಂದೆ ಫಲಕ ಅಳವಡಿಸಬೇಕು. ಅದೇ ರೀತಿ ಶ್ರೀ ಪಾರ್ವತಿ ದೇವಿ, ಶ್ರೀ ದುರ್ಗಾದೇವಿಗೆ ಸಂಬಂಧಿಸಿದ ರೀತಿಯಲ್ಲೇ ಪೂಜೆ ಸಲ್ಲಿಸಬೇಕು ಎಂದು ನರಿಮೊಗರಿನ ಶಶಿಧರ ವಿ.ಎನ್.ರವರು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಹಿಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶ್ರೀ ದೇವಳದ ಆಡಳಿತ ವರ್ಗಕ್ಕೆ ಇಲಾಖಾ ಆಯುಕ್ತರು ಸೂಚಿಸಿದ್ದರು. ಇದೀಗ ದೇವಳದ ಆಡಳಿತ ವರ್ಗ ಶ್ರೀ ದುರ್ಗಾ ಸನ್ನಿಧಿಯ ಗುಡಿಯ ಮುಂದೆ ಶ್ರೀ ದುರ್ಗಾಗುಡಿ ಎಂದು ಫಲಕ ಅಳವಡಿಸಿದೆ. ಶ್ರೀ ದೇವಳದಲ್ಲಿ ದುರ್ಗಾ ಸಾನಿಧ್ಯ ಗುಡಿಯ ಮುಂದೆ ಶ್ರೀ ದುರ್ಗಾ ಗುಡಿ ಎಂಬುದರ ಬದಲಾಗಿ ಶ್ರೀದೇವಿ ಗುಡಿ ಎಂದು ನಾಮಫಲಕ ಅಳವಡಿಸಲು ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮತಿಯನ್ನು ಸಹಿತ ಪಡೆದುಕೊಳ್ಳಲಾಗಿಲ್ಲ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಶಶಿಧರ ವಿ.ಎನ್. ಎಂಬವರು ಪಡೆದುಕೊಂಡ ಮಾಹಿತಿಯಲ್ಲಿ ತಿಳಿದು ಬಂದಿದೆ.





ಜೀರ್ಣೋದ್ಧಾರ ಸಂದರ್ಭದಲ್ಲಿ ಬದಲಾವಣೆ: ಸದ್ರಿ ದೇವಳದಲ್ಲಿ ಈ ಹಿಂದೆ ಶ್ರೀ ದುರ್ಗಾ/ಪಾರ್ವತಿ ಗುಡಿ ಎಂದು ಫಲಕವಿತ್ತು. 2013ರಲ್ಲಿ ಶ್ರೀ ದೇವಳ ಜೀರ್ಣೋದ್ಧಾರಗೊಂಡ ಬಳಿಕ ಮೂಲ ಹೆಸರು ಶ್ರೀ ದುರ್ಗಾಗುಡಿ ಎಂಬುದರ ಬದಲಾಗಿ ಶ್ರೀ ದೇವಿಗುಡಿ ಎಂದು ಬದಲಾಯಿಸಿ ನಮೂದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ರೀತಿ ಮೂಲ ದಾಖಲೆ, ಸಂಪ್ರದಾಯಕ್ಕೆ ವಿರುದ್ಧವಾಗಿ ಮೂಲ ಸಾನಿಧ್ಯ, ಸಾನಿಧ್ಯದ ಹೆಸರನ್ನು ಬದಲಾಯಿಸಲು ಅವಕಾಶ ಇರುವುದಿಲ್ಲ. ಇವೆಲ್ಲದರ ಪರಿಣಾಮ ಇದೀಗ ಶ್ರೀ ದುರ್ಗಾದೇವಿ ಗುಡಿ ಎಂದು ಮರು ಮೂಲ ನಾಮಫಲಕವನ್ನು ಶ್ರೀ ದುರ್ಗಾ ಸಾನಿಧ್ಯದ ಗುಡಿ ಮುಂದೆ ಮರು ಮುದ್ರಿಸಲು ಕ್ರಮಕೈಗೊಳ್ಳುವ ಮೂಲಕ ಈಗಿನ ಆಡಳಿತ ವರ್ಗ ಸೂಕ್ತ ನಿಲುವನ್ನು ಕೈಗೊಂಡಿದೆ ಎಂದು ಮನವಿದಾರ ಶಶಿಧರ ವಿ.ಎನ್ ನರಿಮೊಗರುರವರು ಪ್ರತಿಕ್ರಿಯಿಸಿದ್ದಾರೆ.








