ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧ್ವಜಾರೋಹಣ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಚಾಲನೆ-ಪುಷ್ಕರಣಿಯಲ್ಲಿ ಶ್ರೀ ವರುಣ ದೇವರ ಪೂಜೆ, ಕಲಶಾಭಿಷೇಕದ ಬಳಿಕ ನಡೆಯಿತು ಧ್ವಜಾರೋಹಣ

0

ಬ್ರಹ್ಮರಥ, ಸಣ್ಣ ರಥಕ್ಕೆ ಕಲಶ ಮುಹೂರ್ತ ಜಕುರಿಯ ಮಾಡಾವು ನಂಜೆ ಏಳ್ನಾಡುಗುತ್ತು ಕುಟುಂಬದಿಂದ ಅನ್ನಸಂತರ್ಪಣೆ

ಗರುಡಗಳಿಂದ ಧ್ವಜನಮನ
ಧ್ವಜಾರೋಹಣದ ವೇಳೆ ಪ್ರತಿ ವರ್ಷದಂತೆ ಗರುಡಗಳೆರಡು ಬಾನೆತ್ತರದಲ್ಲಿ ದೇವಳದ ಕೆರೆಯ ಭಾಗದಿಂದ ಧ್ವಜಮರ(ಕೊಡಿಮರ)ಕ್ಕೆ ದೂರದಿಂದಲೇ ಸುತ್ತು ಬರುತ್ತಿರುವುದು ಗಮನಕ್ಕೆ ಬಂತು.ಪ್ರತಿ ವರ್ಷ ಧ್ವಜಾರೋಹಣದ ವೇಳೆ ಗರುಡಗಳಾಗಮಿಸಿ ಕೊಡಿಮರಕ್ಕೆ ಸುತ್ತು ಬಂದು ಹೋಗುತ್ತಿರುವುದು ವಿಶೇಷವಾಗಿದೆ.ಗರುಡಗಳೆರಡು ಬಾನೆತ್ತರದಲ್ಲಿ ಹಾರುತ್ತಿರುವ ಚಿತ್ರಗಳು ರಂಜಿತ್ ಜೈನ್ ಅವರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಏ.10ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಆರಂಭಗೊಂಡಿದೆ.ಈ ಬಾರಿ ದೇವಳದ ಪುಷ್ಕರಣಿಯ ತಳಭಾಗದಲ್ಲಿ ಶ್ರೀ ವರುಣ ದೇವರ ಪೂಜೆ, ಕಲಶಾಭಿಷೇಕದ ಬಳಿಕ ದೇವಳದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.


ಬೆಳಗ್ಗೆ 9.25ರ ನಂತರದ ವೃಷಭ ಲಗ್ನದಲ್ಲಿ ಸುಮಾರು 10.45ರ ಸಮಯಕ್ಕೆ ದೇವಾಲಯದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ದೇವಳದ ಪಾರಂಪರಿಕ ಚಾಕರಿದಾರರಾದ ದೇವಳದ ವಾಸ್ತು ಇಂಜಿನಿಯರ್,ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್, ನಾಗೇಶ್ ಮತ್ತು ಪರಿವಾರದವರು ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ಮೊದಲು ದೇವಳದ ಸ್ವರ್ಣಲೇಪಿತ ಧ್ವಜಸ್ತಂಭದ ಧ್ವಜಪೀಠಕ್ಕೆ ತಂತ್ರಿಗಳ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ.ವಿ.ಎಸ್.ಭಟ್ ಅವರು ಪೂಜೆ ನೆರವೇರಿಸಿದರು.ಬಳಿಕ ಶ್ರೀ ದೇವರ ಉತ್ಸವ ಮೂರ್ತಿಯ ಅಪ್ಪಣೆ ಪಡೆದ ಪಿ.ಜಿ.ಜಗನ್ನಿವಾಸ ರಾವ್ ಅವರು ಪರಿವಾರದವರ ಜೊತೆಯಲ್ಲಿ ಜಾತ್ರೋತ್ಸವದ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಭಕ್ತಾದಿಗಳು `ಶ್ರೀ ಮಹಾಲಿಂಗೇಶ್ವರ ದೇವರ ಪಾದಾರವಿಂದಕ್ಕೆ ಗೋವಿಂದಾ ಗೋವಿಂದಾ..’ ಎಂದು ಕೂಗಿದರು.ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸಮಿತಿ ಸದಸ್ಯರಾದ ರಾಮದಾಸ ಗೌಡ, ಶೇಖರ ನಾರಾವಿ, ರಾಮಚಂದ್ರ ಕಾಮತ್, ಡಾ.ಸುಧಾ ಎಸ್.ರಾವ್, ವೀಣಾ ಬಿ.ಕೆ.,ಕೆ.ಎಸ್.ರವೀಂದ್ರನಾಥ ರೈ,ಬಿ.ಐತ್ತಪ್ಪ ನಾಯ್ಕ, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್.,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ನಗರಸಭಾಧ್ಯಕ್ಷ ಜೀವಂಧರ್ ಜೈನ್, ಡಿವೈಎಸ್‌ಪಿ ಡಾ|ವೀರಯ್ಯ ಹಿರೇಮಠ್, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಸದಸ್ಯ ಅಶೋಕ್ ಬಲ್ನಾಡು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ದೇವಳದ ಮಾಜಿ ಮೊಕ್ತೇಸರರಾದ ಚಿದಾನಂದ ಬೈಲಾಡಿ, ರಮೇಶ್ ಬಾಬು, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಸದಸ್ಯರಾದ ಕರುಣಾಕರ ರೈ, ನಯನಾ ರೈ, ಸಂತೋಷ್ ಕುಮಾರ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ರೋಹಿಣಿ ಆಚಾರ್ಯ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಮಾಜಿ ಪುರಸಭಾ ಸದಸ್ಯ ಹೆಚ್.ಉದಯ, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು, ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವನಾಥ ಕುಲಾಲ್, ಶ್ರೀ ಕ್ಷೇ.ಧ.ಗ್ರಾ.ಯೋ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ,ಸೀತಾರಾಮ ರೈ ಕೆದಂಬಾಡಿಗುತ್ತು, ಕೃಷ್ಣಪ್ರಸಾದ್ ಆಳ್ವ, ರತ್ನಾಕರ ನಾಕ್, ಮಾಜಿ ಪುರಸಭಾಧ್ಯಕ್ಷರಾದ ರಾಜೇಶ್ ಬನ್ನೂರು, ಯು.ಲೋಕೇಶ್ ಹೆಗ್ಡೆ, ಕಿಟ್ಟಣ್ಣ ಗೌಡ, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ರಾಧಾಕೃಷ್ಣ ನಂದಿಲ, ಶ್ರೀಧರ್ ಪಟ್ಲ, ಮತ್ತಿತರರು ಪಾಲ್ಗೊಂಡಿದ್ದರು.
ಭಗವಧ್ವಜಾರೋಹಣ: ದೇವಳದ ಒಳಾಂಗಣದಲ್ಲಿ ಜಾತ್ರಾ ಧ್ವಜಾರೋಹಣ ಮಾಡಿದ ತಕ್ಷಣ ದೇವಳದ ಹೊರಾಂಗಣದಲ್ಲಿ ಭಗವಧ್ವಜಾರೋಹಣವನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ನೆರವೇರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ದೇವಳದ ಕಾರ್ಯನಿರ್ವಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್, ಹಿಂದು ಜಾಗರಣಾ ವೇದಿಕೆ ಪ್ರಮುಖರಾದ ಅಜಿತ್ ಕುಮಾರ್ ರೈ, ಚಿನ್ಮಯ್ ರೈ ಈಶ್ವರಮಂಗಲ, ದಿನೇಶ್ ಪಂಜಿಗ, ಭರತ್, ಮನೀಶ್ ಕುಲಾಲ್, ಮನೀಶ್ ಬಿರ್ವ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.


ಬ್ರಹ್ಮರಥ, ಸಣ್ಣರಥಕ್ಕೆ ಕಲಶ ಮುಹೂರ್ತ:
ದೇವಳದ ಹೊರಾಂಗಣ ಸುತ್ತಿನಲ್ಲಿ ಏ.16ರಂದು ಎಳೆಯುವ ಸಣ್ಣರಥ ಮತ್ತು ಎ.17ರಂದು ಎಳೆಯುವ ಬ್ರಹ್ಮರಥಕ್ಕೆ ಕಲಶ ಇಡುವ ಮುಹೂರ್ತ ಇದೇ ಸಂದರ್ಭ ನಡೆಯಿತು.ಸಂಪ್ರದಾಯದಂತೆ ದೇವಳದ ಹೊರಾಂಗಣದ ರಥ ಕೊಟ್ಯದ ಹೊರಗೆ ಇರಿಸಲಾಗಿದ್ದ ಸಣ್ಣರಥಕ್ಕೆ ಕಲಶ ಇಟ್ಟ ಬಳಿಕ, ರಥ ಬೀದಿಯಲ್ಲಿನ ಬ್ರಹ್ಮರಥಕ್ಕೆ ಛತ್ರ ಮತ್ತು ಕಲಶ ಮುಹೂರ್ತ ನೆರವೇರಿಸಲಾಯಿತು.ಬಳಿಕ ಪಲ್ಲಪೂಜೆ, ಮಹಾಪೂಜೆ ನಡೆಯಿತು.


ಕುರಿಯ ಮಾಡಾವು ನಂಜೆ ಏಳ್ನಾಡುಗುತ್ತು ಕುಟುಂಬದಿಂದ ಅನ್ನಸಂತರ್ಪಣೆ:
ಸಂಪ್ರದಾಯದಂತೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಆರಾಧನಾ ಸಮಿತಿ ಕುರಿಯ ಮಾಡಾವು ನಂಜೆ ಏಳ್ನಾಡುಗುತ್ತು ಕುಟುಂಬದ ವತಿಯಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಮಹಾಪೂಜೆ, ಸಮಾರಾಧನೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ವೇ.ಮೂ. ಜಯರಾಮ ಜೋಯಿಷ ಅವರಿಂದ ಮಧ್ಯಾಹ್ನ ಪಲ್ಲಪೂಜೆ ನಡೆದ ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ಬೆಳಿಗ್ಗೆ ದೇವಳಕ್ಕೆ ಅನ್ನದಾನದ ದೇಣಿಗೆ ಸಮರ್ಪಣೆ ಮಾಡಲಾಯಿತು. ಪಲ್ಲಪೂಜೆಯಲ್ಲಿ ಅರ್ಚಕರಿಗೆ ಶ್ರೀಕೃಷ್ಣ ಜೆ.ರಾವ್ ಸಹಾಯಕರಾಗಿದ್ದರು.ಹಿರಿಯರಾದ ಕೆ.ಎಂ. ವಿಶ್ವನಾಥ ರೈ ಮಾಡಾವು, ಕುರಿಯ ಸೀತಾರಾಮ ರೈ, ಆರಾಧನಾ ಸಮಿತಿ ಅಧ್ಯಕ್ಷ ಎಂ.ಬಿ.ಚೆನ್ನಪ್ಪ ರೈ ಬಳಜ್ಜ, ಕಾರ್ಯದರ್ಶಿ ಮಾಧವ ರೈ ಕುಂಬ್ರ, ಜೊತೆ ಕಾರ್ಯದರ್ಶಿ ಸತೀಶ್ ರೈ ಕುರಿಯ, ಕೋಶಾಧಿಕಾರಿ ಜಯಶೀಲಾ ರೈ ಕುರಿಯ, ಎಸ್.ಬಿ.ಜಯರಾಮ ರೈ, ಮಂಜುನಾಥ್ ರೈ ಸಹಿತ ಹಲವಾರು ಮಂದಿ ಪ್ರಮುಖರು ಉಪಸ್ಥಿತರಿದ್ದರು.


ದೇವಳದ ಪುಷ್ಕರಣಿಯ ಶಿಲಾಮಯ ಮಂಟಪಕ್ಕೆ ಕಲಶ – ಶ್ರೀ ವರುಣ ದೇವರ ಪೂಜೆ:
ಬೆಳಿಗ್ಗೆ ಗಂಟೆ 8ರಿಂದ ದೇವಳದ ಪುಷ್ಕರಣಿಯ ನೂತನ ಶಿಲಾಮಯ ಮಂಟಪಕ್ಕೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಕಲಶ ಪೂಜೆ ನಡೆಯಿತು.ಬಳಿಕ ಮಂಟಪದ ತಳಭಾಗದಲ್ಲಿರುವ ಶ್ರೀ ವರುಣ ದೇವರಿಗೆ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸಮಿತಿ ಸದಸ್ಯರು ಹಾಗು ಮಂಟಪ ನಿರ್ಮಾಣದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಶಿಲಾ ಶಿಲ್ಪಿ ಗುಣವಂತೇಶ್ವರ ಭಟ್, ಗುತ್ತಿಗೆದಾರ ರಘುರಾಮ ಉಪ್ಪಂಗಲ ಸಹಿತ ಹಲವಾರು ಮಂದಿ ಭಕ್ತರು ಉಪಸ್ಥಿತರಿದ್ದರು. ಬಳಿಕ ಸಾಮೂಹಿಕ ಶ್ರೀ ವರುಣ ಪೂಜೆ ನಡೆಯಿತು. ಭಕ್ತರು ಸಾಮೂಹಿಕ ಪೂಜಾ ಸೇವೆ ಮಾಡಿಸಿದರು. ಎ.9ರಂದು ರಾತ್ರಿ ವಾಸ್ತು ಹೋಮಾದಿಗಳು ನಡೆಯಿತು.

LEAVE A REPLY

Please enter your comment!
Please enter your name here