ಬಡಗನ್ನೂರುಃ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಡುವನ್ನೂರು ಗ್ರಾಮದ ಮಾಪಲ- ಮೈಕುಳಿ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಸಂಪರ್ಕ ಕಷ್ಟಕರವಾಗಿದೆ.
ಅಗಲ ಕಿರಿದಾದ ರಸ್ತೆ: ಮಾಪಲ-ಮೈಕುಳಿ ರಸ್ತೆ ಅಗಲ ಕಿರಿದಾಗಿದ್ದು ವಾಹನ ಸಂಚಾರಕ್ಕೆ ಹಾಗೂ ಕಾಲ್ನಡಿಗೆಗೆ ಸಮಸ್ಯೆ ಉಂಟಾಗಿ ಜನರು ಕಂಗಾಲಾಗಿದ್ದಾರೆ ಈ ಭಾಗದಲ್ಲಿ ಜನರು ಅನಾರೋಗ್ಯಕ್ಕೆ ತುತ್ತಾದರೆ ದೇವರೇ ಗತಿ ಎನ್ನುತ್ತಿದ್ದಾರೆ
ಚರಂಡಿ ವ್ಯವಸ್ಥೆ ಇಲ್ಲ : ಈ ರಸ್ತೆಯು ಸುಮಾರು 5 ಕಿಮೀ ಇದ್ದು ರಸ್ತೆಗೆ ಚರಂಡಿ ವ್ಯವಸ್ಥೆ ಇಲ್ಲ. ಮಳೆಯ ಸಂದರ್ಭದಲ್ಲಿ ಸಂಪೂರ್ಣ ನೀರು ಮಾರ್ಗ ಮಧ್ಯೆ ಹರಿದು ಹೋಗುತ್ತದೆ. ಅಗಲ ಕಿರಿದಾದ ಈ ರಸ್ತೆಗೆ ಚರಂಡಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಒಂದು ವೇಳೆ ಚರಂಡಿ ವ್ಯವಸ್ಥೆ ಮಾಡಿದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಬಹುದು. ಕೆಲವೊಂದು ಕಡೆ ಗ್ರಾ.ಪಂ ವತಿಯಿಂದ ಚರಂಡಿ ವ್ಯವಸ್ಥೆ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನಾಗರಿಕರು. ರಸ್ತೆ ಸಂಪೂರ್ಣ ಇಳಿಜಾರು ಪ್ರದೇಶವಾಗಿದ್ದು ಮಳೆಗಾಲ ಸಮಯದಲ್ಲಿ ಪ್ರತಿ ವರ್ಷ ರಸ್ತೆ ಮಧ್ಯೆ ಮಳೆ ನೀರು ಹರಿದು ರಸ್ತೆ ಸಂಪೂರ್ಣ ಕೆಟ್ಟು ಹೋಗಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಈ ಭಾಗದಲ್ಲಿ ಸುಮಾರು 50 ಕ್ಕೂ ಹೆಚ್ಚು ಮನೆಗಳಿವೆ. ಅಲ್ಲದೆ ಈ ರಸ್ತೆ ಮುಖ್ಯವಾಗಿ ಎಸ್.ಟಿ. ಕಾಲನಿ ರಸ್ತೆಯೂ ಆಗಿದೆ ಈ ರಸ್ತೆ ಅಭಿವೃದ್ಧಿ ಪಡಿಸುವಂತೆ ಶಾಸಕರಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮಳೆಗಾಲ ಕಳೆದ ತಕ್ಷಣ ರಸ್ತೆ ಅಭಿವೃದ್ಧಿ ಮಾಡುವ ಭರವಸೆ ದೊರೆತಿತ್ತು. ಆದರೆ ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಕಾಮಗಾರಿ ಪ್ರಾರಂಭ ಗೊಂಡಿಲ್ಲ. ಈ ರಸ್ತೆ ದುರಸ್ತಿ ಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆಯೂ ನಡೆದಿತ್ತು. ಮುಂದೆ ಎರಡು ತಿಂಗಳಲ್ಲಿ ಮಳೆಗಾಲ ಆರಂಭವಾಗುತ್ತದೆ ಬಳಿಕ ನಮ್ಮ ಸಮಸ್ಯೆ ಬಗೆಹರಿಸುವವರು ಯಾರು. ಕೊಟ್ಟ ಮಾತಿಗೆ ತಪ್ಪಿದ್ದರಿಂದ ಮಾಪಲ- ಮೈಕುಳಿ ಭಾಗದ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವ ಬಗ್ಗೆ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.