ಪುತ್ತೂರು:ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕೊನೆಗೂ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡರಿಗೆ ಅವಕಾಶ ನೀಡಲಾಗಿದೆ.ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಈ ಬಾರಿ ಅವಕಾಶ ನಿರಾಕರಣೆಯಾಗಿದೆ.ಸುಳ್ಯ ಕ್ಷೇತ್ರದಿಂದ ಹಾಲಿ ಶಾಸಕ, ಸಚಿವರೂ ಆಗಿರುವ ಎಸ್.ಅಂಗಾರ ಅವರನ್ನು ಕೈಬಿಟ್ಟು ಮಾಜಿ ಜಿ.ಪಂ.ಸದಸ್ಯೆ ಭಾಗೀರಥಿ ಮುರುಳ್ಯ ಅವರಿಗೆ ಅವಕಾಶ ನೀಡಲಾಗಿದೆ.ಬಂಟ್ವಾಳದಿಂದ ಹಾಲಿ ಶಾಸಕ ರಾಜೇಶ್ ನಾಕ್ ಮತ್ತು ಬೆಳ್ತಂಗಡಿಯಿಂದ ಹಾಲಿ ಶಾಸಕ, ಪುತ್ತೂರು ಮೂಲದ ಹರೀಶ್ ಪೂಂಜ ಅವರಿಗೇ ಮತ್ತೆ ಅವಕಾಶ ನೀಡಲಾಗಿದೆ.ಏ.11ರಂದು ರಾತ್ರಿ ದೆಹಲಿಯಲ್ಲಿ ಪಟ್ಟಿ ಬಿಡುಗಡೆ ಮಾಡಲಾಗಿದೆ.ಮೊದಲ ಹಂತದಲ್ಲಿ ೧೮೯ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.ಪುತ್ತೂರು, ಸುಳ್ಯ ಸೇರಿದಂತೆ ಮೊದಲ ಪಟ್ಟಿಯಲ್ಲಿ 8 ಜನ ಮಹಿಳೆಯರಿಗೆ ಅವಕಾಶ ನೀಡಲಾಗಿದೆ.
ರಾಜ್ಯದ ಗಮನ ಸೆಳೆದಿದ್ದ ಪುತ್ತೂರುಗೆ ಆಶಾ ತಿಮ್ಮಪ್ಪ:
ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸ್ಥಾನಕ್ಕೆ ಹಲವು ಪ್ರಮುಖರ ಹೆಸರು ಕೇಳಿ ಬರುತ್ತಿದ್ದುದರಿಂದ ಮತ್ತು ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಘ ಪರಿವಾರದ ನಾಯಕರು ಅಭ್ಯರ್ಥಿತನಕ್ಕೆ ಆರಂಭದಲ್ಲಿ ಬೇರೆ ಬೇರೆ ಪ್ರಮುಖರ ಪರ ಒಲವು ವ್ಯಕ್ತಪಡಿಸಿದ್ದರಿಂದ ಪುತ್ತೂರು ರಾಜ್ಯವ್ಯಾಪಿ ಗಮನ ಸೆಳೆದಿತ್ತು.
ಹಾಲಿ ಶಾಸಕ, ಪ್ರಬಲ ಗೌಡ ಸಮುದಾಯಕ್ಕೆ ಸೇರಿರುವ ಸಂಜೀವ ಮಠಂದೂರು ಅವರ ಹೆಸರು ಆರಂಭದಲ್ಲಿ ಪ್ರಮುಖವಾಗಿ ಇಲ್ಲಿ ಕೇಳಿ ಬರುತ್ತಿತ್ತಾದರೂ ಬರಬರುತ್ತಾ ದಿನಕ್ಕೊಬ್ಬರಂತೆ ಬೇರೆಯವರ ಹೆಸರುಗಳು ಕೇಳಿ ಬರುತ್ತಿದ್ದವು.ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಹಲವು ಮಂದಿ ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ನೀಡದಿರಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದು ಪುತ್ತೂರು, ಸುಳ್ಯದಲ್ಲಿ ಹಾಲಿ ಶಾಸಕರನ್ನು ಕೈಬಿಡಲಾಗುತ್ತಿದೆ ಎಂದು ಪ್ರಚಾರವಾದ ಬಳಿಕ ಪುತ್ತೂರುನಿಂದ ಸಂಜೀವ ಮಠಂದೂರು ಬದಲಿಗೆ ಆಶಾ ತಿಮ್ಮಪ್ಪ ಗೌಡ, ಅರುಣ್ ಕುಮಾರ್ ಪುತ್ತಿಲ, ಹರೀಶ್ ಕಂಜಿಪಿಲಿ, ಚನಿಲ ತಿಮ್ಮಪ್ಪ ಶೆಟ್ಟಿ, ಯತೀಶ್ ಗೌಡ ಆರ್‍ವಾರ, ಕಿಶೋರ್ ಕುಮಾರ್ ಬೊಟ್ಯಾಡಿ, ಪಿ.ಜಿ.ಜಗನ್ನಿವಾಸ್ ರಾವ್ ಸೇರಿದಂತೆ ಹಲವು ಪ್ರಮುಖರ ಹೆಸರುಗಳು ಕೇಳಿ ಬರುತ್ತಿದ್ದವು.ಅಂತಿಮವಾಗಿ ಆಶಾ ತಿಮ್ಮಪ್ಪ ಗೌಡ, ಹರೀಶ್ ಕಂಜಿಪಿಲಿ, ಅರುಣ್ ಕುಮಾರ್ ಪುತ್ತಿಲ ಅವರ ಹೆಸರು ರೇಸ್‌ನಲ್ಲಿತ್ತು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಶಾ ತಿಮ್ಮಪ್ಪ ಗೌಡ ಇಲ್ಲವೇ ಹರೀಶ್ ಕಂಜಿಪಿಲಿಯವರ ಪರ ಒಲವು ತೋರಿದ್ದರೆ ಬಿ.ಎಸ್. ಯಡಿಯೂರಪ್ಪ ಅವರು ಅರುಣ್ ಕುಮಾರ್ ಪುತ್ತಿಲ ಅವರ ಪರ ಬ್ಯಾಟಿಂಗ್ ಮಾಡಿದ್ದರು ಎಂದು ಹೇಳಲಾಗಿತ್ತು. ಇದೀಗ ಕೊನೆಗೂ ಪುತ್ತೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ ಗೌಡ ಅವರನ್ನು ಆಯ್ಕೆ ಮಾಡುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.
ಆಶಾ ತಿಮ್ಮಪ್ಪ ಗೌಡರ ಪರಿಚಯ:
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿರುವ ಆಶಾ ತಿಮ್ಮಪ್ಪ ಗೌಡರವರು ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.ನೆಲ್ಯಾಡಿ,ಬೆಳ್ಳಾರೆ,ಗುತ್ತಿಗಾರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಂದ ಬೇರೆಬೇರೆ ಅವಧಿಗಳಲ್ಲಿ ಸದಸ್ಯರಾಗಿ ಚುನಾಯಿತರಾಗಿದ್ದ ಆಶಾ ತಿಮ್ಮಪ್ಪ ಗೌಡ ಅವರು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪುತ್ತೂರು ತಾಲೂಕು ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆಯಾಗಿಯೂ ಕಾರ್‍ಯನಿರ್ವಹಿಸಿದ್ದ ಇವರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರೂ ಆಗಿದ್ದಾರೆ. ಮೂಲತಹ ಸುಳ್ಯದವರಾಗಿದ್ದು ಪ್ರಸ್ತುತ ಕುಂತೂರು ಗ್ರಾಮದ ಕುಂಡಡ್ಕದಲ್ಲಿ ನೆಲೆಸಿರುವ ಇವರು ಪ್ರಗತಿಪರ ಕೃಷಿಕ ಕುಂಡಡ್ಕದ ತಿಮ್ಮಪ್ಪ ಗೌಡರ ಪತ್ನಿ.
ಸುಳ್ಯದಿಂದ ಭಾಗೀರಥಿ:
ಕಡಬ ತಾಲೂಕಿನ 46 ಗ್ರಾಮಗಳನ್ನೂ ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜಾಲ್ಸೂರು ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಭಾಗೀರಥಿ ಮುರುಳ್ಯ ಅವರಿಗೆ ಅವಕಾಶ ನೀಡಲಾಗಿದೆ.ಈ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದು ಶಾಸಕರಾಗಿ,ಪ್ರಸ್ತುತ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿರುವ ಎಸ್.ಅಂಗಾರ ಅವರಿಗೆ ಈ ಬಾರಿ ಅವಕಾಶ ನಿರಾಕರಿಸಿ ಭಾಗೀರಥಿಯವರಿಗೆ ಅವಕಾಶ ನೀಡಲಾಗಿದೆ.ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಭಾಗೀರಥಿಯವರ ಅವಧಿಯಲ್ಲಿ ಸುಳ್ಯದಲ್ಲಿ ರಾಜ್ಯ ಮಟ್ಟದ ಯುವಜನ ಮೇಳ ಯಶಸ್ವಿಯಾಗಿ ನಡೆದಿತ್ತು.ಇವರು ಅವಿವಾಹಿತರಾಗಿದ್ದಾರೆ.
ಬೆಳ್ತಂಗಡಿಯಿಂದ ಹರೀಶ್ ಪೂಂಜ, ಬಂಟ್ವಾಳದಿಂದ ರಾಜೇಶ್ ನಾಕ್
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕರಾಗಿರುವ ಪುತ್ತೂರು ಮೂಲದ ಹರೀಶ್ ಪೂಂಜ ಹಾಗೂ ಬಂಟ್ವಾಳದಿಂದ ಹಾಲಿ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ.ಜಿಲ್ಲೆಯಲ್ಲಿ ಉಳಿದಂತೆ ಮಂಗಳೂರು ನಗರ ಉತ್ತರದಿಂದ ವೈ.ಭರತ್ ಶೆಟ್ಟಿ, ಮಂಗಳೂರು ನಗರ ದಕ್ಷಿಣದಿಂದ ವೇದವ್ಯಾಸ ಕಾಮತ್, ಮೂಡಬಿದ್ರೆಯಿಂದ ಉಮಾನಾಥ್ ಕೋಟ್ಯಾನ್ ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ.ಮಂಗಳೂರುನಿಂದ ಸತೀಶ್ ಕುಂಪಳ ಅವರಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ ಟಿಕೇಟ್ ಅವಕಾಶ ವಂಚಿತ ರಾಗಿರುವ ಶಾಸಕ ಸಂಜೀವ ಮಠಂದೂರು, ಸಚಿವ ಎಸ್.ಅಂಗಾರ