ಪುತ್ತೂರು ಜಾತ್ರೆಗೆ ಈ ಬಾರಿ ನೂತನ ಗರುಡ !

0

ಗೊನೆ ಮುಹೂರ್ತದ ಹತ್ತನೇ ದಿನದಂದು ಒದಗಿ ಬರುವ ಮುಹೂರ್ತದಲ್ಲಿ ಕೊಡಿ ಏರಿದ(ಧ್ವಜಾರೋಹಣ) ನಂತರ ಪುತ್ತೂರು ಜಾತ್ರೆ ಆರಂಭವಾಗುತ್ತದೆ. ದೇವಸ್ಥಾನಗಳಲ್ಲಿ ಜಾತ್ರೋತ್ಸವ ನಡೆಯುವ ಆಮಂತ್ರಣವನ್ನು ದೇವಾದಿದೇವತೆಗಳಿಗೆ ತಲುಪಿಸುವ ಪ್ರಕ್ರಿಯೆಯೇ ಧ್ವಜಾರೋಹಣ. ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ಧ್ವಜ ಏರಿಸುವ ಪ್ರಕ್ರಿಯೆಗೆ ‘ಗರುಡ’ ಬೇಕಾಗುತ್ತದೆ. ಹಲವು ಶತಮಾನಗಳ ಹಿಂದೆ ರಚನೆಗೊಂಡ ಗರುಡ ಹಳೆಯದಾದರಿಂದ ಈ ಬಾರಿಯ ದೇವಳದ ಆಡಳಿತ ಮಂಡಳಿ ತಂತ್ರಿಗಳ ಮಾರ್ಗದರ್ಶನದಲ್ಲಿ ಜಾತ್ರೋತ್ಸವಕ್ಕೆ ನೂತನ ‘ಗರುಡ’ ನಿರ್ಮಾಣ ಮಾಡಿದ್ದಾರೆ.

ನಾಡಿನ ಕೆಲ ದೇಗುಲಗಳಲ್ಲಿ ಲೋಹದ ಗರುಡಗಳೂ ಆಯಾಯ ದೇಗುಲಗಳ ಆರೂಢದೇವರ ವಾಹನಗಳ ಪ್ರತಿಯನ್ನು ಆರೋಹಣ ಮಾಡುವ ನಿಯಮವಿದೆ. ಪುತ್ತೂರು ಸೇರಿದಂತೆ ತುಳುನಾಡಿನ ಹೆಚ್ಚಿನ ದೇಗುಲಗಳಲ್ಲಿ ಹತ್ತಿ, ಬಟ್ಟೆಯನ್ನು ಬಳಸಿ ತಯಾರಿಸಿದ ‘ಗರುಡ’ನನ್ನು ಏರಿಸುವ ಪದ್ಧತಿಯಿದೆ. ಜಾತ್ರೆಯ ಸಂದರ್ಭ ಕೊಡಿ ಏರಿಸುವ ಕಾರ್ಯವನ್ನು ತಲತಲಾಂತರದಿಂದ ಒಂದೇ ಪಾರಂಪರಿಕ ಕುಟುಂಬ ನೆರವೇರಿಸುತ್ತಿದೆ. ದೇವಳದ ಪರಿಚಾರಕ ನಾಗೇಶ್, ಪಿ.ಜಿ.ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ್ ಬಳಗದವರು ಕೊಡಿ ಏರಿಸುವ ಕಾರ್ಯ ಮಾಡುತ್ತಾರೆ. ಅದೇ ರೀತಿ ಈ ಗರುಡವನ್ನು ಕೆಲವೇ ಕೆಲವು ಮಂದಿ ತಯಾರು ಮಾಡುತ್ತಾರೆ. ಈ ಹಿಂದೆ ಬೆಟ್ಟಂಪಾಡಿಯ ವಾಸುದೇವ ಅವರು ಧ್ವಜ ನಿರ್ಮಾಣ ಮಾಡುತ್ತಿದ್ದರು. ಈ ಬಾರಿ ಎಡಮಂಗಲದ ಧನಂಜಯ ಎಂಬವರು ತಯಾರು ಮಾಡಿದ್ದಾರೆ.

ಸಂಪೂರ್ಣ ನೂತನ ಗರುಡ: ಹಲವು ಶತಮಾನಗಳ ಹಿಂದಿನ ರಚನೆಯಲ್ಲಿರುವ ಗರುಡವನ್ನು 2013ರಲ್ಲಿ ದೇವಳದ ಬ್ರಹ್ಮಕಲಶೋತ್ಸವದ ವೇಳೆ ಬೆಟ್ಟಂಪಾಡಿಯ ವಾಸುದೇವ ಎಂಬವರಿಂದ ನೂತನವಾಗಿ ರಚಿಸಲಾಗಿತ್ತು. ಆದರೆ ಆ ಸಂದರ್ಭ ಹಳೆಯ ಗರುಡನ ರಚನೆಯ ಮೇಲೆಯೇ ಹೊಸ ಬಟ್ಟೆ ಮುಚ್ಚಿ ತಯಾರಿಸಲಾಗಿತ್ತು. ಆದರೆ ಈ ಬಾರಿ ಸಂಪೂರ್ಣ ನೂತನ ಗರುಡವನ್ನು ರಚನೆ ಮಾಡಲಾಗಿದೆ. ಎಡಮಂಗಲದ ಧನಂಜಯ ಎಂಬವರು ನೂತನ ರಚನೆಯ ಕರ್ತೃ. 5 ವರ್ಷಗಳ ಹಿಂದೆ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕೆಮ್ಮಿಂಜೆ ನಾಗೇಶ ತಂತ್ರಿ ಮತ್ತು ಕಾರ್ತಿಕ್ ತಂತ್ರಿ ಅವರ ಮಾರ್ಗದರ್ಶನದಲ್ಲಿ ಮೊದಲ ಗರುಡವನ್ನು ನಿರ್ಮಾಣ ಮಾಡಿದ ಅವರ ಪ್ರಯತ್ನ ಇವತ್ತು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಅವರ ಶ್ರಮದಿಂದಲೇ ಗರುಡ ನಿರ್ಮಾಣ ಆಗಿದೆ.

ಪುತ್ತೂರಲ್ಲಿ ಒಂದು ವಿಶೇಷ ನಿಯಮ

ಪುತ್ತೂರು ಜಾತ್ರೆಗೆ ಕೊಡಿ ಏರುವುದನ್ನು ನೋಡಿದವರು ಕೊಡಿ ಇಳಿಯುವಾಗಲೂ ಇರಬೇಕು. ಅನಿವಾರ್ಯ ಕಾರಣವಿದ್ದಲ್ಲಿ ಪ್ರಾರ್ಥಿಸಿ ಕಾಣಿಕೆ ಹಾಕಿ ತೆರಳಬಹುದು. ಇದು ಇಲ್ಲಿನ ರೂಢಿಯಲ್ಲಿ ಬಂದಿದೆ. ಪುತ್ತೂರು ದೇಗುಲದ ಜಾತ್ರೆಯಲ್ಲಿ ಒಂದು ವಿಶೇಷವನ್ನು ಭಕ್ತರು ಗಮನಿಸಬಹುದು. ಏನೆಂದರೆ ರಾತ್ರಿಯಲ್ಲಿ ದೇವರ ಹೊರಾಂಗಣ ಸುತ್ತುಗಳು ನಡೆಯುತ್ತಿರುವಾಗ ಗರುಡನನ್ನು ವೀಕ್ಷಿಸಿ ದೇವರ ಬಲಿ ಸಾಗುತ್ತಿರುವ ದಿಕ್ಕಲ್ಲೇ ಗರುಡನೂ ಮುಖ ಮಾಡಿರುತ್ತಾನೆ. ಗರುಡನ ನೋಡಿ ದೇವರು ಸುತ್ತಿನ ಯಾವ ಭಾಗದಲ್ಲಿದ್ದಾರೆಂದು ಸುಲಭವಾಗಿ ಅರಿಯಬಹುದು-
ಪಿ.ಜಿ.ಚಂದ್ರಶೇಖರ್ ರಾವ್ . ದೇವಾಲಯಗಳ ಅಧ್ಯಯನಕಾರ

LEAVE A REPLY

Please enter your comment!
Please enter your name here