ಸುಳ್ಯ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿಚಾರದಲ್ಲಿನ ಗೊಂದಲ; ನಂದ ಕುಮಾರ್‌ರವರಿಗೆ ಬಿ ಫಾರ್ಮ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧಾರ – ನಿಂತಿಕಲ್ಲಿನಲ್ಲಿ ನಂದಕುಮಾರ್ ಅಭಿಮಾನಿ ಬಳಗದ ಸಮಾವೇಶ

0

  • ವಾಸ್ತವವರಿತು ಅಭ್ಯರ್ಥಿ ಆಯ್ಕೆಯನ್ನು ಪುನರ್ ಪರಿಶೀಲನೆ ಮಾಡಬೇಕು-ಬಾಲಕೃಷ್ಣ ಬಳ್ಳೇರಿ
  • ಕೃಷ್ಣಪ್ಪರು 100ಕ್ಕೆ ನೂರು ಸೋಲುವ ಅಭ್ಯರ್ಥಿ-ಪ್ರವೀಣ್ ಕುಮಾರ್ ಕೆಡೆಂಜಿಗುತ್ತು
  • ಜನರೊಂದಿಗೆ ಬೆರೆಯುವ ವ್ಯಕ್ತಿಗೆ ಅವಕಾಶ ಸಿಗಬೇಕು-ಅಶೋಕ್ ನೆಕ್ರಾಜೆ
  • ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ನಂದಕುಮಾರ್‌ರಿಗೆ ಬೆಂಬಲ ನೀಡಬೇಕು- ಉಷಾಜಾಯ್
  • ನಂದಕುಮಾರ್‌ಗೆ ಬಿ ಫಾರ್ಮ್‌ಗಾಗಿ ಪೂರ್ಣ ಪ್ರಯತ್ನ ಮಾಡೋಣ – ಗೋಕುಲದಾಸ್
  • ಕಾರ್ಯಕರ್ತರ ಭಾವನೆಗೆ ಬೆಲೆ ಕೊಡದಿದ್ದರೆ ಕಾಂಗ್ರೆಸ್ ಅವಕಾಶ ಕಳೆದುಕೊಳ್ಳಲಿದೆ- ಆಶಾ ಲಕ್ಷ್ಮಣ್
  • ಸುಳ್ಯದಲ್ಲಿ ಬದಲಾವಣೆ ಆಗಬೇಕಾದರೆ ನಂದಕುಮಾರ್‌ರಿಗೆ ಬಿ ಫಾರ್ಮ್ ಸಿಗಲೇಬೇಕು-ಲೋಲಜಾಕ್ಷ
  • ನಂದಕುಮಾರ್‌ಗೆ ಬಿ ಫಾರ್ಮ್ ಸಿಗುವ ತನಕ ಹೋರಾಟ ಅನಿವಾರ್ಯ-ಗಣೇಶ್ ಕೈಕುರೆ
  • ಕಾರ್ಯಕರ್ತರ ಆಯ್ಕೆಯ ವ್ಯಕ್ತಿಯನ್ನೇ ನಾಯಕರು ಆಯ್ಕೆ ಮಾಡಬೇಕು-ಶಿವಣ್ಣ ಗೌಡ ಇಡ್ಯಾಡಿ
  • ಕಾರ್ಯಕರ್ತರ ಅಭಿಪ್ರಾಯ ಮನ್ನಿಸಿ ನಂದಕುಮಾರರಿಗೆ ಅವಕಾಶ ನೀಡಲೇಬೇಕು-ಅಬೂಬಕ್ಕರ್ ಅರಫ
  • ಕಾರ್ಯಕರ್ತರ ನಿರ್ಲಕ್ಷ್ಯ ಬೇಡ, ಕಾಲಚಕ್ರ ತಿರುಗುತ್ತಲೇ ಇರುತ್ತದೆ- ಬಾಲಕೃಷ್ಣ ಮರೀಲ್

ಕಾಣಿಯೂರು:ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಈಗಾಗಲೇ ಸುಳ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೃಷ್ಣಪ್ಪ ಅವರ ಘೋಷಣೆಯಾಗಿದ್ದರೂ ಇವರ ಆಯ್ಕೆಗೆ ಪಕ್ಷದ ಕಾರ್ಯಕರ್ತರಿಂದ ಅಸಮಾಧಾನ ವ್ಯಕ್ತವಾಗಿದ್ದು ಹೆಚ್.ಎಂ.ನಂದ ಕುಮಾರ್ ಅವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಏ.9ರಂದು ನಂದ ಕುಮಾರ್ ಅಭಿಮಾನಿಗಳ ಸಮಾವೇಶ ನಡೆದಿದೆ.ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಕೃಷ್ಣಪ್ಪ ಅವರನ್ನು ಒಂದು ವಾರದಲ್ಲಿ ಬದಲಾವಣೆ ಮಾಡಿ ಹೆಚ್.ಎಂ.ನಂದಕುಮಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿ ಬಿ ಫಾರ್ಮ್ ನೀಡಬೇಕು. ಇಲ್ಲದಿದ್ದರೆ ಕಾರ್ಯಕರ್ತರ ಸ್ವಾಭಿಮಾನದ ಅಭ್ಯರ್ಥಿಯಾಗಿ ನಂದಕುಮಾರ್ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸಲು ಸಮಾವೇಶದಲ್ಲಿ ನಿರ್ಧರಿಸಲಾಯಿತು.

ನಂದಕುಮಾರ್ ಅಭಿಮಾನಿ ಬಳಗದ ಸಂಚಾಲಕ ಹಾಗು ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ ಸಮಾವೇಶದ ನಿರ್ಧಾರವನ್ನು ಪ್ರಕಟಿಸಿದರು. ಒಂದು ವಾರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿ ನಂದಕುಮಾರ್ ಅವರಿಗೆ ಬಿ ಫಾರ್ಮ್ ನೀಡಬೇಕು.ತಪ್ಪಿದಲ್ಲಿ ನಂದಕುಮಾರ್ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸುವುದು ಅಥವಾ ಚುನಾವಣೆಯಲ್ಲಿ ತಟಸ್ಥ ನಿಲುವು ತಳೆಯುವ ನಿರ್ಧಾರ ಕೈಗೊಳ್ಳುವ ಬಗ್ಗೆ ಬಳ್ಳೇರಿಯವರು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ, ನಂದಕುಮಾರ್ ಅವರಿಗೆ ಪಕ್ಷ ಅವಕಾಶ ನೀಡದೇ ಇದ್ದಲ್ಲಿ ಅವರು ಪಕ್ಷೇತರರಾಗಿ ಸ್ಪರ್ಧಿಸಬೇಕು ಎಂದು ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರು ಒಕ್ಕೊರಳಿನಿಂದ ಆಗ್ರಹಿಸಿದರು. ಈ ಹಿನ್ನಲೆಯಲ್ಲಿ, ನಂದ ಕುಮಾರ್ ಅವರಿಗೆ ಕಾಂಗ್ರೆಸ್ ಬಿ ಫಾರ್ಮ್ ಸಿಗದೇ ಇದ್ದರೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಅಭಿಪ್ರಾಯದಂತೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಳ್ಳೇರಿ ಅವರು ಹೇಳಿದರು.

ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್‌ನ ಲಕ್ಷ್ಮೀ ವೆಂಕಟ್ರಮಣ ಸಭಾಭವನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಬಾಲಕೃಷ್ಣ ಬಳ್ಳೇರಿಯವರು, ವಾಸ್ತವ ಸಂಗತಿಯನ್ನು ಕಾಂಗ್ರೆಸ್ ನೇತೃತ್ವ ಅರಿತುಕೊಳ್ಳಬೇಕು, ಅಭ್ಯರ್ಥಿ ಆಯ್ಕೆಯನ್ನು ಪುನರ್ ಪರಿಶೀಲನೆ ಮಾಡಬೇಕು. ನಂದಕುಮಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿ ಎನ್ನುವುದೊಂದೇ ನಮ್ಮ ಬೇಡಿಕೆ ಎಂದು ಹೇಳಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮಾತನಾಡಿ, ಕಾಂಗ್ರೆಸ್‌ನಲ್ಲಿಯ ನಿಷ್ಮ್ರಿಯ ರಾಜಕೀಯಕ್ಕೆ ಮುಕ್ತಿ ಆಗಬೇಕು ಎಂಬ ಉದ್ದೇಶದಿಂದ, ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಬೇಕು ಎಂಬ ನೆಲೆಯಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಇದುವರೆಗೆ ಸುಳ್ಯದಲ್ಲಿ ಸ್ಥಾನವನ್ನು ಕಳೆದುಕೊಂಡದ್ದು ಕಾಂಗ್ರೆಸ್‌ನೊಳಗಿರುವ ಗೆದ್ದಲುಗಳಿಂದ. ಕೃಷ್ಣಪ್ಪರು 100ಕ್ಕೆ ನೂರು ಸೋಲುವ ಅಭ್ಯರ್ಥಿ. ಸುಳ್ಯದಲ್ಲಿ ಬಿಜೆಪಿಯ ದುರಾಡಳಿತದಿಂದ ಸಮಾಜಕ್ಕೆ ಮುಕ್ತಿ ಕೊಡಬೇಕಾದರೆ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಗೆದ್ದು ಬರಬೇಕು.ಅದಕ್ಕಾಗಿ ನಂದಕುಮಾರ್ ಅವರಿಗೆ ಬಿ ಫಾರ್ಮ್ ನೀಡಬೇಕು. ಎಂದರಲ್ಲದೆ,ಕಾಂಗ್ರೆಸ್‌ನ ಒಳ ರಾಜಕೀಯ ಮತ್ತು ಸ್ವಾರ್ಥದಿಂದಾಗಿ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದರು.

ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಶೋಕ್ ನೆಕ್ರಾಜೆ ಮಾತನಾಡಿ, ಇಂದು ಕಾರ್ಯಕರ್ತರು ಬಲಿ ಪಶುಗಳಾಗಿದ್ದಾರೆ. ತನ್ನ ಸ್ವಂತ ಖರ್ಚಿನಿಂದ ಸಮಾಜಕ್ಕೆ ಸೇವೆ ಮಾಡಿದ ನಂದಕುಮಾರ್ ಅವರೇ ಸೂಕ್ತ ಅಭ್ಯರ್ಥಿಯಾಗಿದ್ದು ಈ ಭಾಗದ ಎಲ್ಲಾ ಕಾರ್ಯಕರ್ತರು ನಂದಕುಮಾರ್‌ರಿಗೆ ಬೆನ್ನೆಲುಬಾಗಿ ನಿಲ್ಲೋಣ.ಜನರೊಂದಿಗೆ ಬೆರೆಯುವ ವ್ಯಕ್ತಿಗೆ ಅವಕಾಶ ಸಿಗಬೇಕು ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಉಷಾ ಜಾಯ್ ಮಾತನಾಡಿ, ಜನರ ಸಮಸ್ಯೆಗಳಿಗೆ, ನೋವುಗಳಿಗೆ ಸ್ಪಂದಿಸುತ್ತಿರುವವರು ನಂದಕುಮಾರ್ ಅಂತಹ ವ್ಯಕ್ತಿಗೆ ನಾವು ಬೆಂಬಲ ನೀಡಬೇಕು ಎಂದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗೋಕುಲದಾಸ್ ಮಾತನಾಡಿ ಸುಳ್ಯದಲ್ಲಿ ಬಿಜೆಪಿಯವರ ಕೈಯಲ್ಲಿ ಇಡೀ ವಿಧಾನಸಭಾ ಕ್ಷೇತ್ರದ ಪಟ್ಟಿ ಇದೆ. ಕಾಂಗ್ರೆಸ್ ಜೊತೆ ಇಲ್ಲ. ನನಗೆ ಅನೇಕ ಮಂದಿ ಬಿಜೆಪಿ ಕಾರ್ಯಕರ್ತರು ಸ್ನೇಹಿತರಿದ್ದಾರೆ. ಅವರ ಲೆಕ್ಕಾಚಾರದ ಪ್ರಕಾರ ಸುಳ್ಯ ಕ್ಷೇತ್ರದಲ್ಲಿ ನಂದ ಕುಮಾರರಿಗೆ ಸೀಟು ಸಿಕ್ಕಿದ್ದೇ ಆದರೆ ನಂದ ಕುಮಾರ್ 15 ಸಾವಿರ ಮತಗಳ ಅಂತರದಲ್ಲಿ ಜಯಗಳಿಸುತ್ತಾರೆ. ಅದೇ ಕೃಷ್ಣಪ್ಪರೇ ಅಂತಿಮ ಅಭ್ಯರ್ಥಿಯಾದರೆ ಅಂಗಾರರು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಅದಕ್ಕಾಗಿ ಇನ್ನೂ ಬಿಜೆಪಿಯ ಅಭ್ಯರ್ಥಿಯ ನಿಗದಿಯಾಗಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಯೋಗ್ಯ ವ್ಯಕ್ತಿ ನಂದಕುಮಾರ್‌ಗೆ ಬಿ ಫಾರ್ಮ್ ಸಿಗುವಲ್ಲಿ ಪೂರ್ಣ ಪ್ರಯತ್ನ ಮಾಡೋಣ ಎಂದರು.

ತಾ.ಪಂ.ಮಾಜಿ ಸದಸ್ಯೆ ಆಶಾ ಲಕ್ಷ್ಮಣ್ ಮಾತನಾಡಿ,ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಎಂ.ಎಲ್.ಎ. ಇಲ್ಲದೆ ನಾವೆಲ್ಲಾ ಎಷ್ಟು ಕಷ್ಟ ಪಟ್ಟಿದ್ದೇವೆ ಎಂದು ನಮಗೆಲ್ಲಾ ಗೊತ್ತು. ಇದೊಂದು ಸುವರ್ಣಾವಕಾಶ. ನಂದಕುಮಾರ್‌ಗೆ ಸೀಟು ಸಿಗುವಲ್ಲಿ ಪ್ರಯತ್ನಿಸಿ ಯಶಸ್ವಿಯಾಗಬೇಕು.ಮೊನ್ನೆ ಸುಳ್ಯದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ನಂದ ಕುಮಾರ್ ಅವರನ್ನು ಕರೆದಿಲ್ಲ ಯಾಕೆ ಎಂದು ಪ್ರಶ್ನಿಸಿದರಲ್ಲದೆ, ಹೋರಾಟ ಮಾಡಿಯಾದರೂ ನಮ್ಮ ಕೆಲಸ ಸಾಧಿಸಬೇಕು. ಪ್ರಜಾಪ್ರಭುತ್ವಕ್ಕೆ ಈಗ ಬೆಲೆ ಇಲ್ಲ. ಕಾರ್ಯಕರ್ತರು ಸೂಚಿಸುವ ವ್ಯಕ್ತಿಯನ್ನು ಆಯ್ಕೆಮಾಡದೆ ನಾಯಕರು ಕುಳಿತುಕೊಂಡು ಆಯ್ಕೆ ಮಾಡಿರುವುದು ಸರಿಯಲ್ಲ.ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿ ನಂದಕುಮಾರ್ ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಮಾತನಾಡಿ, ಕರ್ನಾಟಕದಲ್ಲಿ ಈಗ ಬದಲಾವಣೆ ಗಾಳಿ ಬೀಸಿದೆ.ಅದಕ್ಕಾಗಿ ಸುಳ್ಯದಲ್ಲೂ ಬದಲಾವಣೆ ಆಗಬೇಕು. ರೈತರ ಬದುಕು ನಮಗೆ ಮುಖ್ಯ. ಡೆಲ್ಲಿಯಲ್ಲಿ ರೈತರು ಪ್ರತಿಭಟನೆ ಮಾಡುವಾಗ ಏಳು ನೂರು ಜನರು ಸತ್ತದ್ದು ಮೋದಿಯವರಿಗೆ ತಿಳಿಯಲೇ ಇಲ್ಲ. ಸುಳ್ಯದಲ್ಲಿ ಬದಲಾವಣೆ ಆಗಬೇಕಾದರೆ ನಂದಕುಮಾರರಿಗೆ ಬಿ ಫಾರ್ಮ್ ಸಿಗಲೇಬೇಕು. ರೈತ ಸಂಘಕ್ಕೆ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ.ಆದರೆ ಸುಳ್ಯದಲ್ಲಿ ಬದಲಾವಣೆ ಆಗಬೇಕು ಎಂಬ ಉದ್ದೇಶದಿಂದ ನಂದಕುಮಾರ್ ಚುನಾವಣಾ ಕಣದಲ್ಲಿ ಇದ್ದರೆ ಅವರನ್ನು ರೈತ ಸಂಘ ಬೆಂಬಲಿಸಲಿದೆ ಎಂದರು.

ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಣೇಶ್ ಕೈಕುರೆ ಮಾತನಾಡಿ, ಕಾಂಗ್ರೆಸ್ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ಕಾಂಗ್ರೆಸ್‌ನಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ದುರದೃಷ್ಟಕರ. ನಾವು ಆಯ್ಕೆ ಮಾಡಿದ ನಾಯಕರು ಏಳು ಸುತ್ತಿನ ಕೋಟೆಯಲ್ಲಿ ಕೂತಿದ್ದಾರೆ. ನಾವು ಹೋರಾಟದ ಮೂಲಕ ಕೋಟೆಯನ್ನು ಭೇದಿಸುವ. ನಂದಕುಮಾರರಿಗೆ ಬಿ ಫಾರ್ಮ್ ಸಿಗುವ ತನಕ ಹೋರಾಟ ನಿಲ್ಲಿಸುವುದು ಬೇಡ. ಮಂಗಳೂರಿಗೆ ಹೋದಾಗ ನಮಗೆ ನಾಯಕರು ಸುಳ್ಳು ಹೇಳಿ ನಮ್ಮನ್ನು ವಂಚಿಸಿದ್ದಾರೆ. ಆದ್ದರಿಂದ ಹೋರಾಟ ಅನಿವಾರ್ಯ. ನಮಗೆ ನ್ಯಾಯ ಸಿಗುವ ತನಕ ಹೋರಾಟ ಮಾಡುತ್ತೇವೆ ಎಂದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ ಮಾತನಾಡಿ, ಸುಳ್ಯ ಕ್ಷೇತ್ರದಲ್ಲಿ ನಂದಕುಮಾರ್ ಗೆಲ್ಲುವ ಅಭ್ಯರ್ಥಿ. ಆದರೆ ಹೈಕಮಾಂಡ್ ಮೇಲೆ ಕುಳಿತು ಕೃಷ್ಣಪ್ಪರನ್ನು ನಿಲ್ಲಿಸಿ ಕಾಂಗ್ರೆಸ್‌ನ್ನು ಸೋಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ನಮಗೆ ಬದಲಾವಣೆ ಬೇಕು.ಕಾಂಗ್ರೆಸ್ ಎಂಎಲ್‌ಎ ಇಲ್ಲದೆ ಸುಳ್ಯ ಕ್ಷೇತ್ರ ಬಡವಾಗಿದೆ.ಈಗ ಎಂ.ಎಲ್.ಎ ಆಗುವ ಅವಕಾಶ ಲಭಿಸಿದೆ. ಕಾರ್ಯಕರ್ತರು ಆಯ್ಕೆಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದರಲ್ಲದೆ, ಒಳಗಿಂದ ಒಳಗೆ ಹಣ ಪಡೆದುಕೊಂಡು ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿದರು. ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬೂಬಕ್ಕರ್ ಅರಫ ಮಾತನಾಡಿ, ನಂದಕುಮಾರರಿಗೆ ಕಾರ್ಯಕರ್ತರ ಬೆಂಬಲ ಇದೆ. ಕಾರ್ಯಕರ್ತರ ಅಭಿಪ್ರಾಯವನ್ನು ಮನ್ನಿಸಿ ಪಕ್ಷದ ನಾಯಕರು ನಂದಕುಮಾರರಿಗೆ ಅವಕಾಶ ನೀಡಲೇಬೇಕು ಎಂದರು. ಹಿರಿಯರಾದ ಬಾಲಕೃಷ್ಣ ಮರೀಲ್ ಮಾತನಾಡಿ,
ನಾನು ಅಸೌಖ್ಯದಿಂದ ಮಲಗಿರುವ ಸಂದರ್ಭದಲ್ಲಿ ಮನೆಗೆ ಬಂದು ಧನಸಹಾಯ ನೀಡಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದವರು ನಂದಕುಮಾರ್. ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ ಕಾಲಚಕ್ರ ತಿರುಗುತ್ತಲೇ ಇರುತ್ತದೆ.ಈಗ ನೀವು ಮೇಲೆ ಇದ್ದೀರಿ. ಕಾರ್ಯಕರ್ತರನ್ನು ನಿರ್ಲಕ್ಷಿಸಿದರೆ ಮುಂದೆ ಬರುವ ಚುನಾವಣೆಯಲ್ಲಿ ನೀವು ಅನುಭವಿಸಬೇಕಾಗುತ್ತದೆ. ನಾವು ಪಕ್ಷವನ್ನು ತೊರೆಯುವುದಿಲ್ಲ.ಆದರೆ ನಂದಕುಮಾರರಿಗೆ ಸೀಟು ಸಿಗುವ ತನಕ ಹೋರಾಟ ಮಾಡೋಣ ಎಂದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಫಝಲ್ ಕಡಬ ಸ್ವಾಗತಿಸಿ, ಶಶಿಧರ ಎಂ.ಜೆ.ವಂದಿಸಿದರು. ಸಚಿನ್‌ರಾಜ್ ಶೆಟ್ಟಿ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ರವೀಂದ್ರ ಕುಮಾರ್ ರುದ್ರಪಾದ, ಸತ್ಯಕುಮಾರ್ ಆಡಿಂಜ, ಮುತ್ತಪ್ಪ ಪೂಜಾರಿ, ಸಿ.ಜೆ.ಸೈಮನ್, ವಿಜಯಕುಮಾರ್ ರೈ,ಉಷಾ ಅಂಚನ್, ಅನಿಲ್ ರೈ ಬೆಳ್ಳಾರೆ, ಜಗನ್ನಾಥ ಪೂಜಾರಿ ಪೆರುವಾಜೆ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಲಕ್ಷ್ಮಣ್ ಬೊಳ್ಳಾಜೆ, ರಮೇಶ್ ಕೋಟೆ, ಲೋಕೇಶ್ ಅಕ್ರಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಸಾವಿರಕ್ಕೂ ಅಧಿಕ ಕಾರ್ಯಕರ್ತರು: ಸಮಾವೇಶದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.ಸಭಾಂಗಣ ತುಂಬಿ ತುಳುಕಿತ್ತು.

ಸಭೆಗೆ ಹೋಗದಂತೆ ಕರೆ ಬಂದಿದ್ದರೂ ಹೆದರುವುದಿಲ್ಲ
ನೀವು ಸಭೆಗೆ ಹೋಗಬಾರದು ಎಂದು ನಮಗೆ ಕರೆ ಬಂದಿದೆ.ಆದರೆ ನಾವು ಹೆದರುವುದಿಲ್ಲ. ನಂದಕುಮಾರ್‌ರಿಗೆ ಸೀಟು ಸಿಗಬೇಕು.ಮೇಲೆ ಕುಳಿತುಕೊಂಡು ಸೀಟು ಹಂಚುವ ನಾಯಕರಿಗೆ ಕಾರ್ಯಕರ್ತರ ಜೊತೆ ಅಭಿಪ್ರಾಯ ಸಂಗ್ರಹಿಸುವುದಕ್ಕೆ ಯಾಕೆ ಆಗುತ್ತಿಲ್ಲ? ಕಾರ್ಯಕರ್ತರ ಭಾವನೆಗೆ ಬೆಲೆ ಕೊಡದ ಕಾರಣ ಕಾಂಗ್ರೆಸ್ ಇದ್ದಂತಹ ಉತ್ತಮ ಅವಕಾಶವನ್ನು ಕಳೆದುಕೊಳ್ಳಲಿದೆ.ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಸುಳ್ಯಕ್ಕೆ ಕಾಂಗ್ರೆಸ್ ಎಂಎಲ್‌ಎ ಖಚಿತ
ಆಶಾಲಕ್ಷ್ಮಣ್
ಮಾಜಿ ಸದಸ್ಯರು ತಾ.ಪಂ.

LEAVE A REPLY

Please enter your comment!
Please enter your name here