ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ; ಬ್ರಹ್ಮಲಕಶೋತ್ಸವದ ಯಶಸ್ಸಿನ ರೂವಾರಿಗಳಿಗೆ ಅಭಿನಂದನಾ ಸಭೆ

0

ಪುತ್ತೂರು:ನರಿಮೊಗರು ಗ್ರಾಮದ ಮುಕ್ವೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ, ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಲೆಕ್ಕಪತ್ರ ಮಂಡನೆ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಸಹಕರಿಸಿದ ಕಾರ್ಯಕರ್ತ ಬಂಧುಗಳಿಗೆ ಅಭಿನಂದನಾ ಸಭೆಯ ಎ.9ರಂದು ಕ್ಷೇತ್ರದಲ್ಲಿ ನೆವೇರಿತು.

ಬ್ರಹ್ಮಕಲಶೋತ್ಸವದ ಲೆಕ್ಕ ಪತ್ರ ಮಂಡಿಸಿದ ಕೋಶಾಧಿಕಾರಿ ನವೀನ್ ರೈ ಶಿಬರ ಮಾತನಾಡಿ, ಬ್ರಹ್ಮಕಲಶೋತ್ಸವದಲ್ಲಿ ವಿವಿಧ ರೂಪದಲ್ಲಿ ರೂ.74,60,562 ಜಮೆಯಾಗಿದೆ. ಇದರಲ್ಲಿ ರೂ.47,69,300 ಬ್ರಹ್ಮಕಲಶೋತ್ಸವಕ್ಕೆ ಖರ್ಚಾಗಿದ್ದು ರೂ.26,91,262 ಉಳಿಕೆಯಾಗಿದೆ. ಬ್ರಹ್ಮಕಲಶೋತ್ಸವಕ್ಕೆ ಪೂರ್ವಬಾವಿಯಾಗಿ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳಿಗೆ ರೂ.29,28,597 ವೆಚ್ಚವಾಗಿದೆ. ಈ ಮೊತ್ತವನ್ನು ಬ್ರಹ್ಮಕಲಶೋತ್ಸವದ ಉಳಿಕೆ ಹಣದಲ್ಲಿ ಭರಿಸಲಾಗಿರುವುದಲ್ಲದೆ ಖರ್ಚಾದ ಹೆಚ್ಚುವರಿ ಮೊತ್ತ ರೂ.2,37,665ನ್ನು ಉಳಿತಾಯ ಖಾತೆಯಿಂದ ಭರಿಸಲಾಗಿದೆ ಎಂದರು.

ತಂತ್ರಿವರ್ಗದವರಿಂದಲೂ ಕರಸೇವಕರಂತೆ ಸೇವೆ:
ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಕಾರ್ಯಕರ್ತರ ಶ್ರಮವೇ ಮೂಲಕ ಕಾರಣ. ಸುಮಾರು 15 ದಿನಗಳಿಂದ ಮನೆ ಮಠ ತೊರೆದು ಕಾರ್ಯಕರ್ತರು ದೇವಸ್ಥಾನದ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ ಯಾವುದೇ ಕೊರತೆ ಭಿನ್ನಾಭಿಪ್ರಾಯಗಳಿಲ್ಲದೆ ಅತ್ಯಂತ ಯಶಸ್ವಿಯಾಗಿ ನೆರವೇರುವಲ್ಲಿ ಸಹಕಾರಿಯಾಗಿದೆ. ಬ್ರಹ್ಮಲಕಶೋತ್ಸವ ಹಾಗೂ ಜಾತ್ರೋತ್ಸವದಲ್ಲಿ ತಂತ್ರಿವರ್ಗದವರು, ಅರ್ಚಕರು, ಬ್ರಹ್ಮವಾಹಕರಿಗೆ ನೀಡಿದ ಗೌರವ ಧನವನ್ನು ಮತ್ತೆ ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ಹಿಂತಿರುಗಿಸುವ ಮೂಲಕ ಬ್ರಹ್ಮಕಲಶೋತ್ಸವದಲ್ಲಿ ತಂತ್ರಿ ವರ್ಗದವರೂ, ಅರ್ಚಕರು, ಬ್ರಹ್ಮವಾಹಕರು ಕಾರ್ಯಕರ್ತರಂತೆ ದೇವರ ಸೇವೆ ಸಲ್ಲಿಸಿದ್ದು ಮಜಲುಮಾರು ಕ್ಷೇತ್ರದಲ್ಲಿ ಆದರ್ಶ ರೀತಿಯಲ್ಲಿ ಬ್ರಹ್ಮಕಲಶೋತ್ಸವ ನೆರವೇರಿದೆ ಎಂದು ಕೋಶಾಧಿಕಾರಿ ನವೀನ್ ರೈ ಶಿಬರ ತಿಳಿಸಿದರು.

ಅಭಿನಂದನಾ ಭಾಷಣ ಮಾಡಿದ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಸದಸ್ಯ ಸುಜಯ ತಂತ್ರಿಯವರು ಮಾತನಾಡಿ, ಕಾರ್ಯಕರ್ತರ ಉತ್ತಮ ಸಂಘಟನೆ, ನಿಷ್ಠೆಯ ಶ್ರಮ, ಉತ್ತಮ ಬಾಂಧವ್ಯತೆಯಿಂದಾಗಿ ಕ್ಷೇತ್ರದಲ್ಲಿ ಏಳು ದಿನಗಳ ಕಾಲ ನಡೆದ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರುವಲ್ಲಿ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ಕಾರ್ಯಕ್ರಮ ಎಂಬ ಭಾವನೆಯೊಂದಿಗೆ ಸಹಕರಿಸಿದ್ದಾರೆ. ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಯಶಸ್ವಿಯಾಗಿ ನೆರವೇರುವಲ್ಲಿ ಸಹಕಾರಿಯಾಗಿದೆ. ಉತ್ತಮ ಸಂಘಟನೆಯಿದ್ದರೆ ಕಾರ್ಯಕ್ರಮ ಯಶಸ್ವಿಗೊಳಿಸುವುದಕ್ಕೆ ಮಜಲುಮಾರು ಕ್ಷೇತ್ರವೇ ಉದಾಹರಣೆಯಾಗಿದೆ. ಈ ಸಂಘಟನೆಯು ನಿರಂತರವಾಗಿ ಉಳಿಯಲಿ ಎಂದು ಹೇಳಿದ ಅವರು, ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು, ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಗೌರವ ಸಲಹೆಗಾರರಾಗಿರುವ ಜಯರಾಮ ಕೆದಿಲಾಯ ಶಿಬರ ಮಾತನಾಡಿ, ಕ್ಷೇತ್ರದ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮೊರ್ಪಣೆ ಹಾಗೂ ವರ್ಷಾವಧಿ ಜಾತ್ರೋತ್ಸವದ ಯಶಸ್ವಿಸಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕರ್ತರಿಗೆ ಅಭಿನಂದನೆ:
ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರ ಕಾರ್ಯಕರ್ತರಿಗೂ ವೇದಿಕೆಯಲ್ಲಿ ಫಲ, ದೇವರ ಪ್ರಸಾದ ನೀಡಿ ಅಭಿನಂದಿಸಲಾಯಿತು.
ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಉಪ್ಪಳ, ಉಪಾಧ್ಯಕ್ಷ ಬೆಳಿಯಪ್ಪ ಗೌಡ ಕೆದ್ಕಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ತಂತ್ರಿ ಕೆಮ್ಮಿಂಜೆ, ಉಮಾಮಹೇಶ್ವರ ಭಜನಾ ಮಂಡಳಿಯ ಸತೀಶ್ ಪ್ರಭು ಎಲಿಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಕೋಶಾಧಿಕಾರಿ ನವೀನ್ ರೈ ಶಿಬರ ಸ್ವಾಗತಿಸಿದರು. ಪ್ರವೀಣ್ ನಡುವಾಳ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಿತು. ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿಷ್ಠಾ ಮಹೋತ್ಸವ:
ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಮಹಾಗಣಪತಿಹೋಮ, ಪಂಚವಿಂಶತಿ ಕಲಶ ಪೂಜೆ, ಏಕದಶರುದ್ರಾಭಿಷೇಕ, ಆಶ್ಲೇಷ ಬಲಿ, ನಾಗತಂಬಿಲ, ಪವಮಾನಾಭಿಷೇಕ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ದೈವಗಳಿಗೆ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ದೇವರಿಗೆ ರಂಗಪೂಜೆ, ದೈವಗಳಿಗೆ ತಂಬಿಲ ಹಾಗೂ ಅನ್ನಸಂತರ್ಪಣೆ ನೆರವೇರಿತು.

LEAVE A REPLY

Please enter your comment!
Please enter your name here