ಪ್ರತಿಭಾರಂಗ

0

ಕಲಾರಂಗ :
ಪುತ್ತೂರು ಕಲಾವಿದರ ಊರು. ಹಿರಿಯ-ಕಿರಿಯರಾದಿಯಾಗಿ ಸಂಗೀತ, ಚಿತ್ರ, ನಾಟಕ, ಸಿನಿಮಾ, ಯಕ್ಷಗಾನ, ಇತ್ಯಾದಿ ಕ್ಷೇತ್ರಗಳಲ್ಲಿ ಬೆಳಗುತ್ತಿರುವ ಸಹಸ್ರಾರು ಕಲಾವಿದರನ್ನು ನಾವು ದಿನ ಬೆಳಗಾದರೆ ಗಮನಿಸಬಹುದು. ಅಂಥ ಕಲಾವಿದರಲ್ಲಿ ಬಹುಮುಖ ಪ್ರತಿಭೆಯ ಯುವ ಕಲಾವಿದೆ ಕು.ದೀಪಶ್ರೀ ಒಬ್ಬರು.
ಮೂಲತ: ಮಂಗಳೂರಿನವರಾದ ಕು.ದೀಪಶ್ರೀ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ವರ್ಷದ ವಿದ್ಯಾರ್ಥಿನಿ. ನವೀನ್ ಕುಮಾರ್ ಆಚಾರ್ಯ, ಶ್ರೀಮತಿ ಶ್ವೇತಾ ನವೀನ್ ಕುಮಾರ್ ಆಚಾರ್ಯ ಅವರ ಪ್ರತಿಭಾರತ್ನ. ಮಂಗಳೂರು, ಬೆಟ್ಟಂಪಾಡಿಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರೈಸಿರುವ ಇವರು ಪ್ರಕೃತ ಪುತ್ತೂರಿನಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸುತ್ತಿರುವರು. ಕು.ದೀಪಶ್ರೀಯವರು ಚಿತ್ರಕಲೆ, ಮಂಡಲ ಆರ್ಟ್, ಕ್ರಾಫ್ಟ್, ಸಾಹಿತ್ಯ-ಕವನ ರಚನೆ, ಹೊಲಿಗೆ, ನೃತ್ಯ, ಸಂಗೀತ ಇತ್ಯಾದಿಗಳಲ್ಲಿ ಪರಿಣತರು. ಇತ್ತೀಚೆಗೆ ಬಾಲವನದಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿ ತನ್ನ ಕಲಾಪ್ರದರ್ಶನದ ಮೂಲಕ ಸಾವಿರಾರು ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸಿದ ಕಲಾವಿದೆ. ೧೫೦ಕ್ಕೂ ಹೆಚ್ಚಿನ ಕಲಾಪ್ರದರ್ಶನ ನೀಡಿದ ದಾಖಲೆ ಇವರದು.
ಸಾಮಾಜಿಕ ಜಾಲತಾಣವನ್ನು ಹೇಗೆ ಶೈಕ್ಷಣಿಕವಾಗಿ ಬಳಸಿಕೊಳ್ಳಬಹುದು?ಎಂಬ ವಿಚಾರದ ಬಗ್ಗೆ ತನ್ನ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ, ತನ್ನ ಶಿಕ್ಷಣ ಕಲೆ ಸಾಹಿತ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದ ಸೋದರಮಾವ, ಬೆಟ್ಟಂಪಾಡಿ ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕರಾಗಿದ್ದ, ಕಲಾವಿದ, ಸುದ್ದಿ ಬಿಡುಗಡೆ ಬಳಗದ ಬರಹಗಾರ, ಕೀ.ಶೇ ಮಹೇಶ ಆಚಾರ್ಯರನ್ನು ಸದಾ ಸ್ಮರಿಸುವ ಕು.ದೀಪಶ್ರೀಯವರ ಬಂಧು ಪ್ರೇಮ ಅನನ್ಯ. ತನ್ನ ತಾಯಿ-ತಂದೆ, ಬಂಧು-ಬಳಗವನ್ನು ಸ್ಮರಿಸಿ, ಕಲೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಶೈಕ್ಷಣಿಕ ಸಾಧನೆ ಮಾಡುತ್ತಿರುವ, ಅನೇಕ ಬಹುಮಾನ ಪುರಸ್ಕಾರಗಳಿಗೆ ಪಾತ್ರರಾಗಿರುವ ಯುವ ಕಲಾ ಪ್ರತಿಭೆ ಕು.ದೀಪಶ್ರೀಯವರಿಗೆ ಪ್ರತಿಭಾರಂಗದ ಅಭಿನಂದನೆಗಳು.

ಪ್ರತಿಭಾ ಶಿಲ್ಪ:
ನಮ್ಮ ಮಕ್ಕಳು ನಮ್ಮ ನಾಡಿನ ಭವಿಷ್ಯ. ಅವರಲ್ಲಿ ಅಪ್ರತಿಮ ಪ್ರತಿಭೆಗಳು ಸುಪ್ತವಾಗಿರುತ್ತವೆ.ಅವುಗಳನ್ನು ಗುರುತಿಸಿ ಬೆಳಗಿಸುವ ಕಾರ್ಯ ಹೆತ್ತವರ, ಶಿಕ್ಷಕರ ಹಾಗೂ ಸಮಾಜದ ಕರ್ತವ್ಯವಾಗಿದೆ. ಪ್ರತಿಭಾ ಗಣಿಗಳ ನಡುವೆ ಇಲ್ಲೊಬ್ಬರು ಪ್ರತಿಭಾ-ಶಿಲ್ಪ ಇದ್ದಾರೆ. ಶತಮಾನಗಳ ಇತಿಹಾಸ ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಕು.ಶಿಲ್ಪ, ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ ಇತ್ಯಾದಿಗಳಿಗೆ ಹೆಸರು ಪಡೆದಿರುವ, ಪ್ರಕೃತಿ ರಮಣೀಯ,ಗಡಿನಾಡು ಪ್ರದೇಶ ಬೆಟ್ಟಂಪಾಡಿ ಬಿಲ್ವಗಿರಿಯ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ೯ನೇ ತರಗತಿಯಲ್ಲಿ ಕಲಿಯುತ್ತಿರುವ ಬಹುಮುಖ ಪ್ರತಿಭೆಗಳ ಸಂಗಮ.
ಮೂಲತ: ನಿಡ್ಪಳ್ಳಿ ಗ್ರಾಮದ ಡೊಂಬಟೆಬರಿಯ ಚನಿಯಪ್ಪ ಮತ್ತು ಶ್ರೀಮತಿ ಪ್ರೇಮ ಇವರ ಪುತ್ರಿ ಕು.ಶಿಲ್ಪ, ೨೦೨೩ರ ಜನವರಿ ೭ ಮತ್ತು ೮ರಂದು, ಪುತ್ತೂರು ಸುದ್ದಿ ಬಿಡುಗಡೆ ಮಾಹಿತಿ ಟ್ರಸ್ಟ್ (ರಿ)ನ ವತಿಯಿಂದ ಪುತ್ತೂರಿನ ಐತಿಹಾಸಿಕ ಕಿಲ್ಲೆ ಮೈದಾನದಲ್ಲಿ ಅದ್ದೂರಿಯಾಗಿ ಜರುಗಿದ ಸಸ್ಯ ಜಾತ್ರೆ-೨೩ರ `ನಾ ಕಂಡ ಸಸ್ಯ ಜಾತ್ರೆ’ ಕವನ ಸ್ಪರ್ಧೆ’ಯಲ್ಲಿ ಭಾಗವಹಿಸಿ – ದ್ವಿತೀಯ ಬಹುಮಾನವನ್ನು ಪಡೆದಿರುವ ಪ್ರತಿಭಾ-ಚಿಗುರು. ೮ ನೇ ತರಗತಿಯಲ್ಲಿರುವಾಗ ಇಲಾಖಾ ವತಿಯಿಂದ ನಡೆಸಿದ ರಾಷ್ಟ್ರಮಟ್ಟದ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ((MMS)ಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡು, ವರ್ಷಕ್ಕೆ ರೂ. ೧೨,೦೦೦/ ರಂತೆ ೪ ವರ್ಷಗಳ ಕಾಲ ಒಟ್ಟು ೪೮,೦೦೦ ರೂ. ವಿದ್ಯಾರ್ಥಿವೇತನ ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವತಿಯಿಂದ ನಡೆಸಿದ ಅಂತರ್ ಪ್ರೌಢಶಾಲಾ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವ ಕು.ಶಿಲ್ಪಾ, ಗ್ರಾಮೀಣ ವಿಜ್ಞಾನ ಮೇಳ, ಎಳೆಯರ ರಾಮಾಯಣ ಪರೀಕ್ಷೆಯಲ್ಲಿ ಉತ್ತಮ ಸಾಧನೆ,ಪ್ರತಿಭಾ ಕಾರಂಜಿ, ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇದರ ವತಿಯಿಂದ ನಡೆದ ಮೌಲ್ಯಾಧಾರಿತ ಪುಸ್ತಕಗಳ ಭಾಷಣ ಸ್ಪರ್ಧೆ,ಮಕ್ಕಳ ಗ್ರಾಮ ಸಭೆ, ದೇಶಭಕ್ತಿ ಗೀತೆ ಸ್ಪರ್ಧೆ ಹೀಗೇ ಹತ್ತು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಈಕೆಯ ಇತರ ಹವ್ಯಾಸಗಳೆಂದರೆ.. ಕಥೆ,ಮಹಾತ್ಮರ ಜೀವನ ಚರಿತ್ರೆ ಓದುವುದು,ಕಥೆ-ಕವನ ಬರೆಯುವುದು, ಕ್ರಾಫ್ಟ್,ಚಿತ್ರ ರಚನೆ, ಭಾಷಣ ,ಹಾಡು ಇತ್ಯಾದಿ. ಇತ್ತೀಚೆಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು, ಗ್ರಾಮ ಪಂಚಾಯತ್ ಕಬಕ, ಇವರ ಸಹಕಾರದೊಂದಿಗೆ ಕೇಂದ್ರ ಸಾಹಿತ್ಯ ವೇದಿಕೆ ಪುತ್ತೂರು ಘಟಕ ಸಂಯೋಜನೆಯಲ್ಲಿ, ಮಿತ್ರಂಪಾಡಿ ಜಯರಾಮ ರೈ ಅಬುಧಾಬಿಯವರ ಮಹಾ ಪೋಷಕತ್ವದಲ್ಲಿ ಜರುಗಿದ ೯ರಿಂದ ೧೨ನೇ ತರಗತಿ ವಿಭಾಗದ ಯುಗಾದಿ ಕವನ ರಚನಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಗ್ರಾಮೀಣ ಪ್ರತಿಭೆ.
ಮುಂದೆ ಅಭ್ಯಾಸ ಮಾಡಿ, ಉತ್ತಮ ಅಂಕಗಳೊಂದಿಗೆ ಇಂಜಿನಿಯರಿಂಗ್ ಪದವಿ ಪಡೆದು ಜೀವನ ಕಟ್ಟಿಕೊಳ್ಳಬೇಕೆಂಬ ಆಶಯ ಹೊಂದಿರುವ ಕು.ಶಿಲ್ಪಾರ ಭವಿಷ್ಯದೊಂದಿಗೆ ,ಶಾಲಾ ಮುಖ್ಯ ಗುರು ಶ್ರೀಮತಿ ಪುಷ್ಪಾವತಿ ಎಸ್, ಮಾರ್ಗದರ್ಶನ ನೀಡುತ್ತಿರುವ ವಿಜ್ಞಾನ ಶಿಕ್ಷಕಿ ಶ್ರೀಮತಿ ಭುವನೇಶ್ವರಿ ಎಂ,ಹಾಗೂ ಎಲ್ಲಾ ಅಧ್ಯಾಪಕರ ಪ್ರೋತ್ಸಾಹವಿದೆ. ಕು.ಶಿಲ್ಪಾರ ಕನಸು ನನಸಾಗಲಿ, ಬದುಕು ಬೆಳಗಲಿ ಎಂಬುದೇ ಪ್ರತಿಭಾರಂಗದ ಆಶಯ.

ವಿಚಾರ ರಂಗ
ಕ್ರಿ.ಶಕ ೧೧-೧೨ನೇ ಶತಮಾನದಷ್ಟು ಪ್ರಾಚೀನ ಇತಿಹಾಸಹೊಂದಿರುವ ಪುತ್ತೂರು ಸೀಮಾಧಿಪತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ದೇವಾಲಯದ ಪೂರ್ವದಿಕ್ಕಿಗೆ ದೇವರಮಾರು ಗದ್ದೆ, ಪಶ್ಚಿಮ ದಿಕ್ಕಿಗೆ ಪವಿತ್ರ ಮುತ್ತು ಬೆಳೆದ ಪುಷ್ಕರಣಿಯಿದೆ. ಪುನರ್ ನಿರ್ಮಾಣದ ವೇಳೆ ಹಲವು ವಿಸ್ಮಯಗಳಿಗೆ ಕಾರಣವಾದ ಈ ಪವಿತ್ರ ದೇಗುಲದ ಮಧ್ಯೆ ಇರುವ ಕಟ್ಟೆಯ ಕೆಳಭಾಗದ ವರುಣ ದೇವರ ವಿಗ್ರಹದ ಬಳಿ ಭೂಗರ್ಭದಲ್ಲಿ ನೀಲಿ ಮತ್ತು ಬಿಳಿ ಮಿಶ್ರಿತ ಹುಡಿಮಣ್ಣಿನೊಂದಿಗೆ ಅಂಟಿಕೊಂಡಿರುವುದು ೩೫ವರ್ಷಗಳ ನಂತರ ಬೆಳಕಿಗೆ ಬಂದಿದೆ ಎಂದು ಹೇಳುತ್ತಾರೆ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ ಮುಳಿಯ ಮತ್ತು ವಾಸ್ತು ಇಂಜಿನಿಯರ್ ಪಿ.ಜಿ ಜಗನ್ನಿವಾಸ ರಾವ್ ಪುತ್ತೂರು. ಪುಷ್ಕರಣಿಯ ಮಧ್ಯೆ ಇರುವ ಕಟ್ಟೆಯ ಪುನರ್ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಚತುರ್ಭುಜನಾದ ವರುಣದೇವರ ವಿಗ್ರಹ ದರುಶನ ನೀಡಿದೆ.

ಕಾವ್ಯರಂಗ :
ನಮ್ಮೂರ ಜಾತ್ರೆ.
ಬನ್ನಿರಿಬನ್ನಿರಿ
ನಮ್ಮೂರ ಜಾತ್ರೆಗೆ../
ಹತ್ತೂರ ಕೊಟ್ಟರೂ..
ಪುತ್ತೂರ ಬಿಡದ..
ನಮ್ಮೂರ ಜಾತ್ರೆಗೆ../
ನಮ್ಮೂರು ಮುತ್ತೂರು..
ನಮ್ಮ ಹೆತ್ತೂರು
ಬನ್ನಿರಿ ಬನ್ನಿರಿ
ಪುತ್ತೂರು ಜಾತ್ರೆಗೆ../
ಜಗದೊಡೆಯ ಶ್ರೀ
ಮಹಾಲಿಂಗೇಶ
ಪೊರೆವನು ನಮ್ಮ
ಅನವರತ ಜಗದೀಶ/
ಏನು ವೈಭವ ದೇವರ..
ಸವಾರಿಕಟ್ಟೆ ಪೂಜೆ/
ಕೆರೆ-ಉತ್ಸವ..ಬ್ರಹ್ಮರಥ..
ಆಹಹಾ ಬೆಡಿ ಅಬ್ಬರ/
ಬನ್ನಿರಿ ಬನ್ನಿರಿ
ನಮ್ಮೂರ ಜಾತ್ರೆಗೆ/
ಶಾಂತಿಯ ತವರೂರಿಗೆ..
ಸರ್ವಧರ್ಮ ಸಮಭಾವದ
ನಮ್ಮೂರಿಗೆ ಮುತ್ತೂರಿಗೆ.!!!

ಪ್ರತಿಭಾ-ಸೂಕ್ತಿ:
ರಾಷ್ಟ್ರವು ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಗಿಂತ ಶ್ರೇಷ್ಠ ಎಂಬುದನ್ನು ಅರಿತು ನಾವು ಬಾಳಬೇಕು..!!! -ಎ.ಪಿ.ಜೆ ಅಬ್ದುಲ್ ಕಲಾಂ.

ನುಡಿ-ರಂಗ:
ಹಬ್ಬವಿಲ್ಲದ ಮನೆಹುಬ್ಬಿಲ್ಲದ ಹಣೆ..ಎಂಬ ಮಾತಿದೆ. ನಮ್ಮ ದೇಶ ಹಬ್ಬ-ಹರಿದಿನ, ಜಾತ್ರೋತ್ಸವಗಳ ದೇಶ. ಹಬ್ಬ-ಹರಿದಿನ ಜಾತ್ರೆ-ಉತ್ಸವಗಳು ನಮ್ಮ ನಾಡ ಆಚಾರ-ವಿಚಾರ ಸಂಸ್ಕೃತಿಯಾಗಿದೆ. ಇದೀಗ ನಮ್ಮ ಪುತ್ತೂರಲ್ಲಿ ಹತ್ತೂರ ಒಡೆಯ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವರ ಜಾತ್ರಾಮಹೋತ್ಸವದ ಸಂಭ್ರಮ. ಎಪ್ರಿಲ್ ಒಂದು ಶನಿವಾರ, ಗೊನೆ ಮುಹೂರ್ತದೊಂದಿಗೆ ಉತ್ಸವಕ್ಕೆ ನಾಂದಿ ಹಾಡಲಾಗಿದೆ. ಎಪ್ರಿಲ್ ೧೦ ಸೋಮವಾರದಿಂದ-೨೦ ಗುರುವಾರ ತನಕ, ಪುತ್ತೂರು ಸೀಮೆಯ ಮನೆ-ಮನೆಗಳಲ್ಲಿ ಮನ-ಮನಗಳಲ್ಲಿ ಸಂಭ್ರಮವೋ ಸಂಭ್ರಮ. ಧ್ವಜಾರೋಹಣ.. ದೇವರ ಪೇಟೆ ಸವಾರಿ, ಕಟ್ಟೆ ಪೂಜೆ, ಕೆರೆ-ಉತ್ಸವ, ಬ್ರಹ್ಮರಥೋತ್ಸವ, ಬೆಡಿಪ್ರದರ್ಶನ, ಶ್ರೀ ದೇವರ ಆರಾಟ: ಅವಭೃತ ಸ್ನಾನ, ಧ್ವಜಾವರೋಹಣ, ದೈವಗಳ ನೇಮೋತ್ಸವಇತ್ಯಾದಿ ವೈದಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ಪುತ್ತೂರು ಜಾತ್ರೆ ಹತ್ತೂರ ಜನರನ್ನು ತನ್ನೆಡೆಗೆ ಸೆಳೆಯುತ್ತದೆ. ಮಕ್ಕಳಿಗಂತೂ.. ಸಂತೆ.. ತೊಟ್ಟಿಲು.. ಪೀ..ಪೀ..ಗಳ ಕನಸುಓಡಾಟ. ಅದಕ್ಕೇ ಹೇಳುವುದು ಹತ್ತೂರು ಕೊಟ್ಟರೂ ಪುತ್ತೂರು ಬಿಡೆವು ಎಂದು. ಬನ್ನಿ ನಾವೂ ಸಂಭ್ರಮಿಸೋಣ..ಜಗದೊಡೆಯನ ಕೃಪೆಗೆ ಪಾತ್ರರಾಗೋಣ.

ಕಾರ್ಟೂನ್ ರಂಗ

ನೋಡಿ ಮಕ್ಕಳೇ ನೀವು ಶೇ.೧೦೦ ಅಂಕ ಪಡೆದು ಯಶಸ್ಸು ಗಳಿಸಿ.ನಾವು ಪ್ರಜಾಪ್ರಭುತ್ವದ ಮಹಾಹಬ್ಬ ಕರ್ನಾಟಕ ವಿಧಾನಸಭಾ ಚುನಾವಣೆ-೨೩ರಲ್ಲಿ ಶೇ.೧೦೦ಮತದಾನ ಮಾಡಿ ದೇಶದ ಭವಿಷ್ಯ ರೂಪಿಸುತ್ತೇವೆ!!!

ಹನಿ-ರಂಗ..:
ರವಿ ಮೂಡಿದ.!!!
ರವಿ ಮೂಡಿದ್
ಬೆಳಕ ಹರಿಸಿದ.
ಸಂತಸ-ತಂದ..!!
ಹಕ್ಕಿಗಳ ಗಾಯನ್
ಸಂತಸವೋ-ಕಣ್ಮನ!!!

LEAVE A REPLY

Please enter your comment!
Please enter your name here