ಪಟ್ರಮೆ: ಒಂದೇ ದಿನ ಸ್ನೇಹಿತೆಯರಿಬ್ಬರ ಸಾವು; ಹೊಟ್ಟೆನೋವೆಂದು ಇಬ್ಬರೂ ಆಸ್ಪತ್ರೆಗೆ ದಾಖಲು | ಸಾವಿಗೆ ಕಾರಣ ನಿಗೂಢ

0

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಅಕ್ಕಪಕ್ಕದ ಮನೆಯ ಯುವತಿಯರಿಬ್ಬರು ತೀವ್ರ ಹೊಟ್ಟೆನೋವಿನಿಂದ ಬಳಲಿ ಚಿಕಿತ್ಸೆಗೆ ಸ್ಪಂದಿಸದೆ ಒಂದೇ ದಿನ ಮೃತಪಟ್ಟ ಘಟನೆ ಎ.6ರಂದು ನಡೆದಿದೆ. ಇಬ್ಬರೂ ಸ್ನೇಹಿತೆಯರಾಗಿದ್ದರು.

ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದೇಗುಲಕಾಡು ನಿವಾಸಿ ಬಾಬು ಮುಗೇರ ಹಾಗೂ ಗೀತಾ ದಂಪತಿ ಪುತ್ರಿ ರಕ್ಷಿತಾ(21ವ.) ಎ.6ರಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇವರ ನೆರೆಮನೆಯಾದ ಪಟ್ರಮೆ ಗ್ರಾಮದ ಪಟ್ಟೂರು ಪುಂಡಿಕಾಯಿ ನಿವಾಸಿ ಶ್ರೀನಿವಾಸ ಆಚಾರ್ಯ ಹಾಗೂ ಪಾರ್ವತಿ ದಂಪತಿ ಪುತ್ರಿ ಲಾವಣ್ಯ(21ವ.)ರವರು ಅದೇ ದಿನ ಮಧ್ಯಾಹ್ನ ಸುರತ್ಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ಇಬ್ಬರೂ ಯುವತಿಯರು ಸ್ನೇಹಿತೆಯರಾಗಿದ್ದು ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದರು. ರಕ್ಷಿತಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಲಾವಣ್ಯ ಸಹ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದು 1 ವರ್ಷದ ಹಿಂದೆ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದರು. ಇಬ್ಬರಿಗೂ ಎ.2ರಂದು ಹೊಟ್ಟೆನೋವು ಕಾಣಿಸಿಕೊಂಡಿದ್ದು ಇಬ್ಬರೂ ತಮ್ಮ ಮನೆಯವರ ಸಹಾಯದೊಂದಿಗೆ ಕೊಕ್ಕಡ, ನೆಲ್ಯಾಡಿ, ಉಜಿರೆ, ಪುತ್ತೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಅಂತಿಮವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರ ಸಾವಿನ ಬಗ್ಗೆಯೂ ಸರಿಯದ ಕಾರಣ ತಿಳಿಯದೇ ಇರುವುದರಿಂದ ಸೂಕ್ತ ಕಾನೂನು ಕ್ರಮಕ್ಕಾಗಿ ಮನೆಯವರು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಕ್ಷಿತಾ:
ಎ.2ರಂದು ಮನೆಯಲ್ಲಿದ್ದ ರಕ್ಷಿತಾ ವಿಪರೀತ ಹೊಟ್ಟೆನೋವಿನಿಂದ ಬಳಲಿ ಹಲವು ಸಲ ವಾಂತಿ ಸಹ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಸಂಜೆ ಕೊಕ್ಕಡದ ಪಂಚಮಿ ಆರ್ಯುವೇದ ಕ್ಲಿನಿಕ್‌ಗೆ ಹೋಗಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದು, ಮರುದಿನವೂ ಚಿಕಿತ್ಸೆ ಪಡೆದು ಆರಾಮವಾಗಿದ್ದರು. ಎ.4ರಂದು ರಕ್ಷಿತಾ ತುಂಬಾ ನಿತ್ರಾಣಗೊಂಡಿದ್ದು ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ರಕ್ಷಿತಾಳ ಕಾಯಿಲೆಯ ಬಗ್ಗೆ ತಿಳಿದು ಬಾರದೇ ಇರುವುದರಿಂದ ಉಜಿರೆ ಎಸ್‌ಡಿಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಅಲ್ಲಿಗೆ ಕರೆದೊಯ್ಯಲಾಗಿತ್ತು. ಎಸ್‌ಡಿಎಮ್ ಆಸ್ಪತ್ರೆಯ ವೈದ್ಯರು ಪರಿಕ್ಷೀಸಿ ರಕ್ಷಿತಾಳಿಗೆ ಜಾಂಡೀಸ್ ಖಾಯಿಲೆ ಉಲ್ಬಣಗೊಂಡಂತೆ ಕಂಡುಬರುತ್ತಿರುವುದರಿಂದ ಕೂಡಲೇ ಮಂಗಳೂರು ಪಾಧರ್ ಮುಲ್ಲರ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರು. ಅದರಂತೆ 108 ಅಂಬುಲೆನ್ಸ್‌ನಲ್ಲಿ ಹೋಗಿ ಮಂಗಳೂರು ಪಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಎ.6ರಂದು ಬೆಳಗ್ಗಿನ ಜಾವ 1.15 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ರಕ್ಷಿತಾರವರ ತಾಯಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಕ್ಷಿತಾ ಯಾವುದೋ ಕಾಯಿಲೆ ಉಲ್ಬಣಗೊಂಡು ಅಥವಾ ವಿಷ ಸೇವಿಸಿ ಮೃತಪಟ್ಟಿರಬಹುದಾಗಿ ಎಂದು ಕಂಡು ಬಂದರೂ ಮರಣದ ಬಗ್ಗೆ ಸರಿಯಾದ ಕಾರಣ ತಿಳಿಯದೇ ಇರುವುದರಿಂದ ಮೃತದೇಹದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಮೃತ ರಕ್ಷಿತಾ ತಂದೆ, ತಾಯಿ, ಅಕ್ಕ ಹಾಗೂ ಅಣ್ಣನನ್ನು ಅಗಲಿದ್ದಾರೆ.

ಲಾವಣ್ಯ:
ಎ.2ರಂದು ರಾತ್ರಿ ಲಾವಣ್ಯಳಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಮನೆಯವರು ಎ.3ರಂದು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಬಂದಿದ್ದರು. ಎ.5ರಂದು ವಾಪಾಸು ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಬಗ್ಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಹೋದರ ತನ್ನ ಅಟೋರಿಕ್ಷಾದಲ್ಲಿ ಪುತ್ತೂರು ಹಿತಾ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಲಾವಣ್ಯಳಿಗೆ ಜ್ವರ ಮತ್ತು ಪುಡ್ ಪಾಯಿಸನ್ ಅಗಿರುವುದಲ್ಲದೆ ಯಾವುದೋ ವಿಷ ಪದಾರ್ಥ ಸೇವಿಸಿರುವ ಬಗ್ಗೆ ಶಂಸಯ ಇರುವುದಾಗಿ ತಿಳಿಸಿರುವುದರಿಂದ ಕೂಡಲೇ ಮಂಗಳೂರು ಸುರತ್ಕಲ್‌ನ ಮುಕ್ಕ ಶ್ರೀನಿವಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆಯಲ್ಲಿದ್ದ ಲಾವಣ್ಯ ಎ.6ರಂದು ಸಂಜೆ 4.15ಕ್ಕೆ ಮೃತಪಟ್ಟಿದ್ದಾರೆ. ಈ ಬಗ್ಗೆ ಲಾವಣ್ಯರ ತಾಯಿ ಪಾರ್ವತಿಯವರು ಎ.7ರಂದು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದು ಲಾವಣ್ಯ ಯಾವುದೋ ಖಾಯಿಲೆ ಉಲ್ಬಣಗೊಂಡು ಅಥಾವ ಯಾವುದೋ ವಿಷಪದಾರ್ಥ ಸೇವಿಸಿ ಮೃತಪಟ್ಟಿರಬಹುದಾಗಿ ಕಂಡು ಬರುತ್ತಿದ್ದರೂ ಮರಣದ ಬಗ್ಗೆ ಸರಿಯಾದ ಕಾರಣ ತಿಳಿಯದೇ ಇರುವುದರಿಂದ ಮೃತದೇಹದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಮೃತ ಲಾವಣ್ಯ ತಂದೆ, ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.

ಕಾರಣ ನಿಗೂಢ:
ರಕ್ಷಿತಾ ಹಾಗೂ ಲಾವಣ್ಯ ಅಕ್ಕಪಕ್ಕದ ಮನೆಯವರು. ಇಬ್ಬರ ಮನೆಯೂ ಕೂಗಳತೆ ದೂರದಲ್ಲಿದೆ. ಇಬ್ಬರೂ ಸ್ನೇಹಿತೆಯರಾಗಿದ್ದರು. ಇಬ್ಬರೂ ಒಂದೇ ದಿನ ಹೊಟ್ಟೆನೋವಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದರೂ ಚಿಕಿತ್ಸೆಗೆ ಸ್ಪಂದಿಸದೇ ಒಂದೇ ದಿನ ಮೃತಪಟ್ಟಿರುವುದೂ ಈಗ ಹಲವು ಅನುಮಾನಗಳಿಗೂ ಕಾರಣವಾಗಿದೆ. ಇಬ್ಬರೂ ಯಾವುದೋ ವಿಷಪದಾರ್ಥ ಸೇವಿಸಿ ಆತ್ಮಹತ್ಯೆಗೆ ಮುಂದಾಗಿರಬಹುದೇ ಅಥವಾ ಇನ್ನೇನಾದರೂ ಘಟನೆ ಸಂಭವಿಸಿರಬಹುದೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಇಬ್ಬರ ನಿಗೂಢ ಸಾವಿಗೆ ಕಾರಣ ಪೊಲೀಸ್ ತನಿಖೆಯಿಂದಷ್ಟೇ ತಿಳಿಯಬೇಕಿದೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here