ಸತ್ಯದರ್ಶನದೊಂದಿಗೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಓದುಗರ ಮೆಚ್ಚುವ ಪತ್ರಿಕೆಯಾಗಲಿ-ವಂ|ಗ್ರೆಗರಿ ಪಿರೇರಾ
ಚಿತ್ರ:ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಸತ್ಯದರ್ಶನದ ಜೊತೆಗೆ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ “ಕರಾವಳಿ ಸುದ್ದಿ” ಓದುಗರು ಮೆಚ್ಚುವ ಪತ್ರಿಕೆಯಾಗಿ ಮೂಡಿಬರಲಿ ಎಂದು ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಧರ್ಮಗುರು ವಂ|ಗ್ರೆಗರಿ ಪಿರೇರಾರವರು ಹೇಳಿದರು.
ಮಾಣಿಯಲ್ಲಿನ ನಿತ್ಯಾಧಾರ್ ಮ್ಯಾನ್ಶನ್ ನಲ್ಲಿ ಎ.9 ರಂದು ಅರಿವಿನತ್ತ ನಮ್ಮ ಚಿತ್ತ ಎಂಬ ಅಡಿಬರಹದೊಂದಿಗೆ ಆರಂಭಗೊಂಡ “ಕರಾವಳಿ ಸುದ್ದಿ” ವಾರ ಪತ್ರಿಕೆಯ ನೂತನ ಕಛೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು. ಮೊಬೈಲ್ ಹಾವಳಿಯಿಂದಾಗಿ ಇಂದು ಪತ್ರಿಕೆ ಆರಂಭಿಸುವುದು ಅಷ್ಟೊಂದು ಸೂಕ್ತವಲ್ಲ. ಇಂತಹ ಪರಿಷ್ಥಿತಿಯಲ್ಲೂ ಸಾಮಾಜಿಕ ಕಾಳಜಿ ಹೊಂದಿರುವ ರೋಷನ್ ಹಾಗೂ ಅನಿತಾ ಮಾರ್ಟಿಸ್ ದಂಪತಿ ಹೊಸಪತ್ರಿಕೆಯ ನೇತೃತ್ವ ವಹಿಸಿರುವುದು ನಮ್ಮ ಚರ್ಚ್ ಗೂ ಅಭಿಮಾನದ ಸಂಗತಿಯಾಗಿದ್ದು, ಪ್ರತಿಯೋರ್ವರೂ ಈ ಪತ್ರಿಕೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು.
ಪತ್ರಿಕೆಯು ಸತ್ಯದ ಬೆಳಕಿನಲ್ಲಿ ಸಾಗಲಿ-ಸ್ಟೀವನ್ ಪ್ರಕಾಶ್ ಮಾರ್ಟಿಸ್:
ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಹಾಗೂ ರಶ್ಮಿ ಫೆರ್ನಾಂಡಿಸ್ ದಂಪತಿ ನೂತನ ಕಛೇರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಅವರು, ದೇವರ ದಯೆ ಹಾಗೂ ಎಲ್ಲರ ಸಹಕಾರದೊಂದಿಗೆ ವಾರಪತ್ರಿಕೆ ಜನಪ್ರಿಯತೆ ಗಳಿಸಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಲಿ, ಸತ್ಯದ ಬೆಳಕಿನಲ್ಲಿ ಸಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಮುಂದೊಂದು ದಿನ ‘ಕರಾವಳಿ ಸುದ್ದಿ’ ದಿನಪತ್ರಿಕೆಯಾಗಿ ಮೂಡಿಬರಲಿ-ಪಾವ್ಲ್ ರೊಲ್ಫಿ ಡಿ’ಕೋಸ್ಟ:
ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ನಿಕಟಪೂರ್ವ ಕೇಂದ್ರೀಯ ಅಧ್ಯಕ್ಷರಾದ ಪಾವ್ಲ್ ರೊಲ್ಫಿ ಡಿ’ಕೋಸ್ಟರವರು ಮಾತನಾಡಿ, ಪತ್ರಿಕಾ ಮಾಧ್ಯಮದವರ ಕಷ್ಟ-ಸುಖವನ್ನು ನಾನು ಹತ್ತಿರದಿಂದ ಬಲ್ಲೆ. ಹಣ ಮಾಡುವ ಉದ್ಧೇಶ ಹತ್ತು ಹಲವು ಇದ್ದರಾದರೂ ರೋಷನ್ ರವರು ಈ ಕಷ್ಟದ ಹಾದಿಯನ್ನು ಯಾಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಜನರ ಸಂಕಷ್ಟಗಳಿಗೆ ಸಹಾಯಹಸ್ತ ನೀಡುವ ದೊಡ್ಡ ಮಟ್ಟದ ಕನಸಿನೊಂದಿಗೆ ಈ ಪತ್ರಿಕಾ ರಂಗಕ್ಕೆ ಕಾಲಿಟ್ಟಿರುತ್ತಾರೆ ರೋಷನ್ ರವರು. ಪತ್ರಿಕಾ ಧರ್ಮದ ಎಲ್ಲಾ ನೀತಿ ನಿಯಮಗಳನ್ನು ಪಾಲಿಸಿಕೊಂಡು ಮುಂದೊಂದು ದಿನ ‘ಕರಾವಳಿ ಸುದ್ದಿ’ ದಿನಪತ್ರಿಕೆಯಾಗಿ ಮೂಡಿಬರಲಿ ಎಂದು ಶುಭಹಾರೈಸಿದರು.
ಪತ್ರಿಕಾ ಮಾಧ್ಯಮದವರ ಪರಿಚಯ:
ಈ ಸಂದರ್ಭದಲ್ಲಿ ಸಭೆಯಲ್ಲಿ ಹಾಜರಿದ್ದ ವಿವಿಧ ಪತ್ರಿಕಾ ಮಾಧ್ಯಮದವರಾದ ಉದಯವಾಣಿ ವಿಟ್ಲ ವಿಭಾಗದ ಉದಯಶಂಕರ್ ನೀರ್ಪಾಜೆ, ವಿ4, ದಾಯ್ಜಿವಲ್ಡ್೯ನ ಮಹಮದ್ ಆಲಿ, ಆಂಕರ್ ಪ್ರಿಯಾ, ಕನ್ನಡಪ್ರಭ, ನಮ್ಮ ಬಂಟ್ವಾಳದ ಮೌನೇಶ್ ವಿಶ್ವಕರ್ಮ, ಆರ್ಸೊ, ಕಿಟಾಳ್ ಕೊಂಕಣಿ ಪತ್ರಿಕೆಯ ಎಚ್.ಎಂ ಪೆರ್ನಾಲ್, ಹಿರಿಯರಾದ ಪಂಚು ಬಂಟ್ವಾಳ, ಗಾಯಕ ವಿನ್ಸೆಂಟ್, ಕೀಬೋರ್ಡ್ ನುಡಿಸುವ ಜೇಮ್ಸ್, ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ಸಂತೋಷ್ ಮೊಟ್ಟೆತ್ತಡ್ಕರವರ ಪರಿಚಯವನ್ನು ಕರಾವಳಿ ಸುದ್ದಿಯ ಸಂಪಾದಕ ಹಾಗೂ ಪ್ರಕಾಶಕ ರೋಷನ್ ಬೊನಿಫಾಸ್ ಮಾರ್ಟಿಸ್ ರವರು ನೀಡಿದರು.
ಕರಾವಳಿ ಸುದ್ದಿಯ ಸಂಪಾದಕ ಹಾಗೂ ಪ್ರಕಾಶಕ ರೋಷನ್ ಬೊನಿಫಾಸ್ ಮಾರ್ಟಿಸ್ ಪ್ರಸ್ತಾವನೆಯ ಜೊತೆಗೆ ಸ್ವಾಗತಿಸಿದರು.
ಇದೇ ಸಂದರ್ಭ ಹೆನ್ರಿ ಮೆಂಡೋನ್ಸಾ ಪೆರ್ನಾಲ್ ಅವರು ಕರಾವಳಿ ಸುದ್ದಿಯ ವೆಬ್ಸೈಟ್ ಅನ್ನು ಅನಾವರಣಗೊಳಿಸಿದರು.
ಕರಾವಳಿ ಸುದ್ದಿಯ ಪಿ.ಆರ್.ಒ ಹಾಗೂ ಕಲಾ ಸಾಮ್ರಾಟ್ ಚೇತನ್ ರೈ ಮಾಣಿ ಕಾರ್ಯಕ್ರಮ ನಿರೂಪಿಸಿದರು. ಉಪ ಸಂಪಾದಕಿ ಅನಿತಾ ರೋಷನ್ ಮಾರ್ಟಿಸ್ ವಂದಿಸಿದರು.
ಎಲ್ಲರ ಸಹಕಾರದ ನಿರೀಕ್ಷೆಯೊಂದಿಗೆ ಮಾಧ್ಯಮ ರಂಗಕ್ಕೆ ಕಾಲಿರಿಸಿದ್ದೇನೆ…
ಮುದ್ರಣ ಮಾಧ್ಯಮಕ್ಕೆ ಬೇಡಿಕೆಗಳು ಕಡಿಮೆಯಾಗುತ್ತಿದೆ ಎನ್ನುವ ಈ ಕಾಲದಲ್ಲಿ ನಾನು ನೂತನವಾಗಿ ವಾರಪತ್ರಿಕೆಯನ್ನು ಆರಂಭಿಸುವ ಯೋಚನೆ ಮಾಡಿದಾಗ ಹಲವರು ಇದು ಬೇಕಾ, ವೆಬ್ಸೈಟ್ ಆರಂಭಿಸಿ, ಚಾನೆಲ್ ಆರಂಭಿಸಿ ಎಂದೆಲ್ಲಾ ನನ್ನ ಮಿತ್ರರು ಸಲಹೆಯನ್ನು ನೀಡಿದ್ದರು. ಎಲ್ಲವನ್ನೂ ಸಕರಾತ್ಮಕವಾಗಿ ಸ್ವೀಕರಿಸಿದ್ದೇನೆ. ಆದರೆ ಮುದ್ರಣ ಮಾಧ್ಯಮದ ಶಕ್ತಿ ಎಲ್ಲಕ್ಕಿಂತ ವಿಭಿನ್ನ ಎಂದು ನಂಬಿದವ ನಾನು. ಒಂದು ವಾರಪತ್ರಿಕೆಯನ್ನು ಆರಂಭಿಸಬೇಕೆನ್ನುವ ನನ್ನ ಹಲವು ವರ್ಷದ ಕನಸಾಗಿತ್ತು. ಅದಕ್ಕೆ ಪೂರಕವಾಗಿ ಕಳೆದ ವರ್ಷ ಸಚಿನ್ ರಾಜ್ ಶೆಟ್ಟಿಯವರ ಪರಿಚಯವಾಗಿ ಅವರ ಪತ್ರಿಕೆ ಬಗ್ಗೆ ತಿಳಿಯಿತು. ಹಾಗಾಗಿ ಅದನ್ನು ನಾನು ಮುಂದುವರಿಸುವ ನಿರ್ಧಾರ ಮಾಡಿ, ಆ ಶೀರ್ಷಿಕೆಯನ್ನು ಖರೀದಿಸಿ ಇದೀಗ ಕರಾವಳಿ ಸುದ್ದಿಯೆನ್ನುವ ಶೀರ್ಷಿಕೆಯ ಸಂಪೂರ್ಣ ಒಡೆತನ ನನ್ನ ಹೆಸರಿನಲ್ಲಿದೆ ಎಂದು ಹೇಳಲು ಸಂತೋಷ ಪಡುತ್ತೇನೆ. ಜೊತೆಗೆ ಸಚಿನ್ ರಾಜ್ ರವರಿಗೆ ಕೃತಜ್ಞತೆ ಸಲ್ಲಿಸಬಯಸುತ್ತೇನೆ. ಅಲ್ಲದೆ ಸಚಿನ್ ರಾಜ್ ರವರು ನನ್ನ ಕಛೇರಿಯಲ್ಲಿಯೇ ಸೇವೆ ನೀಡುವುದು ದೇವರು ನನಗೆ ಕರುಣಿಸಿದ ಭಾಗ್ಯವಾಗಿದೆ. ಎಲ್ಲರ ಸಹಕಾರದ ನಿರೀಕ್ಷೆಯೊಂದಿಗೆ ಮಾಧ್ಯಮ ರಂಗಕ್ಕೆ ಕಾಲಿರಿಸಿದ್ದೇನೆ. ಪರಿಣಾಮಕಾರಿ ಪತ್ರಿಕೆಯನ್ನು ಸಮಾಜಕ್ಕೆ ನೀಡುವ ಹಂಬಲ ತನ್ನದಾಗಿದೆ.
-ರೋಷನ್ ಭೊನಿಪಾಸ್ ಮಾರ್ಟಿಸ್, ಸಂಪಾದಕರು ಹಾಗೂ ಪ್ರಕಾಶಕರು, ಕರಾವಳಿ ಸುದ್ದಿ
ಎ.17ಕ್ಕೆ ಮೊದಲ ಸಂಚಿಕೆ ಬಿಡುಗಡೆ..
ಬಂಟ್ವಾಳವನ್ನು ಕೇಂದ್ರವಾಗಿಸಿಕೊಂಡು ಮುನ್ನೆಡೆಯಲಿರುವ ನಮ್ಮ ‘ಕರಾವಳಿ ಸುದ್ದಿ’ ವಾರಪತ್ರಿಕೆ ಜಿಲ್ಲಾ ಮಟ್ಟದಲ್ಲಿ ಹಾಗೂ ಕರ್ನಾಟಕದ ವಿವಿಧ ಭಾಗಗಳಿಗೆ ಪ್ರಸಾರಗೊಳ್ಳಲಿದೆ. ಮುಂದಿನ ಎ.17 ರಂದು ಕರಾವಳಿ ಸುದ್ದಿ ವಾರಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಯಾಗಲಿದೆ.