ಪುತ್ತೂರಿನ ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆ ತಂಗುವವರಿಗೆ ಇಫ್ತಾರ್ ಕಿಟ್, ಸಹರಿ ವ್ಯವಸ್ಥೆ-8 ವರ್ಷಗಳಿಂದ ಇ-ಫೌಂಡೇಶನ್‌ನಿಂದ ಮಾದರಿ ಸೇವೆ

0


ಬರಹ: ಯೂಸುಫ್ ರೆಂಜಲಾಡಿ


ಕಳೆದ 8 ವರ್ಷಗಳಿಂದ ಪುತ್ತೂರು ತಾಲೂಕು ಕೇಂದ್ರೀಕರಿಸಿ ಹಲವಾರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇ-ಫೌಂಡೇಶನ್ ಇಂಡಿಯಾ (ಇ-ಫ್ರೆಂಡ್ಸ್) ಪುತ್ತೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆ ತಂಗುವ ಉಪವಾಸ ನಿರತರಿಗೆ ರಂಜಾನ್ ತಿಂಗಳಲ್ಲಿ ಇಫ್ತಾರ್ ಕಿಟ್ ಮತ್ತು ಸಹರಿ ಕಿಟ್ ವಿತರಣೆ ಪ್ರತಿ ದಿನ ನಡೆಸುವ ಮೂಲಕ ಮಾದರಿಯಾಗಿದೆ. 30 ದಿನಗಳ ವರೆಗೂ ಈ ಸೇವೆ ನಿರಂತರವಾಗಿ ನಡೆಯುತ್ತಿದೆ. ಪ್ರತಿ ವರ್ಷವೂ ನಡೆಸುವ ಈ ಕಾರ್ಯವನ್ನು ದಾನಿಗಳ ಸಹಕಾರದೊಂದಿಗೆ ಇ-ಫೌಂಡೇಶನ್ (ಇ-ಫ್ರೆಂಡ್ಸ್) ನಡೆಸಿಕೊಂಡು ಬರುತ್ತಿದೆ. ಕೊರೋನಾ ಸಂದರ್ಭದಲ್ಲೂ ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಇ-ಫೌಂಡೇಶನ್ ಗಮನ ಸೆಳೆದಿತ್ತು.

ಆಹಾರ ಸಮಸ್ಯೆ ನೀಗಿಸುತ್ತಿರುವ ಸಂಸ್ಥೆ:
ವಿವಿಧ ಕಡೆಗಳಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಹಾರದ ಸಮಸ್ಯೆ ಎದುರಾಗುತ್ತದೆ. ರಂಜಾನ್ ಎಂದ ಮೇಲೆ ಮುಸಲ್ಮಾನ ಬಾಂಧವರಿಗೆ ಆಸ್ಪತ್ರೆಗಳಲ್ಲಿ ಆಹಾರ ಸಮಸ್ಯೆ ಇದ್ದೇ ಇರುತ್ತದೆ. ಪುತ್ತೂರಿನ ಆಸ್ಪತ್ರೆಗಳಲ್ಲಿ ರೋಗಿಗಳು, ಗರ್ಭಿಣಿಯರು ದಾಖಲಾಗುವಾಗ ಅವರ ಜೊತೆ ಮನೆಯವರು ಅನಿವಾರ್ಯವಾಗಿ ಇರಬೇಕಾಗುತ್ತದೆ. ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳ ರೋಗಿಗಳು ಆಸ್ಪತ್ರೆಗಳಲ್ಲಿ ದಾಖಲಾದರೆ ಅವರ ಜೊತೆ ತಂಗುವವರಿಗೆ ಇಫ್ತಾರ್, ಸಹರಿ ಸಮಸ್ಯೆ ಸಹಜವಾಗಿ ಎದುರಾಗುತ್ತದೆ. ಇಂತಹ ಅನೇಕ ಸನ್ನಿವೇಶಗಳನ್ನು ಮನಗಂಡ ಇ-ಫೌಂಡೇಶನ್ ಇಂಡಿಯಾ (ಇ-ಫ್ರೆಂಡ್ಸ್) ಕಳೆದ 8 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನಿರಂತರವಾಗಿ ಈ ಸೇವೆಯನ್ನು ಮಾಡುತ್ತಾ ಬಂದಿದೆ.

ಆಸ್ಪತ್ರೆಗೆ ಭೇಟಿ ನೀಡಿ ಪಟ್ಟಿ ತಯಾರಿ:
ಇ-ಫೌಂಡೇಶನ್‌ನ ಸದಸ್ಯರು ರಂಜಾನ್‌ನಲ್ಲಿ ಪ್ರತಿದಿನ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಪುತ್ತೂರು ಸರಕಾರಿ ಆಸ್ಪತ್ರೆ ಸೇರಿದಂತೆ ಒಟ್ಟು 12 ಆಸ್ಪತ್ರೆಗಳಿಗೆ ಭೇಟಿ ನೀಡಿ (ಆಸ್ಪತ್ರೆಯ ಆಡಳಿತ ಮಂಡಳಿ ಅನುಮತಿಯೊಂದಿಗೆ) ಅಲ್ಲಿರುವ ಮುಸ್ಲಿಂ ರೋಗಿಗಳ ರೂಮ್ ಮತ್ತು ವಾರ್ಡ್‌ಗಳನ್ನು ಸಂಪರ್ಕಿಸಿ ಇಫ್ತಾರ್ ವ್ಯವಸ್ಥೆ ಇಲ್ಲದವರ ಪಟ್ಟಿ ಸಿದ್ದಪಡಿಸುತ್ತಾರೆ. ನಂತರ ಇಫ್ತಾರ್‌ಗೆ ಬೇಕಾಗುವ ಆಹಾರ ತಯಾರಿ ನಡೆಸಲಾಗುತ್ತದೆ. ಸಂಜೆ 6.00 ಗಂಟೆಗೆ ಉಪವಾಸಿಗರಿಗೆ ಆಯಾ ಆಸ್ಪತ್ರೆಗಳಿಗೆ ತೆರಳಿ ಇಫ್ತಾರ್ ಕಿಟ್ ತಲುಪಿಸಲಾಗುತ್ತದೆ. ಅದೇ ವೇಳೆ ಸಹರಿ ವ್ಯವಸ್ಥೆ ಇಲ್ಲದವರ ಪಟ್ಟಿ ಮಾಡಿ ನಂತರ ಸಹರಿ ಕಿಟ್‌ನ್ನು ರಾತ್ರಿ 9.45ಕ್ಕೆ ಎಲ್ಲಾ ಆಸ್ಪತ್ರೆಯಲ್ಲಿರುವ ವಾರ್ಡ್ ಮತ್ತು ರೂಂಗೆ ತಲುಪಿಸಲಾಗುತ್ತದೆ.

ಕಿಟ್‌ನಲ್ಲಿ ಏನೇನಿದೆ ಗೊತ್ತಾ..?
ಇಫ್ತಾರ್ ಕಿಟ್‌ನಲ್ಲಿ ಫ್ರೆಶ್ ಜ್ಯೂಸ್, ಬಾಟಲ್ ನೀರು, ಸಮೋಸ, ಖರ್ಜೂರ, ನಾಲ್ಕು ಬಗೆಯ ಫ್ರೂಟ್ಸ್, 5 ಪತ್ತಿರ್ (ರೊಟ್ಟಿ) ಮತ್ತು ಚಿಕನ್ ಸುಕ್ಕ ನೀಡಲಾಗುತ್ತದೆ. ಸಹರಿ ಕಿಟ್‌ನಲ್ಲಿ ಊಟ, ಬೇಳೆ ಸಾರು, ಪಲ್ಯ ಮತ್ತು ಉಪ್ಪಿನಕಾಯಿ ನೀಡಲಾಗುತ್ತದೆ. ಪ್ರತೀ ದಿನ 100ಕ್ಕೂ ಅಧಿಕ ಇಫ್ತಾರ್ ಮತ್ತು ಸಹರಿ ಕಿಟ್‌ನ್ನು ವಿತರಿಸಲಾಗುತ್ತದೆ.

4 ಲಕ್ಷ ರೂ ಖರ್ಚು:
ಇ-ಫೌಂಡೇಶನ್ ಇಂಡಿಯಾ ವತಿಯಿಂದ ರಂಜಾನ್ ತಿಂಗಳಿನಲ್ಲಿ ಆಸ್ಪತ್ರೆಗಳಿಗೆ ಇಫ್ತಾರ್ ಮತ್ತು ಸಹರಿ ವ್ಯವಸ್ಥೆ ಯೋಜನೆ ಎಂಟು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಈ ಯೋಜನೆಗೆ ದಿನವೊಂದಕ್ಕೆ ರೂ.13 ಸಾವಿರ ಖರ್ಚು ತಗಲುತ್ತಿದ್ದು ತಿಂಗಳಿಗೆ ಅಂದಾಜು 4 ಲಕ್ಷ ರೂ ಖರ್ಚು ತಗಲುತ್ತಿದೆ. ಅದಲ್ಲದೆ ವರ್ಷಕ್ಕೆ ಹಲವಾರು ಜನಪರ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು ಬಡವರು, ನಿರ್ಗತಿಕರು, ಅನಾಥರಿಗೆ ನಮ್ಮ ಸಂಸ್ಥೆ ಸ್ಪಂಧಿಸುತ್ತಿದೆ. ನಮ್ಮ ಈ ಕಾರ್ಯಕ್ಕೆ ದಾನಿಗಳು ಕೈಜೋಡಿಸಿ ಸಹಕಾರ ನೀಡಬೇಕಾಗಿ ವಿನಂತಿ.
ಆರಿಫ್ ಸಾಲ್ಮರ, ಅಧ್ಯಕ್ಷರು ಇ-ಫೌಂಡೇಶನ್ ಇಂಡಿಯಾ

ಸದಸ್ಯರಿಂದ ಸಕ್ರಿಯ ಸೇವೆ:
ರಂಜಾನ್ ತಿಂಗಳ ಮೂವತ್ತು ದಿನ ನಮ್ಮ ಸಂಸ್ಥೆಯ ವತಿಯಿಂದ ಆಸ್ಪತ್ರೆಗಳಲ್ಲಿ ರೋಗಿಗಳ ಜೊತೆ ತಂಗುವವರಿಗೆ ಇಫ್ತಾರ್ ಮತ್ತು ಸಹರಿ ವ್ಯವಸ್ಥೆ ಮಾಡುತ್ತಿದ್ದು ಬೆಳಗ್ಗಿನಿಂದಲೇ ಇದರ ಕಾರ್ಯ ಚಟುವಟಿಕೆಯಲ್ಲಿ ಸಂಸ್ಥೆಯ ಸದಸ್ಯರು ತೊಡಗಿಸಿಕೊಳ್ಳುತ್ತಾರೆ. ಆಸ್ಪತ್ರೆಗಳಿಗೆ ತೆರಳಿ ಸರಿಯಾದ ಅಂಕಿ ಅಂಶ ತೆಗೆದು ಸಮಯಕ್ಕೆ ಸರಿಯಾಗಿ ಆಹಾರ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಸಿಗುತ್ತಿದೆ.
-ನೌಶಾದ್ ಕೂರ್ನಡ್ಕ, ಪ್ರ.ಕಾರ್ಯದರ್ಶ ಇ-ಫೌಂಡೇಶನ್ ಇಂಡಿಯಾ

ಸೇವೆಗಾಗಿ ಸಮಯ ಮೀಸಲಿಡುವ ಸದಸ್ಯರು:
ಇಫ್ತಾರ್ ಮತ್ತು ಸಹರಿ ಕಿಟ್ ತಯಾರಿಸಲು ಸಾಕಷ್ಟು ಪೂರ್ವ ಸಿದ್ದತೆ, ಪರಿಶ್ರಮ ಇದೆ. ಆದರೂ ಸಂಸ್ಥೆಯ ಸದಸ್ಯರು ತಮ್ಮ ವ್ಯಾಪಾರ, ಉದ್ಯೋಗ ಎಲ್ಲವನ್ನು ಒಂದಿಷ್ಟು ಸಮಯ ಬದಿಗಿಟ್ಟು ಈ ಸೇವೆಗಾಗಿ ಸಮಯ ಕೊಡುತ್ತಿರುವುದು ವಿಶೇಷವಾಗಿದ್ದು ಹಲವರು ಇವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here