ವರದಿ: ದಾಮೋದರ್ ದೊಂಡೋಲೆ ಮತ್ತು ಸಂತೋಷ್ ಕುಮಾರ್ ಶಾಂತಿನಗರ
ಪುತ್ತೂರು: ಜನರಿಗೆ ಒಂದೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂಬ ಖುಷಿ. ಮತ್ತೊಂದೆಡೆ ನಿಧಾನಗತಿಯಿಂದ ಸಾಗುತ್ತಿರುವ ರಸ್ತೆ ಕಾಮಗಾರಿಯಿಂದಾಗಿ ಆಗುತ್ತಿರುವ ತೊಂದರೆಯಿಂದ ಬೇಸರ. ಎರಡು ವರ್ಷದಿಂದ ಈ ಆಫ್ ರೋಡ್ ಡ್ರೈವಿಂಗ್ ಸಾಕಪ್ಪಾ ಸಾಕು ಎನ್ನುತ್ತಿರುವ ವಾಹನ ಸವಾರರು. ಇನ್ನೊಂದೆಡೆ ಈ ಕಾಮಗಾರಿ ಯಾವಾಗ ಮುಗಿಯುತ್ತದೆಯಪ್ಪಾ ಎಂಬ ಪ್ರಶ್ನೆ. ಆಗಾಗ ಯಾಕೆ ಕೆಲಸ ನಿಲ್ಲುತ್ತದೆ ಎಂಬ ಕುತೂಹಲ. ಇನ್ನಾದರೂ ವೇಗವಾಗಿ ರಸ್ತೆ ಕಾಮಗಾರಿ ನಡೆಯಲಿ ಎಂಬ ಆಗ್ರಹ. ಇದು ಪುತ್ತೂರು-ಉಪ್ಪಿನಂಗಡಿ ರಸ್ತೆ ಕಾಮಗಾರಿಯ ಕುರಿತು ಕೇಳಿ ಬರುತ್ತಿರುವ ಮಾತುಗಳು.
ಪುತ್ತೂರು-ಉಪ್ಪಿನಂಗಡಿ ಹೈವೇ ಕಾಮಗಾರಿಯಲ್ಲಿ ತಾರತಮ್ಯ-ಕೆಲವು ಮನೆಗೆ ತಡೆಗೋಡೆ ನಿರ್ಮಾಣ, ಇನ್ನು ಕೆಲವೆಡೆ ಇಲ್ಲ:
ಲೋಕೋಪಯೋಗಿ ಇಲಾಖೆಯಿಂದ ಮೇಲ್ದರ್ಜೆಗೇರಿರುವ ಪುತ್ತೂರು-ಉಪ್ಪಿನಂಗಡಿ ರಸ್ತೆ ಕಾಮಗಾರಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿದೆ. ಬೆಂಗಳೂರು ಸಹಿತ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಈ ರಸ್ತೆಯನ್ನು ಅಗಲೀಕರಣ ಮಾಡುವ ಕಾಮಗಾರಿ ಆರಂಭಿಸಿ ಹಲವು ಸಮಯ ಕಳೆದಿದೆ. ಕಾಮಗಾರಿಗಾಗಿ ಹಲವು ಅಂಗಡಿಗಳು, ಮರಗಳು ನೆಲಸಮವಾಗಿದೆ. ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುವ ರಸ್ತೆ ಕಾಮಗಾರಿ ಆರಂಭವಾದಾಗ ಜನರು ಸಂತಸ ಪಟ್ಟಿದ್ದರು. ಆದರೆ, ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿದೆ. ಇದರಿಂದಾಗಿ ಧೂಳಿನೊಂದಿಗೇ ಬದುಕು ಸಾಗಿಸಬೇಕಾದ ಅನಿವಾರ್ಯ ಸ್ಥಿತಿ ಇಲ್ಲಿದೆ. ಮಳೆಗಾಲ ಆರಂಭವಾದರೆ ಕೆಸರಿನೊಂದಿಗೆ ಜೀವನ ನಿರ್ವಹಿಸಬೇಕಾಗಿದೆ. ರಸ್ತೆ ಅಭಿವೃದ್ಧಿ ಆಗುತ್ತದೆ ಎಂದು ಸಂತಸ ಪಟ್ಟಿದ್ದ ಜನರು ಈಗ ಸಂಕಟ ಪಡುವಂತಾಗಿದೆ. ಕೋಡಿಂಬಾಡಿಯ ವಿನಾಯಕನಗರದಿಂದ ಶಾಂತಿನಗರ ಬೇರಿಕೆಯವರೆಗಿನ ರಸ್ತೆ ಕಾಮಗಾರಿ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಿಧಾನಗತಿಯ ಕಾಮಗಾರಿಯನ್ನು ವೇಗವಾಗಿ ನಡೆಸಿಕೊಡುವ ಜವಾಬ್ದಾರಿಯನ್ನು ಇಲಾಖೆ ಇನ್ನಾದರೂ ವಹಿಸಿಕೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಲ್ಲದೆ, ಈ ರಸ್ತೆಯಲ್ಲಿ ಸಾಗುವಾಗ ಅಲ್ಲಲ್ಲಿ ಕೆಲ ಮನೆಗಳಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು ಮತ್ತೆ ಕೆಲವು ಮನೆಗಳಿಗೆ ತಡೆಗೋಡೆ ನಿರ್ಮಾಣ ಮಾಡದೆ ತಾರತಮ್ಯ ನೀತಿ ಅನುಸರಿಸಿರುವುದು ಕಂಡು ಬರುತ್ತಿದೆ. ಧಾರ್ಮಿಕ ಶ್ರದ್ಧಾಕೇಂದ್ರಕ್ಕೂ ಇಲಾಖಾ ವತಿಯಿಂದ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಇತರ ಕಡೆಗಳಲ್ಲಿ ಬಡವರ ಮನೆಗಳಿಗೆ ತಡೆಗೋಡೆ ನಿರ್ಮಾಣ ಮಾಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರಿಗೆ ಮನೆ ಕುಸಿದು ಬೀಳುವ ಆತಂಕ ಉಂಟು ಮಾಡಿದೆ. ಇನ್ನು ಕೆಲವೆಡೆ ಮನೆಯ ಸಂಪರ್ಕ ರಸ್ತೆಗಳು ಕಡಿತಗೊಂಡಿದೆ.
ಮನವಿ ಮಾಡಿದರೂ ಕ್ಯಾರೇ ಎನ್ನದ ಅಧಿಕಾರಿ ವರ್ಗ : ಕಳೆದ ಮಳೆಗಾಲದಲ್ಲಿ ಈ ಭಾಗದಲ್ಲಿ ಕೆಲವು ಕಡೆ ಕುಸಿತ ಉಂಟಾಗಿತ್ತು. ಈಗ ಮತ್ತೆ ಮಳೆಗಾಲದ ಹೊಸ್ತಿಲಲ್ಲಿದ್ದರೂ ಅಧಿಕಾರಿಗಳು ಇಲ್ಲಿ ಸಂಪೂರ್ಣ ತಡೆಗೋಡೆ ನಿರ್ಮಾಣ ಮಾಡದೇ ತಾರತಮ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇಲ್ಲಿನ ಕೆಲ ನಿವಾಸಿಗಳು ಈಗಾಗಲೇ ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಸೇರಿದಂತೆ ಹಲವರಿಗೆ ತಡೆಗೋಡೆ ನಿರ್ಮಿಸಿ ಕೊಡಿ, ಬೇರೆಯವರಿಗೆ ನಿರ್ಮಿಸಿದ್ದೀರಿ ನಮಗೆ ಯಾಕೆ ಮಾಡಿ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ. ನಮಗೂ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಉತ್ತರ ಇಲ್ಲಿಯ ತನಕ ಬಂದಿಲ್ಲ. ಯಾವುದೇ ರಿಪ್ಲೈ ಕೊಡದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಭಾವಿಗಳ ಮನೆಗೆ ಮಾತ್ರವೇ ತಡೆಗೋಡೆನಾ? : ರಸ್ತೆ ಕಾಮಗಾರಿ ವೇಳೆ ತಡೆಗೋಡೆ ನಿರ್ಮಾಣವಾಗುತ್ತಿರುವುದು ನೋಡಿದರೆ ಕೆಲ ರಾಜಕಾರಣಿಗಳ ಆಪ್ತರು, ರಾಜಕಾರಣದಲ್ಲಿ ಪ್ರಭಾವಿಗಳಾಗಿರುವವರಿಗೆ ಮಾತ್ರ ವ್ಯವಸ್ಥೆ ಕಲ್ಪಿಸಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಇದನ್ನು ಅಧಿಕಾರಿಗಳಲ್ಲಿ ಈಗಾಗಲೇ ಸಂತ್ರಸ್ತರು ಪ್ರಶ್ನಿಸಿದ್ದಾರೆ.
ಒಂದು ಕಣ್ಣಿಗೆ ಸುಣ್ಣ ಒಂದಕ್ಕೆ ಬೆಣ್ಣೆ ಯಾಕೆ?
ನಮಗೆ ಮೊದಲು ಇಂಜಿನಿಯರ್ ಪ್ರಮೋದ್ ಅವರು ತಡೆಗೋಡೆ ಮಾಡಿಕೊಡ್ತೇವೆ ಅಂತ ಹೇಳಿದ್ದರು. ಆದರೆ ನಂತರ ಪುತ್ತೂರಿಗೆ ನೀರು ಹೋಗಿರುವ ಪೈಪ್ ಇದೆ ಅದಕ್ಕಾಗಿ ಮಾಡಿಕೊಡುವುದಿಲ್ಲ ಅಂತ ಹೇಳಿದ್ದಾರೆ. ಅದಕ್ಕಾಗಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರಿಗೆ ಮನವಿ ಮಾಡಿದ್ದೇವೆ, ಆದರೆ ಪ್ರಯೋಜನವಾಗಿಲ್ಲ. ಯಾವುದೇ ರಿಪ್ಲೈ ಕೂಡ ಬಂದಿಲ್ಲ. ಈ ಸಲದ ಮಳೆ ನೀರಿಗೆ ಎಲ್ಲವೂ ಕೊಚ್ಚಿಕೊಂಡು ಹೋಗುತ್ತದೆ ಅನ್ನುವ ಭಯದಲ್ಲೇ ನಾವಿದ್ದೇವೆ. ಕೆಲವೆಡೆ ಪೈಪ್ ಇದ್ದರೂ ತಡೆಗೋಡೆ ಮಾಡಿದ್ದಾರೆ. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಅನ್ನುವ ರೀತಿ ಕಾಮಗಾರಿ ಮಾಡಿದ್ದಾರೆ.
ಅಬ್ದುಲ್ ನಜೀರ್ ಶಾಂತಿನಗರ. ತಡೆಗೋಡೆ
ನಿರ್ಮಾಣವಾಗದೇ ಇರುವ ಮನೆಯವರು.
ಕಳೆದ ಬಾರಿಯೂ ಮಳೆಗಾಲದಲ್ಲಿ ಕುಸಿದಿತ್ತು-ಈಗ ಮತ್ತೆ ಭೀತಿಯಲ್ಲಿದ್ದೇವೆ
ಕಳೆದ ಮಳೆಗಾಲದಲ್ಲಿ ರಸ್ತೆ ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿದ್ದರು. ಇದರಿಂದಾಗಿ ನಮ್ಮ ಮನೆಯ ಮುಂಭಾಗ ಕುಸಿತ ಆಗಿತ್ತು. ಆದರಿಂದ ನಮ್ಮ ಮನೆಗೂ ಒಂದು ತಡೆಗೋಡೆ ಮಾಡಿಕೊಟ್ಟಿದ್ದರೆ ಒಳಿತಾಗುತ್ತಿತ್ತು. ಕರೆಂಟ್ ಕಂಬ ಕೂಡ ಅಡ್ಡವಾಗಿದೆ. ಚರಂಡಿ ವ್ಯವಸ್ಥೆಯೂ ಇಲ್ಲ, ಅದನ್ನು ಮಾಡದೇ ಇದ್ದರೆ ನಾವು ಮಳೆಗಾಲದಲ್ಲಿ ನಡೆದುಕೊಂಡು ಹೋಗಲು ಹರಸಾಹಸ ಪಡಬೇಕಾಗಬಹುದು. ನಾವು ಯಾರಿಗೂ ಅರ್ಜಿ ಕೊಟ್ಟಿಲ್ಲ. ತಡೆಗೋಡೆ ಮಾಡಿ ಕೊಡ್ತಾರೆ ಅಂತ ನಮಗೂ ತಿಳಿದಿರಲಿಲ್ಲ.
ಉಷಾ ಆಳ್ವ ವಿನಾಯಕನಗರ. ತಡೆಗೋಡೆ ನಿರ್ಮಾಣವಾಗದೇ ಇರುವ ಮನೆಯವರು.
ಅರ್ಜಿ ಬಂದಿದೆ-ಗ್ರ್ಯಾಂಟ್ ಯಾವುದೂ ಆಗಿಲ್ಲ
ಪುತ್ತೂರು-ಉಪ್ಪಿನಂಗಡಿ ರಸ್ತೆ ಕಾಮಗಾರಿ ಒಟ್ಟು 12 ಕೋಟಿಯ ಕಾಮಗಾರಿ. ಕೆಮ್ಮಾಯಿಯಿಂದ ಸೇಡಿಯಾಪು ಜಂಕ್ಷನ್ ವರೆಗೆ ಆರಂಭದಲ್ಲಿ ಆಗಿತ್ತು. ಈಗ ಕೋಡಿಂಬಾಡಿಯಿಂದ 1.6 ಕಿಲೋಮೀಟರ್ ಶಾಂತಿನಗರದವರೆಗೆ ಆಗುತ್ತಿದೆ. ಮೊದಲಿಗೆ ದ್ವಿಪಥದ ಪ್ರಪೋಸಲ್ ಇತ್ತು. ನಂತರ ಚತುಷ್ಪಥದ ಯೋಜನೆ ಆಯಿತು. ಬೆಳ್ಳಿಪ್ಪಾಡಿ ಕ್ರಾಸ್ ಬಳಿಯ ರೈ ಎಸ್ಟೇಟಿನಲ್ಲಿ ಅಶೋಕ್ ಕುಮಾರ್ ರೈಯವರು ತಮ್ಮ ಮನೆಯ ಮುಂದೆ ಅವರ ಸ್ವಂತ ಖರ್ಚನಿಂದ ವಾಲ್ ಮಾಡಿಸುತ್ತಿದ್ದಾರೆ. ಇಲ್ಲಿನ ತಡೆಗೋಡೆ ನಿರ್ಮಾಣಕ್ಕೆ ಸರಕಾರ ಹಣ ನೀಡಿಲ್ಲ. ಅಶೋಕ್ ರೈಯವರೇ ಅದರ ಖರ್ಚು ಭರಿಸುತ್ತಿದ್ದಾರೆ. ಅಲ್ಲಿ ಪೈಪ್ ಲೈನ್ ಪ್ರಾಬ್ಲಂ ಆಗುತ್ತಿದೆ. ಶಾಂತಿನಗರದಲ್ಲಿ ಕೆಲವು ಕಡೆ ತಡೆಗೋಡೆ ನಾವು ಮಾಡಿದ್ದೇವೆ. ಇನ್ನೂ ಕೆಲವರ ಡಿಮ್ಯಾಂಡ್ ಇದೆ. ಅದರ ಬಗ್ಗೆ ಪ್ರಪೋಸಲ್ ಕೇಳ್ತಿದ್ದೇವೆ. ಗ್ರ್ಯಾಂಟ್ ಯಾವುದು ಅಂತ ಆಗಿಲ್ಲ. ಕೋಡಿಂಬಾಡಿ ವಿನಾಯಕನಗರ ಮಸೀದಿ ಪಕ್ಕದ ತಡೆಗೋಡೆಯನ್ನು ನಾವೇ ಮಾಡಿದ್ದೇವೆ. ಕೆಲವರು ಈಗಾಗ್ಲೇ ಅರ್ಜಿ ಕೊಟ್ಟಿದ್ದಾರೆ. ತಡೆಗೋಡೆ ಆಗಬೇಕು ಅಂತ ಕೇಳಿದ್ದಾರೆ. ಕೆಲವು ಮೂರ್ನಾಲ್ಕು ಮನೆಯವರಿಗೆ ಸಂಪರ್ಕ ರಸ್ತೆಯೂ ಇಲ್ಲ. ಶಾಂತಿನಗರದಲ್ಲಿ ಕೆಲವು ಕಡೆ ತಡೆಗೋಡೆ ನಿರ್ಮಿಸಿ ಕೊಡತ್ತೇವೆ.
ಪ್ರಮೋದ್ ಕುಮಾರ್, ಇಂಜಿನಿಯರ್ ಪಿಡಬ್ಲ್ಯುಡಿ.
ಮಳೆ ಬಂದರೆ ಮನೆ ಬೀಳುವ ಆತಂಕ ಇದೆ
ಪುತ್ತೂರು ಉಪ್ಪಿನಂಗಡಿ ರಸ್ತೆ ಕಾಮಗಾರಿ ಕಳಪೆಯಾಗಿದೆ. ಬೇರಿಕೆಯಿಂದ ಕೋಡಿಂಬಾಡಿಯವರೆಗೆ ಕಾಮಗಾರಿ ಚೆನ್ನಾಗಿಲ್ಲ, ಹಲವು ಮನೆಗಳಿಗೆ ತಡೆಗೋಡೆ ಮಾಡಿಲ್ಲ. ಕೆಲವರಿಗೆ ತಡೆಗೋಡೆ ಮಾಡಿದ್ದಾರೆ. ಕೆಲವರಿಗೆ ಇಲ್ಲ. ನಾವು ಇಲ್ಲಿನ ಮತದಾರರು ಹೌದೋ ಅಲ್ಲವೋ ಅನ್ನುವ ಅನುಮಾನ ಬರುತ್ತಿದೆ. ಪಂಚಾಯತ್ ಗೆ ಹಲವು ಬಾರಿ ಮನವಿ ಕೊಟ್ಟಿದ್ದೇವೆ, ಮೀಟಿಂಗ್ ನಲ್ಲಿ ಹೇಳಿದ್ದೇವೆ. ಪಂಚಾಯತ್ ಅಧ್ಯಕ್ಷರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಇದ್ದವರಿಗೆ ರೋಡ್ ಮಾಡಿ ಕೊಟ್ಟಿದ್ದಾರೆ, ಮೋರಿ ಹಾಕಿ ಕೊಟ್ಟಿದ್ದಾರೆ. ಆದರೆ ಬಡವರಿಗೆ ಏನೂ ಆಗಿಲ್ಲ. ಮಳೆಗಾಲದ ಮುಂಚೆ ತಡೆಗೋಡೆ ಆಗಬೇಕು. ರಸ್ತೆ ಅಗಲೀಕರಣ ಆಗುವಾಗಲೇ ನಮಗೆ ತಡೆಗೋಡೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಇಂಜಿನಿಯರ್ ಗೆ ಕರೆ ಮಾಡಿದಾಗ ಫಂಡ್ ಇಲ್ಲ ಅಂತ ಹೇಳುತ್ತಿದ್ದರು. ಮನೆಗಳು ಬೀಳುವ ಹಂತದಲ್ಲಿದೆ, ಆದ್ದರಿಂದ ಆದಷ್ಟು ಬೇಗ ತಡೆಗೋಡೆ ನಿರ್ಮಿಸಿಕೊಡಬೇಕಾಗಿ ವಿನಂತಿಸುತ್ತೇವೆ.
ಕಿಶೋರ್ ಕುಮಾರ್ ಜೋಗಿ ತಡೆಗೋಡೆ ಇಲ್ಲದ ಸಂತ್ರಸ್ತರು.