ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಮಾರ್ಟ್ ಬೋರ್ಡ್ ಅನಾವರಣ

0

ಆಧುನಿಕ ಪರಿಕರಗಳ ಸದ್ಬಳಕೆಗಳಾದಾಗ ಕಲಿಕಾ ಸಾಮರ್ಥ್ಯ ವೃದ್ಧಿ : ಅಭಿಲಾಷ್


ಪುತ್ತೂರು: ಸ್ಮಾರ್ಟ್ ಬೋರ್ಡ್‌ಗಳ ಮೂಲಕ ತರಗತಿಗಳು ನಡೆದಾಗ ದೃಶ್ಯ ಮಾಧ್ಯಮದೊಂದಿಗೆ ವಿದ್ಯಾರ್ಥಿಗಳು ವಿಷಯಗಳನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಬಹುದು. ತನ್ಮೂಲಕ ಜ್ಞಾನ ವೃದ್ಧಿಯ ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಕಲಿಕಾ ಕ್ಷೇತ್ರದಲ್ಲಿ ಪರಿಣತಿ ಪಡೆದು ಯಶಸ್ಸು ಪಡೆಯಬಹುದು ಎಂದು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಅಭಿಲಾಷ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಸುಮಾರು ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಅಳವಡಿಸಲಾಗಿರುವ ಇಂಟರ್‍ಯಾಕ್ಟಿವ್ ಸ್ಮಾರ್ಟ್ ಬೋರ್ಡ್ ಅನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.


ದಶಕದ ಹಿಂದಿನವರೆಗೂ ಶಾಲಾ ಕಾಲೇಜುಗಳಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಬೋರ್ಡ್‌ನಂತಹ ಸಾಧ್ಯತೆಗಳು ಇರುತ್ತಿರಲಿಲ್ಲ. ಆದರೆ ಈಗಿನ ವಿದ್ಯಾರ್ಥಿಗಳಿಗೆ ಆಧುನಿಕ ಉಪಕರಣಗಳ ಮೂಲಕ ಸೊಗಸಾದಪಾಠ ಪ್ರವಚನಗಳು ದೊರಕುವಂತಾಗಿವೆ. ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಬೆಳೆಯುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರಲ್ಲದೆ ನಿರಂತರ ಶ್ರಮವಹಿಸಿದರೆ ಪ್ರತಿಯೊಬ್ಬನೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡು ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಳ್ಳಬಹುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳು ಪದವಿ ಹಂತ ದಾಟುವ ಮೊದಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕಲೆ ಕರಗತ ಮಾಡಿಕೊಳ್ಳಬೇಕು. ಅದಕ್ಕಾಗಿ ಹೆಚ್ಚಿನ ಪಠ್ಯ ಸಾಧ್ಯತೆಗಳು ವಿದ್ಯಾಥಿಗಳಿಗೆ ದೊರಕಬೇಕು. ಆ ನಿಟ್ಟಿನಲ್ಲಿ ಅಂಬಿಕಾ ಮಹಾವಿದ್ಯಾಲಯದಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಸುವ ಕಾರ್ಯ ನಡೆದಿದೆ. ಕಲಿಕೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಸಂಸ್ಥೆಯ ಗುರಿ. ಆಧುನಿಕತೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರೂ ತೆರೆದುಕೊಂಡು ಕಾರ್ಯನಿರ್ವಹಿಸಿದಾಗ ಪ್ರಯೋಜನ ದೊರಕುವುದಕ್ಕೆ ಸಾಧ್ಯ ಎಂದರು.


ತಂತ್ರಜ್ಞಾನ ಇದೆ ಎಂದ ಮಾತ್ರಕ್ಕೆ ಶಿಕ್ಷಕರೆಲ್ಲ ಅದನ್ನೇ ನಂಬಿಕೂರುವುದೂ ಸರಿಯಾದ ಕ್ರಮವಲ್ಲ. ಅದು ಕಾರ್ಯನಿರ್ವಹಿಸದಿದ್ದರೂ ತರಗತಿ ನಡೆಸಲು ಬೇಕಿರುವ ಗತ್ಯ ಪರಿಕರಗಳು ಮಸ್ತಕದಲ್ಲಿರಬೇಕಾಗುತ್ತದೆ. ಹಿಂದೆ ಯಾವುದೇ ತಂತ್ರಜ್ಞಾನ ಇಲ್ಲದ ಕಾಲದಲ್ಲಿಯೂ ಋಷಿಮುನಿಗಳು ಹಲವಾರು ವಿಚಾರಗಳನ್ನು ಅರಿತುಕೊಂಡು, ತಾಳೆಗರಿಗಳಲ್ಲಿ ಕೆತ್ತುವ ಮೂಲಕ ವಿಚಾರಗಳು ಶಾಶ್ವತವಾಗಿ ಉಳಿಯುವಂತೆ ಮಾಡುತ್ತಿದ್ದರು. ಆಧುನಿಕ ಜಗತ್ತಿಗೆ ತಿಳಿಯದ ಅದೆಷ್ಟೋ ವಿಚಾರಗಳನ್ನು ಅವರು ಅರಿತುಕೊಂಡಿದ್ದರು ಎಂಬುದನ್ನೂ ನಾವು ಗಮನದಲ್ಲಿರಿಸಿಕೊಳ್ಳಬೇಕು ಎಂದು ನುಡಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಹಿಮಾ ಹೆಗಡೆ ಹಾಗೂ ಅಂಕಿತಾ ಪ್ರಾರ್ಥಿಸಿದರು. ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ವಂದಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ. ನಿರೂಪಿಸಿದರು.

LEAVE A REPLY

Please enter your comment!
Please enter your name here