ದೊಡ್ಡಡ್ಕ ಶ್ರೀಮಹಾಲಕ್ಷ್ಮೀ ಭಜನಾ ಮಂದಿರದ 30ನೇ ವಾರ್ಷಿಕೋತ್ಸವ, ಧಾರ್ಮಿಕ ಸಭೆ

0

ಪುತ್ತೂರು:ಆರ್ಯಾಪು ಗ್ರಾಮದ ದೊಡ್ಡಡ್ಕ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರದ 30ನೇ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಸಭೆಯು ಎ.7ರಂದು ನೆರವೇರಿತು.
ಬೆಳಿಗ್ಗೆ ಗಣಪತಿಹೋಮ, ನಂತರ ಮಿತ್ತೂರು ಶ್ರೀ ತಿರುಮಲೇಶ್ವರ ಭಟ್‌ರವರ ನೇತೃತ್ವದಲ್ಲಿ ಸಾರ್ವಜನಿಕ ಮಹಾಲಕ್ಷ್ಮೀ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಂಜೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್‌ನ ಆಡಳಿತ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ಮಾತನಾಡಿ, ದೇವರ ಪ್ರಾರ್ಥನೆಯಲ್ಲಿ ಭಕ್ತಿಯಿರಬೇಕು. ಹೋರಾಟವಿರಬಾರದು. ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಹೊಗಬೇಕು. ಕಲಿಯುಗದಲ್ಲಿ ಭಜನೆಗೆ ಮಹತ್ವವಿದೆ. ಭಜನೆಯಲ್ಲಿ ವೈದ್ಯಕೀಯ ಗುರುತ್ವವಿದೆ. ನಿರಂತರಾಗಿ ಭಜನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಶರೀರಕ್ಕೆ ಸಾಕಷ್ಟು ಪ್ರಯೋಜನಗಳಿವೆ. ನಮ್ಮೊಳಗಿನ ಬಾಂಧವ್ಯ ವೃದ್ದಿಯಾಗಲು ಸಾರ್ವಜನಿಕವಾಗಿ ಕಾರ್ಯಕ್ರಮ ಅಯೋಜಿಸಲಾಗುತ್ತಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು. ಮಹಾಲಕ್ಷ್ಮೀ ಭಜನಾ ಮಂದಿರವು ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಮೂಲಕ ಗ್ರಾಮಿಣ ಪ್ರದೇಶದಲ್ಲಿ ಸಮಾಜಕಟ್ಟುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ನರಿಮೊಗರು ಪ್ರಸಾದಿನಿ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾತನಾಡಿ, ಮನುಷ್ಯರ ಮನಸ್ಸನ್ನು ಸ್ಥಿರಗೊಳಿಸಲು ಶ್ರದ್ಧಾ ಕೇಂದ್ರಗಳು ಆವಶ್ಯಕ. ನಿರಂತರವಾಗಿ ದೇವರ ನಾಮಸ್ಮರಣೆ, ಭಜನೆಯಲ್ಲಿ ತೊಡಗಿಸಿಕೊಂಡಾಗ ಮನಸ್ಸು ಸ್ಥಿರಗೊಳ್ಳುತ್ತದೆ. ಶ್ರದ್ಧೆ, ಭಕ್ತಿಯಿಂದ ದೇವರ ನಾಮಸ್ಮರಣೆ ಅನುಷ್ಠಾನ ಮಾಡಿದಾಗ ಪ್ರತಿಫಲ ದೊರೆಯಲು ಸಾಧ್ಯ. ಭಗವಂತನ ಶಕ್ತಿ ಬೌಧಿಕ ತರ್ಕಗಳನ್ನು ಮೀರಿನಿಂತಿದೆ. ದೇವರು ಭಕ್ತನ ನಿಯಮ ಮೀರುವುದಿಲ್ಲ. ಭಕ್ತಿಯಿಂದ ಮನಸ್ಸು ಮೃದುವಾಗಬೇಕು. ವಿರೋಧಿಗಳ ಮನಸ್ಸನ್ನು ಬದಲಾಯಿಸುವಂತಿರಬೇಕು. ವಿರೋಧವು ಸ್ನೇಹವಾಗಿ ಬದಲಾಗಬೇಕು. ಆಗ ಸತ್ಯದ ಅರಿವಿನ ಅನುಭವವಾಗುತ್ತದೆ ಎಂದರು.

ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಲ್ನಾಡು ವಯಲದ ಅಧ್ಯಕ್ಷರಾಗಿರುವ ಸತೀಶ್ ಗೌಡ ಒಳಗುಡ್ಡೆ ಮಾತನಾಡಿ, ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಅಧಿಕಾರಕ್ಕಾಗಿ ಹೋರಾಟ ಮಾಡುವುದು ಸಮಂಜಸವಲ್ಲ. ಅಧಿಕಾರಕ್ಕಾಗಿ ಹೋರಾಟ ಮಾಡಿದರೆ ಅದು ಫಲಿಸುವುದಿಲ್ಲ. ಧಾರ್ಮಿಕ ಕೇಂದ್ರ ತಕರಾರು ಇಲ್ಲದೆ ಉತ್ತಮ ರೀತಿಯಲ್ಲಿ ಮೂಡಿಬರಬೇಕು. ಭಜನಾ ಮಂದಿರ, ದೇವಸ್ಥಾನ, ದೈವಸ್ಥಾನ ಕಾರ್ಯಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯರ ಸದಸ್ಯರು ಶ್ರದ್ಧೆಯಿಂದ ಸೇವೆ ಸಲ್ಲಿಸುವ ಮೂಲ ಸಹಕಾರ ನೀಡುತ್ತಿದ್ದಾರೆ ಎಂದರು.

ನಿಕಟಪೂರ್ವ ಅಧ್ಯಕ್ಷ ಜಗದೀಶ್ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸತತ 29 ವರ್ಷಗಳಿಂದ ಶ್ರದ್ಧಾ ಭಕ್ತಿಯಿಂದ ಸೇವಾ ಕಾರ್ಯಗಳು ನಡೆಯುತ್ತಾ ಬರುತ್ತಿದೆ. ಮಂದಿರವು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯ ಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರೂ ಮಂದಿರ ಅಡಿ ಸ್ಥಳದ ಸಮಸ್ಯೆಯಿದೆ ಎಂದರು.
ಪ್ರಮಣ್ಯ ಪಾಲೆಚ್ಚಾರು ಪ್ರಾರ್ಥಿಸಿದರು. ಭಜನಾ ಮಂದಿರದ ಅಧ್ಯಕ್ಷ ಕೊರಗಪ್ಪ ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ನಾರಾಯಣ ನಾಯ್ಕ ವರದಿ ವಾಚಿಸಿದರು. ಮಹಾಲಕ್ಷ್ಮೀ ಸೇವಾ ಸಮಿತಿ ಸದಸ್ಯರಾದ ಸೇಸಪ್ಪ ನಾಯ್ಕ, ಸುಬ್ರಹ್ಮಣ್ಯ ಬಲ್ಯಾಯ, ಲೋಕೇಶ್ ಬಲ್ಯಾಯ, ಚೆನ್ನಕೇಶವ ಆಚಾರ್ಯ ಅತಿಥಿಗಳನ್ನು ಶಾಲು ಹೊದೆಸಿ ಹೂ ನೀಡಿ ಸ್ವಾಗತಿಸಿದರು. ಶಿಕ್ಷಕ ಶಶಿಧರ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ವೆಂಕಟಕೃಷ್ಣ ಭಟ್ ಪಾಲೆಚ್ಚಾರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆದು ನಂತರ ಹನುಮಗಿರಿ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ `ಶುಕ್ರ ನಂದನ’ ಎಂಬ ಯಕ್ಷಗಾನ ಬಯಲಾಟ ನಡೆಯಿತು. ನೂರಾರು ಮಂದಿ ಭಕ್ತಾದಿಗಳು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here